ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಸಾಮೂಹಿಕ ಅತ್ಯಾಚಾರ ಪ್ರಕರಣ: ಸಿಬಿಐ ತನಿಖೆಗೆ ಬಿ.ಸಿ.ಪಾಟೀಲ ಆಗ್ರಹ

Published 13 ಜನವರಿ 2024, 15:20 IST
Last Updated 13 ಜನವರಿ 2024, 15:20 IST
ಅಕ್ಷರ ಗಾತ್ರ

ಹಾವೇರಿ: ‘ಹಾನಗಲ್‌ ಪೊಲೀಸರ ಕಾರ್ಯವೈಖರಿ ಬಗ್ಗೆ ನಮಗೆ ವಿಶ್ವಾಸವಿಲ್ಲ. ಹೀಗಾಗಿ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಕೂಡಲೇ ಹಾನಗಲ್‌ ಇನ್‌ಸ್ಪೆಕ್ಟರ್ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಅವರನ್ನು ಅಮಾನತು ಮಾಡಬೇಕು’ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಒತ್ತಾಯಿಸಿದರು. 

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂತ್ರಸ್ತೆಗೆ ನ್ಯಾಯ ಕೊಡಿಸುವ ಬದಲಾಗಿ, ಕಾಂಗ್ರೆಸ್‌ ನಾಯಕರು ಮುಸ್ಲಿಮರ ಓಲೈಕೆಗೆ ಮುಂದಾಗಿದ್ದಾರೆ. ರಾಜ್ಯ, ದೇಶ ಹಾಳಾದರೂ ಪರವಾಗಿಲ್ಲ, ಇವರಿಗೆ ಓಟ್‌ ಬ್ಯಾಂಕ್‌ ರಾಜಕಾರಣವೇ ಮುಖ್ಯವಾಗಿದೆ. ಗುಪ್ತಚರ ಇಲಾಖೆ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಬದುಕಿದೆಯೋ? ಸತ್ತಿದೆಯೋ ತಿಳಿಯುತ್ತಿಲ್ಲ ಎಂದು ಆರೋಪಿಸಿದರು. 

ಬಾಯಿ ಬಿಡದ ಕಾಂಗ್ರೆಸ್‌ ನಾಯಕರು: ಹಾನಗಲ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಬಗ್ಗೆ ಕಾಂಗ್ರೆಸ್‌ ನಾಯಕರು ತುಟಿ ಬಿಚ್ಚುತ್ತಿಲ್ಲ. ನೈತಿಕ ಪೊಲೀಸ್‌ಗಿರಿ ಹತ್ತಿಕ್ಕುತ್ತೇವೆ ಎಂದು ರೋಷಾವೇಷದಿಂದ ಮಾತನಾಡುವ ಸಿಎಂ ಸಿದ್ದರಾಮಯ್ಯ ಕೂಡ ಬಾಯಿ ಬಿಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಇದುವರೆಗೂ ಸಂತ್ರಸ್ತೆಯನ್ನು ಭೇಟಿ ಮಾಡಿ, ಸಾಂತ್ವನ ಹೇಳಿ, ಪರಿಹಾರ ನೀಡಿಲ್ಲ’ ಎಂದು ಮಾಜಿ ದೂರಿದರು. 

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್‌, ರುದ್ರೇಶ ಚಿನ್ನಣ್ಣನವರ, ಶಶಿಧರ ಹೊಸಳ್ಳಿ ಇದ್ದರು. 

ಅಕ್ರಮ ಚಟುವಟಿಕೆ ಅವ್ಯಾಹತ: ಆರೋಪ

‘ರಾಜ್ಯದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ, ಜೂಜು, ಮಟ್ಕಾ ಮುಂತಾದ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಪೋಕ್ಸೊ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಹಾನಗಲ್‌ ತಾಲ್ಲೂಕಿನಲ್ಲಿ 3 ತಿಂಗಳಲ್ಲಿ ಮಹಿಳೆಯರ ಮೇಲೆ ನಾಲ್ಕು ದೌರ್ಜನ್ಯ ಪ್ರಕರಣಗಳು ನಡೆದಿವೆ. ಯುವತಿಯರ ಅಪಹರಣ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ’ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ  ಆಪಾದಿಸಿದರು. 

ಠಾಣೆಗಳಲ್ಲಿ ಎಫ್‌.ಐ.ಆರ್‌. ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸರು ರಾಜಿ, ಪಂಚಾಯಿತಿ ಮಾಡುವಲ್ಲಿ ನಿರತರಾಗಿದ್ದಾರೆ. ಆರೋಪಿಗಳಿಗೆ ಕುಮ್ಮಕ್ಕು ನೀಡುವುದನ್ನು ಬಿಟ್ಟು, ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. 

ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಪಿ.ಎಫ್‌.ಐ ಸಂಘಟನೆಯ ಜೊತೆ ನಂಟು ಇರುವ ಬಗ್ಗೆ ಶಂಕೆಯಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.
– ಬಿ.ಸಿ.ಪಾಟೀಲ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT