ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೆ.ಪಿ’ ಪ್ರೇರಣೆಯಿಂದ ರಾಜಕೀಯಕ್ಕೆ ಬಂದೆ; ಬಸವರಾಜ ಬೊಮ್ಮಾಯಿ ಮನದಾಳದ ಮಾತು

Last Updated 27 ಜುಲೈ 2021, 15:46 IST
ಅಕ್ಷರ ಗಾತ್ರ

ಶಿಗ್ಗಾವಿ: ಎಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡಿ, ಉದ್ಯಮಿಯಾಗಬೇಕು ಎಂಬ ಕನಸು ಕಂಡಿದ್ದೆ. ಆದರೆ, ಲೋಕ ನಾಯಕ ಜಯಪ್ರಕಾಶ ನಾರಾಯಣ (ಜೆಪಿ) ವಿಚಾರಧಾರೆಗಳ ಪ್ರಭಾವಕ್ಕೆ ಒಳಗಾಗಿ ದೇಶದ ಅಭಿವೃದ್ಧಿ ತುಡಿತ ಆರಂಭವಾಯಿತು. ಹೀಗಾಗಿ ರಾಜಕೀಯ ಕ್ಷೇತ್ರಕ್ಕೆ ಬಂದೆ...

ಇದು ರಾಜ್ಯದ ನೂತನ ಮುಖ್ಯಮಂತ್ರಿ ಎಂದು ಘೋಷಣೆಯಾಗಿರುವ ಬಸವರಾಜ ಬೊಮ್ಮಾಯಿ ಅವರ ಮನದಾಳದ ಮಾತು.ಈ ಹಿಂದೆ ‘ಪ್ರಜಾವಾಣಿ’ಯೊಂದಿಗೆ ಅವರು ತಾವು ನಡೆದು ಬಂದ ಹಾದಿಯ ನೆನಪುಗಳನ್ನು ಹಂಚಿಕೊಂಡಿದ್ದು ಹೀಗೆ.

ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಪುತ್ರನಾದರೂ ಸಹ ರಾಜಕೀಯಕ್ಕೆ ಬರುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ.ನಿರುದ್ಯೋಗ ಸಮಸ್ಯೆ ನಿರ್ಮೂಲನೆ, ಅಸಮಾನತೆ ನಿವಾರಣೆ, ಕೃಷಿ ಕ್ಷೇತ್ರದಲ್ಲಿ ಕ್ರಾಂತಿ, ರೈತರ ಅಭ್ಯುದಯ ಸೇರಿದಂತೆ ಹತ್ತಾರು ಕನಸುಗಳು ಹೋರಾಟಕ್ಕೆ ಸೆಳೆದವು. ಅದರಿಂದ ನಾಡಿನ ಜನತೆಗೆ ಕೊಡುಗೆ ನೀಡಬೇಕೆಂಬ ಕಾತರ ಹೆಚ್ಚಾಯಿತು. ಮುಖ್ಯಮಂತ್ರಿ ಮಗನಾಗಿ ಮಾತ್ರ ಉಳಿಯದೇ, ಜನರ ಸೇವೆ ಮಾಡಬೇಕು ಎಂದು ಸಂಕಲ್ಪ ತೊಟ್ಟೆ.

ನಾನು ಕಾಲೇಜಿನಲ್ಲಿ ಓದುತ್ತಿರುವಾಗಲೇ ಜೆ.ಪಿ ಅವರ ಕ್ರಾಂತಿಕಾರಕ ವಿಚಾರಗಳು ನನಗೆ ಪ್ರೇರಣೆ ನೀಡಿದವು. ಹೀಗಾಗಿ 1997ರಲ್ಲಿ ಧಾರವಾಡದ ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ಮೊದಲ ಬಾರಿಗೆ ಜನತಾದಳದಿಂದ ಅಭ್ಯರ್ಥಿಯಾಗಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಸಾಕಷ್ಟು ವಿರೋಧಗಳ ನಡುವೆ ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದೆ.

ಅಲ್ಲಿಂದ ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆಯುತ್ತಾ ಸಾಗಿದೆ. ಅಪ್ಪನ ನೆರಳಿನಲ್ಲಿ ಉಳಿಯದೇ ನನ್ನ ಕನಸುಗಳನ್ನು ನೆನಸಾಗಿಸುವ ತುಡಿತದಲ್ಲಿ ಮುನ್ನಡೆದೆ.

ಹ್ಯಾಟ್ರಿಕ್‌ ಗೆಲುವು:2008, 2014, 2018ರಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹ್ಯಾಟ್ರಿಕ್‌ ಗೆಲುವು ಸಾಧಿಸುವ ಮೂಲಕ ‘ಸೋಲಿಲ್ಲದ ಸರದಾರ’ ಎನಿಸಿಕೊಂಡಿದ್ದಾರೆ. ವಿಧಾನಸಭೆ ಸದಸ್ಯರಾಗಿ, ಜಲಸಂಪನ್ಮೂಲ ಸಚಿವರಾಗಿ, ನಂತರ ಗೃಹ ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

‘ಕ್ಷೇತ್ರದ ಜನತೆ ಒಂದು ಮತ ಹಾಕಿ ಶಾಸಕರನ್ನಾಗಿ ಮಾಡಿರಿ ಎಂದು ಮನವಿ ಮಾಡಿದರೆ ಸಚಿವರನ್ನಾಗಿ ಮಾಡಿದ್ದಾರೆ. ಶಿಗ್ಗಾವಿ-ಸವಣೂರ ಕ್ಷೇತ್ರದ ಜನತೆಗೆ ಎಂದೆಂದಿಗೂ ಋಣಿಯಾಗಿರುತ್ತೇನೆ’ ಎಂದು ಬಸವರಾಜ ಬೊಮ್ಮಾಯಿ ಅವರು ಸದಾ ಹೇಳುವ ಮಾತು.

ಉತ್ತರ ಕರ್ನಾಟಕಕ್ಕಾದ ಅನ್ಯಾಯ ಮತ್ತು ಅಸಮಾನತೆ ವಿರುದ್ಧ ಹೋರಾಟ, ಬರ ನಿರ್ಮೂಲನೆಗೆ ಹೊಸ ಆಯಾಮ, ನೀರಾವರಿ ಯೋಜನೆಯಲ್ಲಿ ಕ್ರಾಂತಿ, ಕಳಸಾ ಬಂಡೂರಿ ಯೋಜನೆಗೆ ಮೊದಲು ಧ್ವನಿ ಎತ್ತಿದವರು ಬಸವರಾಜ ಬೊಮ್ಮಾಯಿ.

‘ಬಿಜೆಪಿಗೆ ಬರಲು ಉದಾಸಿ ಕಾರಣ’

‘ಆಗ ನಾನು ಜನತಾ ಪರಿವಾರದಲ್ಲಿ ಇದ್ದೆ. ಸಿ.ಎಂ. ಉದಾಸಿ ಅವರು ಒಂದು ದಿನ ನನ್ನನ್ನು ಹಾನಗಲ್ಲಿಗೆ ಕರೆಯಿಸಿಕೊಂಡರು. ಅಂದು ಅವರ ಹುಟ್ಟುಹಬ್ಬ. ಇಡೀ ದಿನ ಅವರು ನನ್ನನ್ನು ತಮ್ಮ ಜೊತೆ ಇರಿಸಿಕೊಂಡಿದ್ದರು. ಮರುದಿನ ಬೆಂಗಳೂರಿಗೆ ಕರೆದುಕೊಂಡು ಹೋದರು. ಬಿಜೆಪಿ ರಾಷ್ಟ್ರೀಯ ಮುಖಂಡ ರಾಜನಾಥ್ ಸಿಂಗ್ ಹಾಗೂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿಸಿದರು.‌ ಭಾರತೀಯ ಜನತಾ ಪಕ್ಷ ಸೇರುವಂತೆ ಸಲಹೆ ನೀಡಿದರು’ ಎಂದು ಬಸವರಾಜ ಬೊಮ್ಮಾಯಿ ನೆನಪು ಹಚಿಕೊಂಡಿದ್ದರು.

ಆದರೆ, ಆಗ ಬಿಜೆಪಿ ಸೇರಲು ಮಾನಸಿಕವಾಗಿ ನಾನು ಸಿದ್ಧವಿರಲಿಲ್ಲ. ಆದರೂ, ಬಿಜೆಪಿಗೆ ಬರುವಂತೆ ನನ್ನ ಮನ ಒಲಿಸಿದರು. ಹೀಗಾಗಿ ನಾನು ಬಿಜೆಪಿಗೆ ಬರಲು ಸಿ.ಎಂ. ಉದಾಸಿ ಅವರೇ ಕಾರಣೀಭೂತ ವ್ಯಕ್ತಿ. ನನ್ನ ತಂದೆ ಎಸ್.ಆರ್. ಬೊಮ್ಮಾಯಿ ಅವರು ತೀರಿಕೊಂಡ ನಂತರ ಸಿ.ಎಂ. ಉದಾಸಿ ಅವರೇ ನನಗೆ ‘ಗಾಡ್ ಫಾದರ್’ ಆದರು ಎಂದು ಬೊಮ್ಮಾಯಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT