ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಸಂಪುಟ: ‘ಕೌರವ’ನಿಗೆ ಮತ್ತೊಮ್ಮೆ ಮಂತ್ರಿ ಭಾಗ್ಯ

ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಸಿ.ಪಾಟೀಲ
Last Updated 4 ಆಗಸ್ಟ್ 2021, 13:36 IST
ಅಕ್ಷರ ಗಾತ್ರ

ಹಾವೇರಿ: ‘ಸರ್ವಜ್ಞನ ನಾಡು’ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ (ಬಸನಗೌಡ ಚನ್ನಬಸನಗೌಡ ಪಾಟೀಲ) ಅವರು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಎರಡನೇ ಬಾರಿ ಮಂತ್ರಿ ಗದ್ದುಗೆಯನ್ನು ಏರಿದ್ದಾರೆ.

ಕೊನೆಯ ದಿನದವರೆಗೂ ಸಚಿವ ಸ್ಥಾನ ಸಿಗುವ ಬಗ್ಗೆ ಅತ್ಯಂತ ವಿಶ್ವಾಸದಲ್ಲಿದ್ದ ಬಿ.ಸಿ. ಪಾಟೀಲರಿಗೆ ನಿರೀಕ್ಷೆಯಂತೆ ಸಚಿವ ಸ್ಥಾನ ದೊರೆತಿದೆ.ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಒಂದೂವರೆ ವರ್ಷ ಉತ್ತಮ ಆಡಳಿತ ನೀಡಿದ ಕಾರಣ ‘ಮಂತ್ರಿ ಭಾಗ್ಯ’ ಸಿಕ್ಕಿದೆ ಎಂಬುದು ಬೆಂಬಲಿಗರ ಅನಿಸಿಕೆ.

ಬಿಎಸ್‌ವೈ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಗೆ ‘ತ್ರಿವಳಿ ಸಚಿವರ ಭಾಗ್ಯ’ ಸಿಕ್ಕಿತ್ತು. ಈ ಬಾರಿ ಜಿಲ್ಲೆಯವರೇ ಮುಖ್ಯಮಂತ್ರಿಯಾಗಿರುವ ಜತೆಗೆ ಒಂದು ಸಚಿವ ಸ್ಥಾನವೂ ದಕ್ಕಿದೆ. ತೋಟಗಾರಿಕೆ ಸಚಿವರಾಗಿದ್ದ ಆರ್‌.ಶಂಕರ್‌ ಅವರಿಗೆ ಸಚಿವ ಸ್ಥಾನ ಕೈತಪ್ಪಿದರೆ, ಪ್ರಬಲ ಆಕಾಂಕ್ಷಿಯಾಗಿದ್ದ ನೆಹರು ಓಲೇಕಾರ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ.

ಮಿನಿಸ್ಟರ್‌ ಆದ ಇನ್‌ಸ್ಪೆಕ್ಟರ್‌:ಪೊಲೀಸ್‌ ಇಲಾಖೆಯಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಮತ್ತು ಇನ್‌ಸ್ಪೆಕ್ಟರ್‌ ಆಗಿದ್ದ ಬಿ.ಸಿ.ಪಾಟೀಲ ಅವರು ಮಿನಿಸ್ಟರ್‌ ಹುದ್ದೆಯವರೆಗೆ ನಡೆದು ಬಂದ ಹಾದಿ ವರ್ಣರಂಜಿತವಾಗಿದೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಯಲಿವಾಳ ಗ್ರಾಮದಲ್ಲಿ 1956ರ ನವೆಂಬರ್‌ 14ರಂದು ಕೃಷಿಕ ಕುಟುಂಬದಲ್ಲಿ ಚನ್ನಬಸನಗೌಡ ಮತ್ತು ಶಿವಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಯಲಿವಾಳ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ನಂತರ 1977ರಲ್ಲಿ ದಾವಣಗೆರೆಯಲ್ಲಿ ಬಿ.ಎ.ಪದವಿ ಪಡೆದರು.

ಬಾಲ್ಯದಿಂದಲೂ ಪೊಲೀಸ್‌ ಆಗಬೇಕು ಎಂದು ಕನಸು ಕಂಡಿದ್ದ ಬಿ.ಸಿ.ಪಾಟೀಲರು, 1979ರಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಆಗುವ ಮೂಲಕ ಕನಸನ್ನು ನನಸು ಮಾಡಿಕೊಂಡರು. ಬಳ್ಳಾರಿ, ಹಿರಿಯೂರು ಮತ್ತು ದಾವಣಗೆರೆಯಲ್ಲಿ ಕೆಲಕಾಲ ಕರ್ತವ್ಯ ನಿರ್ವಹಿಸಿ, ನಂತರ ಇನ್‌ಸ್ಪೆಕ್ಟರ್‌ ಆಗಿ ಬಡ್ತಿ ಪಡೆದು ಬೆಂಗಳೂರಿಗೆ ವರ್ಗಾವಣೆಗೊಂಡರು.

ಶಾಸಕನಾಗಿ ಆಯ್ಕೆ:2003ರಲ್ಲಿ ಪೊಲೀಸ್ ಇಲಾಖೆಗೆ ಗುಡ್‌ಬೈ ಹೇಳಿ, ರೈತಪರ ಹೋರಾಟಕ್ಕೆ ಧುಮುಕಿದರು. ಹೋರಾಟದ ಸಂದರ್ಭ 9 ದಿನ ಜೈಲುವಾಸವನ್ನೂ ಅನುಭವಿಸಿದರು. ಆನಂತರ, ಸಂಯುಕ್ತ ಜನತಾದಳದ ಮೂಲಕ ರಾಜಕೀಯ ರಂಗ ಪ್ರವೇಶಿಸಿದರು. 2004ರಲ್ಲಿ ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು.

2008ರಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಹಿರೇಕೆರೂರು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದರು. 2013ರ ಚುನಾವಣೆಯಲ್ಲಿ ಸೋಲಿನ ರುಚಿ ಕಂಡರು. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ‘ಅನರ್ಹ ಶಾಸಕ’ ಹಣೆಪಟ್ಟಿ ಹೊತ್ತುಕೊಂಡು ಕೆಲ ತಿಂಗಳು ಅಜ್ಞಾತವಾಸವನ್ನೂ ಅನುಭವಿಸಿದರು.

ಭರ್ಜರಿ ಗೆಲುವು:2019ರ ಡಿಸೆಂಬರ್‌ನಲ್ಲಿ ನಡೆದ ಹಿರೇಕೆರೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ‘ಜೋಡೆತ್ತು’ ಎಂದು ಕರೆಸಿಕೊಂಡ ಯು.ಬಿ.ಬಣಕಾರ ಅವರು ಬಿ.ಸಿ.ಪಾಟೀಲರನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.

ಪತ್ನಿ ವನಜಾ ಮತ್ತು ಪುತ್ರಿಯರಾದ ಸೌಮ್ಯ, ಸೃಷ್ಟಿ ಹಾಗೂ ಅಳಿಯರೊಂದಿಗೆ ಹಿರೇಕೆರೂರು ಪಟ್ಟಣದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. 65 ವರ್ಷದ ಬಿ.ಸಿ.ಪಾಟೀಲರು ಪೊಲೀಸ್‌ ಅಧಿಕಾರಿ, ಚಿತ್ರನಟ, ನಿರ್ದೇಶಕ, ಚಿತ್ರ ನಿರ್ಮಾಪಕ, ನಾಲ್ಕು ಬಾರಿ ಶಾಸಕ... ಹೀಗೆ ವಿವಿಧ ಪಾತ್ರಗಳ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಕುಟುಂಬ ಸದಸ್ಯರೊಂದಿಗೆ ಬಿ.ಸಿ. ಪಾಟೀಲ ಅವರ ಸಂತಸದ ಕ್ಷಣ (ಸಂಗ್ರಹ ಚಿತ್ರ)
ಕುಟುಂಬ ಸದಸ್ಯರೊಂದಿಗೆ ಬಿ.ಸಿ. ಪಾಟೀಲ ಅವರ ಸಂತಸದ ಕ್ಷಣ (ಸಂಗ್ರಹ ಚಿತ್ರ)

ಚಂದನವನದ ‘ದಳವಾಯಿ’

ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದ ಬಿ.ಸಿ.ಪಾಟೀಲರಿಗೆ ಬಾಲ್ಯದಿಂದಲೂ ಬಣ್ಣದ ಗೀಳಿತ್ತು. ನಂತರ 1993ರಲ್ಲಿ ಚಂದನವನವನ್ನು ಪ್ರವೇಶಿಸಿ, ‘ನಿಷ್ಕರ್ಷ’ ಚಿತ್ರವನ್ನು ನಿರ್ಮಾಣ ಮಾಡಿ, ಕಲಾವಿದನಾಗಿ ಪಾತ್ರವನ್ನೂ ಮಾಡಿದರು. ಮೊದಲ ಚಿತ್ರ ಸೂಪರ್‌ ಹಿಟ್‌ ಆಯಿತು.

ಕರ್ಫ್ಯೂ, ಶಾಪ, ಸೂರ್ಯ ಐಪಿಎಸ್‌, ಜೋಗುಳ, ಪ್ರೇಮಾಚಾರಿ, ಕುಟುಂಬ, ಜೈಹಿಂದ್‌, ದಳವಾಯಿ, ಕೌರವ, ಶಿವಪ್ಪನಾಯಕ, ಹತ್ತೂರ ಒಡೆಯ, ಲಂಕೇಶ, ಸೆಲ್ಯೂಟ್‌, ಪುಂಗಿದಾಸ, ಶ್ರೀಗುರು ತಿಪ್ಪೇರುದ್ರಸ್ವಾಮಿ ಸೇರಿದಂತೆ ಸುಮಾರು 40 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 14 ಚಿತ್ರಗಳ ನಿರ್ಮಾಣ ಮತ್ತು 5 ಚಿತ್ರಗಳ ನಿರ್ದೇಶನ ಮಾಡಿದ್ದಾರೆ. ‘ಕೌರವ’ ಚಿತ್ರ ಇವರಿಗೆ ದೊಡ್ಡ ಹೆಸರು ತಂದುಕೊಟ್ಟಿತು.

ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿ ಮತ್ತು ಮತದಾರರ ಋಣ ತೀರಿಸಲು ಶ್ರಮಿಸುತ್ತೇನೆ
– ಬಿ.ಸಿ.ಪಾಟೀಲ, ನೂತನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT