ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ವಿತರಿಸಿದ ಸಿಎಂ

Last Updated 5 ಮಾರ್ಚ್ 2022, 14:42 IST
ಅಕ್ಷರ ಗಾತ್ರ

ಹಾವೇರಿ: ‘ಮೆರಿಟ್‌ ಇದ್ದರೂ, ವಿದ್ಯಾರ್ಥಿಗಳು ಬಯಸಿದ ವೈದ್ಯಕೀಯ ಶಿಕ್ಷಣ ಸೇರಿದಂತೆ ಇತರ ಕೋರ್ಸ್‌ಗಳಿಗೆ ಅವಕಾಶ ಸಿಗುತ್ತಿಲ್ಲ ಎಂಬುದನ್ನು ಉಕ್ರೇನ್‌ ಘಟನೆ ತೋರಿಸಿಕೊಟ್ಟಿದೆ. ಈಗಿರುವ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪುನರ್‌ ಪರಿಶೀಲನೆ ಮಾಡುವ ಅಗತ್ಯವಿದೆ. ಈ ಬಗ್ಗೆ ಕೇಂದ್ರ ಮಟ್ಟದಲ್ಲಿ ಕೂಡ ಗಂಭೀರದ ಚರ್ಚೆ ನಡೆದಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಉಕ್ರೇನ್‍ನಲ್ಲಿ ಮೃತಪಟ್ಟ ರಾಣೆಬೆನ್ನೂರು ತಾಲ್ಲೂಕು ಚಳಗೇರಿಯ ವಿದ್ಯಾರ್ಥಿ ನವೀನ ಗ್ಯಾನಗೌಡರ ಮನೆಗೆ ಶನಿವಾರ ಭೇಟಿ ನೀಡಿ, ಮೃತ ನವೀನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಉಕ್ರೇನ್‌ ಘಟನೆಯ ನಂತರ ಈಗಾಗಲೇ ಸಭೆ ನಡೆಸಿ, ವೈದ್ಯಕೀಯ ಶಿಕ್ಷಣ ಸಚಿವ, ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿ ಜೊತೆ ಚರ್ಚೆ ಮಾಡಿದ್ದೇನೆ. ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳು ಶುಲ್ಕ ಕಟ್ಟಲು ಆರ್ಥಿಕ ಸಹಾಯ ಮಾಡಬಹುದು. ಆದರೆ, ಆಯ್ಕೆ ಪ್ರಕ್ರಿಯೆ, ಸೀಟು ಲಭ್ಯತೆ ಬಗ್ಗೆ ಕೇಂದ್ರ ಮಟ್ಟದಲ್ಲಿ ಚರ್ಚೆ ನಡೆಸಲು ಚಿಂತನೆ ನಡೆದಿದೆ. ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಪಾರ್ಥಿವ ಶರೀರ ತರಲು ಕ್ರಮ:

ನವೀನನ ಸಾವಿನ ಸುದ್ದಿಯಿಂದ ನಮಗೆಲ್ಲ ದಿಗ್ಭ್ರಮೆಯಾಗಿದೆ. ಅವರ ಜೊತೆ ಇದ್ದ ಕೆಲವು ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾರತಕ್ಕೆ ಬಂದಿದ್ದಾರೆ. ಬಾಂಬಿಂಗ್ ಪರಿಣಾಮ ಆತ ಸತ್ತಿದ್ದು ದುಃಖಕರ ಸಂಗತಿ. ಇಂದು (ಶನಿವಾರ) ಯುದ್ಧ ವಿರಾಮ ಘೋಷಣೆಯಾಗಿದೆ. ಈಗ ಪಾರ್ಥಿವ ತರಲು ಒಂದು ಅವಕಾಶ ಸಿಕ್ಕಿದೆ. ನವೀನನ ಪಾರ್ಥಿವ ಶರೀರವನ್ನು ಸುರಕ್ಷಿತವಾಗಿ ಇಟ್ಟಿದ್ದೇವೆ ಎಂದು ವಿದೇಶಾಂಗ ಸಚಿವ ಜೈಶಂಕರ್‌ ತಿಳಿಸಿದ್ದಾರೆ. ಬೆಂಗಳೂರಿಗೆ ಹೋದ ತಕ್ಷಣ ಎಲ್ಲ ರೀತಿಯ ಪ್ರಯತ್ನ ನಡೆಸಿ, ಪಾರ್ಥಿವ ಶರೀರ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ವಿದ್ಯಾರ್ಥಿಗಳ ಕರೆತರಲು ಕ್ರಮ:

ಯುದ್ಧ ಆದಷ್ಟು ಬೇಗ ಸಂಪೂರ್ಣವಾಗಿ ನಿಲ್ಲಲಿ ಎಂದು ಹಾರೈಸುತ್ತೇನೆ. ಇನ್ನೂ ಹಲವಾರು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಕೆಲವರು ಉಕ್ರೇನ್‌ನ ಗಡಿ ಪ್ರದೇಶಗಳಿಗೆ ನಡೆದುಕೊಂಡು ಬಂದಿದ್ದಾರೆ. ಬಂಕರ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ತರಲು ಪ್ರಯತ್ನ ಮಾಡುತ್ತೇನೆ. ಹಾವೇರಿ ಜಿಲ್ಲೆಯ ಐವರು ಸುರಕ್ಷಿತವಾಗಿ ಹಿಂತಿರುಗಿದ್ದಾರೆ. ಉಳಿದ ಐವರನ್ನು ತರಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೃಷಿ ಸಚಿವ ಬಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕ ಅರುಣಕುಮಾರ್ ಪೂಜಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT