ಶುಕ್ರವಾರ, ಜನವರಿ 15, 2021
21 °C
ಅತಿಥಿ ಶಿಕ್ಷಕರ ನೇಮಕ, ಗ್ರಾಮೀಣ ಭಾಗಕ್ಕೆ ಬಸ್‌ ಸೌಲಭ್ಯ ಕಲ್ಪಿಸಲು ಎಸ್ಎಫ್‌ಐ ಆಗ್ರಹ

‘ಸೆಮಿಸ್ಟರ್‌ ಬದಲು ವಾರ್ಷಿಕ ಪರೀಕ್ಷೆ ನಡೆಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್‌ ಪರೀಕ್ಷೆ ಬದಲಾಗಿ ವಾರ್ಷಿಕ ಪರೀಕ್ಷೆ ನಡೆಸಬೇಕು’ ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. 

ನಗರದ ಹೊರವಲಯದಲ್ಲಿರುವ ಗಾಂಧಿಪುರ ಸರ್ಕಾರಿ ಪದವಿ ಕಾಲೇಜು ಮುಂಭಾಗ ಶನಿವಾರ ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕಾಲೇಜು ಪ್ರಾಂಶುಪಾಲ ಬಿ.ಡಿ.ಲಮಾಣಿ ಅವರಿಗೆ ಮನವಿ ಸಲ್ಲಿಸಲಾಯಿತು. 

‘ಅತಿಥಿ ಶಿಕ್ಷಕರನ್ನು ನೇಮಿಸದೆ, ಪಾಠ ಪ್ರವಚನ ನಡೆಸದೆ, ಪಠ್ಯಪುಸ್ತಕ ಮುದ್ರಿಸದೆ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಸರಿಯಾದ ಕ್ರಮವಲ್ಲ. ಹಾಗಾಗಿ ಪರೀಕ್ಷೆಗಳನ್ನು ಮುಂದೂಡಬೇಕು ಇಲ್ಲವೇ ಸೆಮಿಸ್ಟರ್ ಪರೀಕ್ಷೆ ಬದಲಿಗೆ ವಾರ್ಷಿಕ ಪರೀಕ್ಷೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ, ‘ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಪದವಿ ತರಗತಿಗಳಿಗೆ ಸೆಮಿಸ್ಟರ್ ಪರೀಕ್ಷೆಯನ್ನು ನಡೆಸಲು ಮುಂದಾಗುತ್ತಿವೆ. ಇದರ ಭಾಗವಾಗಿ ಕರ್ನಾಟಕ ವಿಶ್ವವಿದ್ಯಾಲಯವು ಫೆಬ್ರುವರಿ ಮೊದಲ ವಾರದಲ್ಲಿ ಎಲ್ಲಾ ಪದವಿ ತರಗತಿಗಳಿಗೆ (1,3 & 5ನೇ ಸೆಮಿಸ್ಟರ್) ಪರೀಕ್ಷೆ ನಡೆಸಲು ತೀರ್ಮಾನಿಸಿ ಸುತ್ತೋಲೆ ಹೊರಡಿಸಿದೆ. ವಿದ್ಯಾರ್ಥಿಗಳ ಜೊತೆ, ಅಧ್ಯಾಪಕರ ಸಂಘದ ಜೊತೆಗೆ ಯಾವುದೇ ಸಮಾಲೋಚನೆ ಮಾಡದೇ ಏಕಾಏಕಿ ತೆಗೆದುಕೊಂಡ ನಿರ್ಧಾರವನ್ನು ಬಲವಾಗಿ ಖಂಡಿಸುತ್ತೇವೆ’ ಎಂದರು. 

‘ಕೋವಿಡ್-19 ಕಾರಣದಿಂದ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಹಲವಾರು ಬದಲಾವಣೆಗಳು ಆಗಿರುವ ಹಿನ್ನೆಲೆಯಲ್ಲಿ ಈ ವರ್ಷದ ಮಟ್ಟಿಗೆ ಸೆಮಿಸ್ಟರ್ ಪದ್ಧತಿ ರದ್ದು ಮಾಡಿ ವಾರ್ಷಿಕ ಪರೀಕ್ಷೆ ಮಾಡಬೇಕು. ಹಲವಾರು ಕಾಲೇಜುಗಳು ಕಾಯಂ ಉಪನ್ಯಾಸಕರಿಲ್ಲದೆ, ಅತಿಥಿ ಉಪನ್ಯಾಸಕರ ಸೇವೆಯ ಮೇಲೆ ನಡೆಯುತ್ತಿವೆ. ಹಾಗಾಗಿ ಕನಿಷ್ಠ ಶೇ 20 ಪಾಠಗಳು ನಡೆದಿಲ್ಲ. ಅಧ್ಯಾಪಕರ ಕೊರತೆ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮೊಬೈಲ್, ನೆಟ್‌ವರ್ಕ್‌ ಸಮಸ್ಯೆಗಳಿಂದ ಪಾಠ ತಲುಪಿಲ್ಲ’ ಎಂದು ಹೇಳಿದರು. 

ಸೆಮಿಸ್ಟರ್ ನಡೆಯದೇ ಇರುವುದರಿಂದ ಪರೀಕ್ಷಾ ಶುಲ್ಕ, ಕ್ರೀಡಾ ಶುಲ್ಕ ಒಳಗೊಂಡಂತೆ ವಿದ್ಯಾರ್ಥಿಗಳಿಂದ ಪಡೆದ ಶುಲ್ಕಗಳನ್ನು ವಾಪಸು ಮಾಡಬೇಕು. ತಕ್ಷಣ ಗ್ರಾಮೀಣ ಭಾಗದ ಬಸ್ ಸೇವೆಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು. 

ಎಸ್ಎಫ್ಐ ಜಿಲ್ಲಾ ಮುಖಂಡರಾದ ಮಾಲತೇಶ ಪುರದ, ಪ್ರಸನ್ನ ಕಡಕೋಳ, ಮಹೇಶ್ ಎಚ್, ವಿದ್ಯಾರ್ಥಿಗಳಾದ ಪ್ರಿಯಾ ಕಾಮಣಿ, ಶಿಲ್ಪಾ ಮರಿಗೌಡ್ರ, ಕರಬಸಮ್ಮ ನಡುವಿನಮನಿ, ಜಯಶ್ರೀ ಬಾರ್ಕಿ, ಅನಿತ ವಡ್ಡರ್, ಬಸಮ್ಮ ಕುಲಕರ್ಣಿ, ಗಿರೀಶ್ ಕೆ. ಎಸ್‌, ಮಲ್ಲಿಕಾ ಪಿ.ಎಂ, ಮಂಜುನಾಥ್ ಯು.ಎಂ, ಪರಶುರಾಮ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.