ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಗ್ಗಾವಿ | ಬಂಕಾಪುರದ ಖಾಸಗಿ ಆಸ್ಪತ್ರೆಗೆ ಬೀಗ

ಗರ್ಭಿಣಿ ಸಾವು: ಶಿಗ್ಗಾವಿ ತಹಶೀಲ್ದಾರ್ ಭೇಟಿ: ಜಿಲ್ಲಾ ಆರೋಗ್ಯಾಧಿಕಾರಿಗೆ ವರದಿ ಸಲ್ಲಿಕೆ
Published : 18 ಆಗಸ್ಟ್ 2024, 15:31 IST
Last Updated : 18 ಆಗಸ್ಟ್ 2024, 15:31 IST
ಫಾಲೋ ಮಾಡಿ
Comments

ಶಿಗ್ಗಾವಿ: ಚಿಕಿತ್ಸೆಗಾಗಿ ದಾಖಲಾಗಿದ್ದ ಗರ್ಭಿಣಿ ಸುಮಾ ಕಲ್ಮೇಶ ಹೊಳಿ (27) ಸಾವಿನ ಬೆನ್ನಲ್ಲೇ, ಬಂಕಾಪುರದಲ್ಲಿರುವ ಖಾಸಗಿ ಆಸ್ಪತ್ರೆಗೆ ತಾಲ್ಲೂಕು ಆಡಳಿತದ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ಬಂಕಾಪುರದ ಸುಂಕದಕೇರಿ ನಿವಾಸಿ ಬಸಪ್ಪ ಸುಂಕದ ಅವರ ಮಗಳಾಗಿದ್ದ ಸುಮಾ ಅವರನ್ನು ಶುಕ್ರವಾರ ಆಸ್ಪತ್ರೆಗೆ ಕರೆತರಲಾಗಿತ್ತು. ಸೂಕ್ತ ಚಿಕಿತ್ಸೆ ಸಿಗದಿದ್ದರಿಂದ ಅವರು ಮೃತಪಟ್ಟಿದ್ದಾಗಿ ಆರೋಪಿಸಿ ಸಂಬಂಧಿಕರು ಹಾಗೂ ಕುಟುಂಬಸ್ಥರು, ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದರು.

ಬಿಎಎಂಎಸ್ ಪದವೀಧರರಾದ ಪತಿ ಹಾಗೂ ಪತ್ನಿ ಆಸ್ಪತ್ರೆ ನಡೆಸುತ್ತಿದ್ದರು. ಅಕ್ರಮವಾಗಿ ಇಂಗ್ಲಿಷ್ ಮೆಡಿಷನ್ ಚಿಕಿತ್ಸೆ ನೀಡುತ್ತಿದ್ದರು. ಸುಮಾ ಅವರ ಸಂಬಂಧಿಕರು ಹಾಗೂ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಂತೆ, ಪತಿ– ಪತ್ನಿ ಶುಕ್ರವಾರವೇ ಪರಾರಿಯಾಗಿದ್ದಾರೆ.

ಪ್ರತಿಭಟನೆಯಿಂದ ಎಚ್ಚೆತ್ತ ಶಿಗ್ಗಾವಿ ತಹಶೀಲ್ದಾರ್ ಸಂತೋಷ ಹಿರೇಮಠ, ತಾಲ್ಲೂಕು ವೈದ್ಯಾಧಿಕಾರಿ ಜೊತೆಯಲ್ಲಿ ಶುಕ್ರವಾರ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿದರು.

ಆಸ್ಪತ್ರೆಯಲ್ಲಿದ್ದ ರೋಗಿಗಳು ಹಾಗೂ ಅವರಿಗೆ ನೀಡಿದ್ದ ಚಿಕಿತ್ಸಾ ಕ್ರಮಗಳ ದಾಖಲೆಗಳನ್ನು ಪರಿಶೀಲಿಸಿದರು. ಆಯುರ್ವೇದಿಕ್ ಮೆಡಿಷನ್ ವೈದ್ಯರಾಗಿದ್ದ ಪತಿ–ಪತ್ನಿ, ಇಂಗ್ಲಿಷ್ ಮೆಡಿಷನ್ ನೀಡುತ್ತಿದ್ದ ಸಂಗತಿ ಪರಿಶೀಲನೆಯಿಂದ ತಿಳಿಯಿತು. ಇದು ನಿಯಮ ಉಲ್ಲಂಘನೆಯಾಗಿದ್ದರಿಂದ, ಆಸ್ಪತ್ರೆಗೆ ಬೀಗ ಜಡಿದರು.

‘ಕೆಪಿಎಂಇ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ಆಸ್ಪತ್ರೆ ನಡೆಸುತ್ತಿದ್ದ ಬಗ್ಗೆ ದಾಖಲೆಗಳು ಸಿಕ್ಕಿವೆ. ಇದೇ ದಾಖಲೆ ಆಧರಿಸಿ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಗರ್ಭಿಣಿ ಸುಮಾ ಸಾವಿಗೆ ಕಾರಣವೇನು? ಎಂಬುದನ್ನು ತಿಳಿಯಲು ಜಿಲ್ಲಾ ಆರೋಗ್ಯಾಧಿಕಾರಿಗೆ ವರದಿ ಸಲ್ಲಿಸಲಾಗಿದೆ’ ಎಂದು ಸಂತೋಷ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಯುಡಿಆರ್ ದಾಖಲು: ಸುಮಾ ಅವರ ಸಾವಿನ ಸಂಬಂಧ ಸಹೋದರ ದೂರು ನೀಡಿದ್ದಾರೆ. ಅದರನ್ವಯ ಬಂಕಾಪುರ ಠಾಣೆಯಲ್ಲಿ ಯುಡಿಆರ್ (ಅಸಹಜ ಸಾವು) ದಾಖಲಾಗಿದೆ.

‘ಜಿಲ್ಲಾ ಆರೋಗ್ಯಾಧಿಕಾರಿಯವರು, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ತಜ್ಞರ ಸಮಿತಿ ಜೊತೆ ಪರಿಶೀಲಿಸಲಿದ್ದಾರೆ. ಬಳಿಕವೇ, ಸಾವಿಗೆ ಕಾರಣವೇನು ಎಂಬುದು ನಿಖರವಾಗಿ ತಿಳಿಯಲಿದೆ. ತಜ್ಞರ ಸಮಿತಿ ವರದಿ ಆಧರಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ತಲೆ ಸುತ್ತುತ್ತಿದ್ದರಿಂದ ಆಸ್ಪತ್ರೆಗೆ ದಾಖಲು‘ ‘ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಯಡಹಳ್ಳಿ ಗ್ರಾಮ ಕಲ್ಮೇಶ ಅವರನ್ನು ಮದುವೆಯಾಗಿದ್ದ ಸುಮಾ ಹೆರಿಗೆಗೆಂದು 15 ದಿನಗಳ ಹಿಂದೆಯಷ್ಟೇ ತವರು ಮನೆಯಾದ ಬಂಕಾಪುರಕ್ಕೆ ಬಂದಿದ್ದರು. ಆರಂಭದಲ್ಲಿ ಎರಡು ಬಾರಿ ಸರ್ಕಾರಿ ಆಸ್ಪತ್ರೆಗೂ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು’ ಎಂದು ಅಧಿಕಾರಿಯೊಬ್ಬರು ಹೇಳಿದರು. ‘ಸುಮಾ ಅವರ ತಲೆ ಶುಕ್ರವಾರ ಸುತ್ತುತ್ತಿತ್ತು. ಅವಾಗಲೇ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಇದೇ ಸಂದರ್ಭದಲ್ಲಿಯೇ ಸುಮಾ ಮೃತಪಟ್ಟಿರುವುದು ಪರಿಶೀಲನೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT