ಭಾನುವಾರ, ನವೆಂಬರ್ 1, 2020
19 °C
ಪ್ರಚಾರ ಸಾಮಗ್ರಿ, ಜಾಹೀರಾತು, ಸಭಾಂಗಣ ಬಾಡಿಗೆ ಮುನ್ನ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ

ನೀತಿಸಂಹಿತೆ ಉಲ್ಲಂಘನೆ: ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗದಂತೆ ತೀವ್ರ ನಿಗಾ ವಹಿಸಿ’ ಎಂದು ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಸೂಚಿಸಿದರು.

ಕರ್ನಾಟಕ ಪಶ್ಚಿಮ ಪದವೀಧರರ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತದೊಂದಿಗೆ ಸೋಮವಾರ ವಿಡಿಯೊ ಸಂವಾದ ನಡೆಸಿ ತಾಲ್ಲೂಕುವಾರು ತಹಶೀಲ್ದಾರರು, ಮುದ್ರಕರು, ಕೇಬಲ್ ಟೀವಿ ಪ್ರಸಾರಕರು ಹಾಗೂ ವಾಣಿಜ್ಯೋದ್ಯಮಗಳೊಂದಿಗೆ ಅವರು ಮಾತನಾಡಿದರು.

ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣ, ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮ ಜಾಹೀರಾತು ಪ್ರಕಟಣೆ, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಸಾರ, ಚುನಾವಣಾ ಪ್ರಚಾರ, ಸಭೆ ಸಮಾರಂಭಗಳಿಗೆ ಸಮುದಾಯ ಭವನ, ಕಲ್ಯಾಣ ಮಂಟಪ, ಸಭಾಂಗಣ ಬಾಡಿಗೆ ಕೊಡುವ ಮುನ್ನ ಹಾಗೂ ಸಭೆ ಸಮಾರಂಭಗಳನ್ನು ನಡೆಸುವ ಮುನ್ನ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಈ ಕುರಿತಂತೆ ಸಂಬಂಧಿಸಿದವರ ಸಭೆ ನಡೆಸಿ ಮಾಹಿತಿ ನೀಡಲು ಸೂಚನೆ ನೀಡಿದರು.

ಚುನಾವಣೆಗೆ ಸಂಬಂಧಿಸಿದ ಜಾಹೀರಾತು ಪ್ರಕಟಣೆ ಮುನ್ನ ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿಯಿಂದ ಅನುಮತಿ ಪಡೆಯಬೇಕು. ಟಿ.ವಿ ಕೇಬಲ್‍ಗಳಲ್ಲಿ ಪ್ರಸಾರವಾಗುವ ರಾಜಕೀಯ, ಸಂದರ್ಶನ, ಜಾಹೀರಾತು ಹಾಗೂ ಸ್ಕ್ರೋಲಿಂಗ್‍ಗಳ ಪ್ರಸಾರಕ್ಕೆ ಮುನ್ನ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಹೊಸ ಕಾಮಗಾರಿ ಇಲ್ಲ: 

ಯಾವುದೇ ಹೊಸ ಕಾಮಗಾರಿಗಳನ್ನು ಆರಂಭಿಸುವಂತಿಲ್ಲ. ಹೊಸ ಯೋಜನೆಗಳನ್ನು ಘೋಷಿಸುವಂತಿಲ್ಲ. ಸಚಿವರು, ಶಾಸಕರು ನಡೆಸುವ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸುವಂತಿಲ್ಲ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವಂತಿಲ್ಲ. ಆದರೆ ಈಗಾಗಲೇ ಕಾಮಗಾರಿಗಳು ಆರಂಭಗೊಂಡಿದ್ದರೆ ಮುಂದುವರಿಸಬಹುದು, ಕೆ.ಡಿ.ಪಿ, ಜಿಲ್ಲಾ ಪಂಚಾಯಿತಿ ಸಭೆಗಳನ್ನು ನಡೆಸಬಹುದು. ಆದರೆ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವಂತಿಲ್ಲ, ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ತೀರ್ಮಾನ ಹಾಗೂ ಚಟುವಟಿಕೆಗಳನ್ನು ನಡಸಬಾರದು ಎಂದು ಸೂಚನೆ ನೀಡಿದರು. 

ಸಭೆಯಲ್ಲಿ ಚುನಾವಣಾ ತಹಶೀಲ್ದಾರ್ ಪ್ರಶಾಂತ ನಾಲವಾರ್, ಹಾವೇರಿ ತಹಶೀಲ್ದಾರ್ ಶಂಕರ, ವಾರ್ತಾಧಿಕಾರಿ ರಂಗನಾಥ ಬಿ.ಆರ್, ವಿಡಿಯೊ ಸಂವಾದದ ಮೂಲಕ ವಿವಿಧ ತಾಲ್ಲೂಕು ತಹಶೀಲ್ದಾರ್‌ಗಳು, ಉಪವಿಭಾಗಾಧಿಕಾರಿಗಳು, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.