ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಣೆಬೆನ್ನೂರು | ತಹಶೀಲ್ದಾರ್‌ ಕಚೇರಿ; ಅವ್ಯವಸ್ಥೆ ಆಗರ

ರಾಣೆಬೆನ್ನೂರು ತಾಲ್ಲೂಕು ಜನರ ಗೋಳು; ಮನವಿ ಸಲ್ಲಿಸಿದರೂ ಬಗೆಯರಿಯದ ಸಮಸ್ಯೆ
Published 4 ಆಗಸ್ಟ್ 2024, 4:55 IST
Last Updated 4 ಆಗಸ್ಟ್ 2024, 4:55 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಇಲ್ಲಿಯ ತಹಶೀಲ್ದಾರ ಕಚೇರಿ ಅವ್ಯವಸ್ಥೆಯ ಆಗರವಾಗಿದೆ. ಮೂಲ ಸೌಲಭ್ಯಗಳಿಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ರೈತರು ಹಾಗೂ ಉದ್ದಿಮೆದಾರರು, ತಹಶೀಲ್ದಾರ ಕಚೇರಿಗೆ ಜಮೀನು ನೋಂದಣಿ, ಪಹಣಿ ಪತ್ರ ಸೇರಿದಂತೆ ಇತರೆ ದಾಖಲೆಗಳನ್ನು ಪಡೆಯಲು ಬಂದು ಹೋಗುತ್ತಿದ್ದಾರೆ. ಕಚೇರಿಯ ಅವ್ಯವಸ್ಥೆಯನ್ನು ಕಂಡು ಮೂಗು ಮುರಿಯುವಂತಾಗಿದೆ. ಆವರಣದಲ್ಲಿನ ಉದ್ಯಾನ ಹಾಳಾಗಿದ್ದು, ಗೋಡೆಗಳಿಗೆ ಸುಣ್ಣ ಬಣ್ಣ ಇಲ್ಲ. ಇದರಿಂದ ಕಚೇರಿಯ ಸೌಂದರ್ಯ ಹಾಳು ಬಿದ್ದಂತಾಗಿದೆ.

ಸಾರ್ವಜನಿಕರ ಸಮಸ್ಯೆಗಳಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ರಾಣೆಬೆನ್ನೂರು ತಹಶೀಲ್ದಾರ್‌, ರಟ್ಟೀಹಳ್ಳಿಗೆ ಹೆಚ್ಚುವರಿ ನಿರ್ವಹಣೆ ಮಾಡುತ್ತಿದ್ದಾರೆ. ಸಣ್ಣ ಪುಟ್ಟ ಕೆಲಸಕ್ಕೆ ಜನತೆ ಕಚೇರಿಗೆ ಅಲೆದಾಡುವಂತಾಗಿದೆ ಎಂದು ಹೊಟೇಲ್‌ ಮಾಲೀಕರ ಸಂಘದ ಮುಖಂಡ ನಿತ್ಯಾನಂದ ಕುಂದಾಪುರ ದೂರಿದರು.

ಸ್ವಾತಂತ್ರ್ಯ ಯೋಧ ಮೆಣಸಿನಹಾಳ ತಿಮ್ಮನಗೌಡ್ರ ಪ್ರತಿಮೆ ಅಕ್ಕ–ಪಕ್ಕದಲ್ಲಿ ಗಿಡಗಳು ಚಾಚಿಕೊಂಡಿವೆ. ಪ್ರತಿಮೆ ಎದುರು ಸಾರ್ವಜನಿಕರು ಅಡ್ಡಾದಿಡ್ಡಿ ವಾಹನಗಳನ್ನು ಎಲ್ಲಿ ಬೇಕಲ್ಲಿ ನಿಲ್ಲಿಸುತ್ತಾರೆ. ಕಚೇರಿ ಒಳಗೆ ಹೋಗಲು ಬರಲು ತೊಂದರೆಯಾಗಿದೆ. ಸಂಚಾರಿ ಠಾಣೆ ಬಳಿ ಇರುವ ಗೇಟ್‌ ಮುಂದೆಯೇ ಜನರು ಹಗಲು ಹೊತ್ತಿನಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಈ ಭಾಗದಲ್ಲಿ ಗಲೀಜು ಹೆಚ್ಚಾಗಿದೆ.

ಕಚೇರಿ ಆವರಣದ ಗಿಡಗಂಟಿಗಳನ್ನು ತೆಗೆಸಿ ಸ್ವಚ್ಛತೆ ಆಸನ ವ್ಯವಸ್ಥೆ ಮಾಡಲಾಗುವುದು. ಶೌಚಾಲಯ ದುರಸ್ತಿಗೊಳಿಸಲಾಗುವುದು. ಸಾರ್ವಜನಿಕರು ಸಹ ಸಹಕಾರ ನೀಡಬೇಕು. ಎಲ್ಲೆಂದರಲ್ಲಿ ಉಗುಳಿ ಗಲೀಜು ಮಾಡಬಾರದು.
ಎಸ್‌.ಆರ್‌. ಸಿದ್ದನಗೌಡ್ರ ಗ್ರೇಡ್‌-1 ತಹಶೀಲ್ದಾರ್‌

ಪುರುಷರ ಶೌಚಾಲಯದ ಸಮೀಪದಲ್ಲಿಯೇ ಇರುವ ಕೊಠಡಿಯ ಹಿಂಭಾಗದ ಕಿಟಕಿ ಬಳಿ ಪಹಣಿ ಮತ್ತು ಇತರೆ ದಾಖಲೆಗಳನ್ನು ಪಡೆಯಬೇಕು. ನೀರಿಲ್ಲದೇ ಶೌಚಾಲಯ ಕೆಟ್ಟ ವಾಸನೆ ಬೀರುತ್ತಿದೆ. ಈ ಸಮಸ್ಯೆ ಅನೇಕ ವರ್ಷಗಳಿಂದ ಇದ್ದು, ಪರಿಹಾರ ಮಾತ್ರ ಲಭಿಸುತ್ತಿಲ್ಲ.

ಅಧಿಕಾರಿಗಳ ಕಚೇರಿಯಲ್ಲಿ ಹಗಲು ಹೊತ್ತಿನಲ್ಲಿಯೇ ಸೊಳ್ಳೆಗಳು ಕಚ್ಚುತ್ತವೆ. ಎಲ್ಲಿ ಬೇಕಲ್ಲಿ ಗುಟ್ಕಾ, ಅಡಿಕೆ–ಎಲೆ ತಿಂದು ಉಗುಳುತ್ತಾರೆ. ಕಚೇರಿ ಕೆಲಸಕ್ಕೆ ಬಂದ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಹಾಗೂ ಕೂರಲು ಆಸನ ವ್ಯವಸ್ಥೆ ಇಲ್ಲ.

ವಯೋವೃದ್ದರು, ಮಹಿಳೆಯರು ಮಕ್ಕಳನ್ನು ಕಟ್ಟಿಕೊಂಡು ಬಂದು ನೆಲದಲ್ಲಿಯೇ ಕುಳಿತುಕೊಳ್ಳುತ್ತಿದ್ದಾರೆ. ಮಹಿಳೆಯರು ಮತ್ತು ಪುರುಷರಿಗೆ ಶೌಚಾಲಯಗಳು ಇದ್ದು ಇಲ್ಲದಂತಾಗಿವೆ. ನೀರಿಲ್ಲದೇ ಗಬ್ಬು ನಾರುತ್ತಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಚೇರಿ ಮುಂದುಗಡೆ ಉದ್ಯಾನವನವಿದ್ದು, ಕುರ್ಚಿಗಳು ಮುರಿದು ಬಿದ್ದಿವೆ. ದೇವಸ್ಥಾನದ ಸುತ್ತಲೂ ಅಲ್ಲಿನ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಗುಳಿ ಗಲೀಜು ಮಾಡುತ್ತಿದ್ದಾರೆ.

ಪಡಿತರ ಚೀಟಿ ತಿದ್ದುಪಡಿ ಹಾಗೂ ಮತದಾರರ ಚೀಟಿ ಮಾಡಿಸಲು ಆಗಮಿಸುವ ಅಂಗವಿಕಲರು, ಮಹಿಳೆಯರು, ಹಿರಿಯ ನಾಗರಿಕರು ಆಸನ ಇಲ್ಲದೇ ಪರದಾಡುವಂತಾಗಿದೆ.

ಕಚೇರಿ ಹಿಂಭಾಗದ ಗೇಟ್‌ ಕಳೆದ ಹತ್ತಾರು ವರ್ಷಗಳಿಂದ ಮುರಿದು ಬಿದ್ದಿದೆ. ಸಾರ್ವಜನಿಕರು ರಾತ್ರಿ ಹೊತ್ತು ಗಲೀಜು ಮಾಡುತ್ತಾರೆ. ಇಲ್ಲಿನ ಕೆಲ ಸಿಬ್ಬಂದಿಯೇ ಅಡಿಕೆ–ಎಲೆ, ಗುಟ್ಕಾ ಜಗಿದು ತಮ್ಮ ಕೊಠಡಿ ಕಿಟಕಿಯಲ್ಲಿ ಉಗುಳಿ ಕಿಟಕಿ ಅಂದಗೆಡಿಸಿದ್ದಾರೆ ಎಂದು ಗೋಪಿ ಕುಂದಾಪುರ, ಎಲ್ಲಪ್ಪ ಚಿಕ್ಕಣ್ಣನವರ, ರವಿ ಲಮಾಣಿ ಹೇಳಿದರು.

ಜನರಿಗೆ ನಿಗದಿತ ಅವಧಿಯಲ್ಲಿ ಕೆಲಸಗಳನ್ನು ಮಾಡಿಕೊಡುವುದನ್ನು ಬಿಟ್ಟು ಇಲಾಖೆಯಲ್ಲಿ ಸಮಸ್ಯೆಗಳನ್ನೇ ಮುಂದೆ ಮಾಡಿ ಕೆಲಸದಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಕಚೇರಿಗೆ ಕಾಯಂ ತಹಶೀಲ್ದಾರ ಅವರನ್ನು ನೇಮಿಸಬೇಕು. ಅಲ್ಲಿನ ಸಿಬ್ಬಂದಿಗೆ ಬಯೋ ಮೆಟ್ರಿಕ್‌ ಅಳವಡಿಸಬೇಕು ಎಂದು ನದೀಹರಳಳ್ಳಿಯ ಶಿವಕುಮಾರ ಜಾಧವ, ತುಮ್ಮಿನಕಟ್ಟಿಯ ಸಿದ್ದಾರೂಢ ಗುರುಂ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT