ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂಜಿಗಲ್ಲಿನಂತೆ ಸೆಳೆದ ಬೇಂದ್ರೆ ಕಾವ್ಯ’

Last Updated 26 ನವೆಂಬರ್ 2022, 14:19 IST
ಅಕ್ಷರ ಗಾತ್ರ

ಹಾವೇರಿ: ‘ಜಗದಕವಿ, ಯುಗದ ಕವಿ, ಶಬ್ದ ಗಾರುಡಿಗ, ಅಂಬಿಕಾತನಯ ಎನಿಸಿಕೊಳ್ಳುವ ಬೇಂದ್ರೆ ಜನವಾಣಿಯನ್ನೇ ತಮ್ಮ ಕಾವ್ಯದ ಸೊಬಗಿನಲ್ಲಿ ಬೆಳೆಸಿಕೊಂಡವರು ಹಾಗೂ ಕಾವ್ಯ ಶಕ್ತಿಯಿಂದ ಇಡೀ ವಿಶ್ವವನ್ನೇ ಸೆಳೆಯಬಹುದು ಎಂಬುದಕ್ಕೆ ಬೇಂದ್ರೆಯವರ ಕಾವ್ಯಗಳು ಸಾಕ್ಷಿಯಾಗಿವೆ’ ಎಂದು ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅಭಿಪ್ರಾಯಪಟ್ಟರು.

ನಗರದಕೆ.ಎಲ್.ಇ ಸಂಸ್ಥೆಯ ಜಿ.ಎಚ್. ಮಹಾವಿದ್ಯಾಲಯ, ಸಾಹಿತ್ಯ ಸಂಘ ಮತ್ತು ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ ಸಹಯೋಗದಲ್ಲಿ ಐಕ್ಯೂಎಸಿ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಬೇಂದ್ರೆ ಕಾವ್ಯಾನುಭವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನರಬಲಿ ಕವನದಲ್ಲಿ ರಾಜದ್ರೋಹದ ಅಂಶಗಳಿವೆ ಎಂದುಬ್ರಿಟಿಷರು ಅಪಾದಿಸಿ, ಬೇಂದ್ರೆಯವರನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಮೂರು ತಿಂಗಳು ಬಂಧನದಲ್ಲಿಡಲಾಗುತ್ತದೆ. ಬೇಂದ್ರೆ ಬೆಂದು ಬೇಂದ್ರೆಯಾದರು ಎಂದರು.

ಧಾರವಾಡದ ಡಾ.ಶ್ರೀಧರ ಹೆಗಡೆ ಭದ್ರನ್ ಅವರು ‘ಬೇಂದ್ರೆ ಕಂಡ ನಿಸರ್ಗ’ ವಿಷಯದ ಕುರಿತು ನೀಡಿದ ವಿಶೇಷ ಉಪನ್ಯಾಸದಲ್ಲಿ ಬೇಂದ್ರೆಯವರು ತಮ್ಮ ಕಾವ್ಯಗಳಲ್ಲಿ ನಿಸರ್ಗದ ಅಂಶಗಳನ್ನು ಹಾಸುಹೊಕ್ಕಾಗಿ ಬಳಸಿ, ಕಾವ್ಯದ ರಸ ನದಿಯನ್ನು ಹರಿಸಿದ್ದಾರೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಸಂಧ್ಯಾ ಆರ್.ಕುಲಕರ್ಣಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಬೇಂದ್ರೆಯವರ ಕಾವ್ಯದ ಸಾರದೊಂದಿಗೆ ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಕನ್ನಡ ನಾಡು ನುಡಿಯ ಅಭಿಮಾನವನ್ನು ಹೊಂದಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಲಾವಿದ ಅನಂತ ದೇಶಪಾಂಡೆಯವರು ಬೇಂದ್ರೆಯವರ ತದ್ರೂಪದಂತೆ ಅಭಿನಯ ಮಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಪ್ರೊ.ಶಮಂತಕುಮಾರ ಕೆ.ಎಸ್. ಸ್ವಾಗತಿಸಿದರು, ಪ್ರೊ.ಹೇಮಂತ ಸಿ.ಎನ್. ಮತ್ತು ಪ್ರೊ. ಸಿದ್ದೇಶ್ವರ ಹುಣಸಿಕಟ್ಟಿಮಠ ಪರಿಚಯಿಸಿದರು. ಪ್ರೊ.ಶ್ರೀದೇವಿ ದೊಡ್ಡಮನಿ ನಿರೂಪಿಸಿದರು. ಡಾ. ಸಂಜೀವ ಆರ್. ನಾಯಕ ವಂದಿಸಿದರು.

ಕಾರ್ಯಕ್ರಮದ ಸಂಚಾಲಕರಾಗಿ ಡಾ.ಸಂಜೀವ ಆರ್. ನಾಯಕ ಮತ್ತು ಪ್ರೊ ರೂಪಾ ಕೋರೆ, ಡಾ.ಎಲ್.ಸಿ.ಕುಲಕರ್ಣಿ, ಡಾ.ಶಶಿಕಲಾ, ಡಾ.ರಾಜೇಶ್ವರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT