ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯ 28 ಹಳ್ಳಿಗಳಲ್ಲಿ ಸಂಪೂರ್ಣ ಲಸಿಕಾಕರಣ

ನಿತ್ಯ ಸರಾಸರಿ 11 ಸಾವಿರ ಮಂದಿಗೆ ಲಸಿಕೆ: ತಿಂಗಳಾಂತ್ಯಕ್ಕೆ ಗುರಿ ಮುಟ್ಟುವ ನಿರೀಕ್ಷೆ
Last Updated 4 ಸೆಪ್ಟೆಂಬರ್ 2021, 2:55 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಗೆ ಪೂರೈಕೆಯಾಗುವ ಕೋವಿಡ್‌ ಲಸಿಕೆಯ ಪ್ರಮಾಣ ಆಗಸ್ಟ್‌ 1ರಿಂದ ದ್ವಿಗುಣಗೊಂಡಿದ್ದು, ಲಸಿಕಾಕರಣದಲ್ಲಿ ಗಮನಾರ್ಹ ಪ್ರಗತಿ ಕಂಡು ಬಂದಿದೆ. ಜಿಲ್ಲೆಯ 28 ಹಳ್ಳಿಗಳಲ್ಲಿ ಸಂಪೂರ್ಣ ಲಸಿಕಾಕರಣದ ಗುರಿಯನ್ನು ಜಿಲ್ಲಾ ಆರೋಗ್ಯ ಇಲಾಖೆ ಸಾಧಿಸಿದೆ.

ಹಾವೇರಿ ತಾಲ್ಲೂಕಿನ ಬಿದರಗಡ್ಡಿ, ಚನ್ನೂರು, ಕೆಸರಳ್ಳಿ, ಗಳಗನಾಥ; ಬ್ಯಾಡಗಿ ತಾಲ್ಲೂಕಿನ ಗುಡ್ಡದಮಾದಾಪುರ, ತಿಮ್ಮಾಪುರ; ಹಾನಗಲ್‌ ತಾಲ್ಲೂಕಿನ ಇನಾಂಯಲ್ಲಾಪುರ, ಹುಣಶೆಟ್ಟಿಕೊಪ್ಪ; ಹಿರೇಕೆರೂರು ತಾಲ್ಲೂಕಿನ ಕೋಡಿಹಳ್ಳಿ, ನೇಸ್ವಿ; ರಾಣೆಬೆನ್ನೂರು ತಾಲ್ಲೂಕಿನ ಬೇವಿನಹಳ್ಳಿ, ಕೂಸಗಟ್ಟಿ, ಎಣ್ಣಿ ಹೊಸಳ್ಳಿ; ಸವಣೂರು ತಾಲ್ಲೂಕಿನ ವಡ್ನಿಕೊಪ್ಪ, ಶಿಗ್ಗಾವಿ ತಾಲ್ಲೂಕಿನ ದುಂಡಶಿ ಪ್ಲಾಟ್‌, ಹೊನ್ನಾಪುರ, ಶಾಡಂಬಿ, ಮಡ್ಲಿ, ಕಡಳ್ಳಿ ಸೇರಿದಂತೆ 28 ಗ್ರಾಮಗಳಲ್ಲಿ ಎಲ್ಲ ಗ್ರಾಮಸ್ಥರು ಮೊದಲ ಡೋಸ್‌ ಅನ್ನು ಪಡೆದಿದ್ದಾರೆ.

ಸಿಎಂ ಎಫೆಕ್ಟ್‌

ಬೆಳಗಾವಿ ವಿಭಾಗ ಮಟ್ಟದ ಲಸಿಕಾ ದಾಸ್ತಾನು ಕೇಂದ್ರದಿಂದ ಜಿಲ್ಲೆಗೆ ಜೂನ್‌ ತಿಂಗಳಲ್ಲಿ 1.17 ಲಕ್ಷ ಡೋಸ್‌ ಹಾಗೂ ಜುಲೈ ತಿಂಗಳಲ್ಲಿ 1.56 ಲಕ್ಷ ಡೋಸ್‌ ಪೂರೈಕೆಯಾಗಿದ್ದವು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಹಾವೇರಿ ಜಿಲ್ಲೆಗೆ ಹೆಚ್ಚುವರಿ ಡೋಸ್‌ ಪೂರೈಕೆಯಾಗುತ್ತಿವೆ. ಹೀಗಾಗಿ, ಆಗಸ್ಟ್‌ ತಿಂಗಳಲ್ಲಿ ಬರೋಬ್ಬರಿ 3.64 ಲಕ್ಷ ಡೋಸ್‌ಗಳು ಪೂರೈಕೆಯಾದವು. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್‌ ಲಸಿಕಾಕರಣ ವೇಗ ಪಡೆದುಕೊಂಡಿದೆ.

ಇದುವರೆಗೆ ಜಿಲ್ಲೆಗೆ 7.36 ಲಕ್ಷ ಕೋವಿಶೀಲ್ಡ್‌ ಮತ್ತು 93,400 ಕೋವ್ಯಾಕ್ಸಿನ್‌ ಲಸಿಕೆ ಸೇರಿದಂತೆ ಒಟ್ಟು 8.29 ಲಕ್ಷ ಡೋಸ್‌ಗಳು ಪೂರೈಕೆಯಾಗಿವೆ. ಇದುವರೆಗೆ ಜಿಲ್ಲೆಗೆ ಪೂರೈಕೆಯಾದ ಎಲ್ಲ ಲಸಿಕೆಗಳನ್ನು ಸಮರ್ಪಕವಾಗಿ ಬಳಸುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.

ಲಸಿಕಾಕರಣ ಚುರುಕು

‘ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರು 12,19,886 ಮಂದಿ ಇದ್ದಾರೆ. ಇವರಲ್ಲಿ7,35,817 ಮಂದಿಗೆ ಈಗಾಗಲೇ ಮೊದಲ ಡೋಸ್‌ ಹಾಕಲಾಗಿದೆ. 4,84,069 ಮಂದಿ ಬಾಕಿ ಇದ್ದಾರೆ. ನಿತ್ಯ 12 ಸಾವಿರ ಲಸಿಕೆ ಪೂರೈಕೆಯಾದರೆ, ಒಂದು ತಿಂಗಳಲ್ಲಿ ಎಲ್ಲರಿಗೂ ಮೊದಲ ಡೋಸ್‌ ಹಾಕುವಲ್ಲಿ ಯಶಸ್ವಿಯಾಗುತ್ತೇವೆ. ವೈದ್ಯಕೀಯ ಸಿಬ್ಬಂದಿಯ ಪರಿಶ್ರಮ ಮತ್ತು ಜನರ ಸಹಕಾರದಿಂದ ಲಸಿಕಾಕರಣ ಚುರುಕುಗೊಂಡಿದೆ’ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಜಯಾನಂದ ತಿಳಿಸಿದರು.

‘ಜಿಲ್ಲೆಯಲ್ಲಿ ಸುಮಾರು 300 ಲಸಿಕಾ ಕೇಂದ್ರಗಳಿವೆ. ಆಗಸ್ಟ್‌ 30ರಂದು ಒಂದೇ ದಿನ 44,431 ಡೋಸ್‌ಗಳನ್ನು ಹಾಕುವ ಮೂಲಕ ದಾಖಲೆಯ ಲಸಿಕಾಕರಣ ನಡೆಸಿದ್ದೇವೆ. ನಿತ್ಯ 50 ಸಾವಿರ ಡೋಸ್‌ ಹಾಕುವಷ್ಟು ಸಾಮರ್ಥ್ಯ ಜಿಲ್ಲೆಯಲ್ಲಿದೆ. ಲಭ್ಯ ಲಸಿಕೆಯನ್ನು ಬಳಕೆ ಮಾಡುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ನಮ್ಮಲ್ಲಿ ಲಸಿಕೆ ವ್ಯರ್ಥವಾದದ್ದು ತೀರಾ ಕಡಿಮೆ. ಲಸಿಕೆಯ ಪೂರೈಕೆ ಹೆಚ್ಚಾದರೆ ಲಸಿಕಾಕರಣದಲ್ಲಿ ಹೆಚ್ಚು ಪ್ರಗತಿ ಸಾಧಿಸುತ್ತೇವೆ’ ಎನ್ನುತ್ತಾರೆ ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ ಎಚ್‌.ಎಸ್‌.

ಆಗಸ್ಟ್‌ ತಿಂಗಳಲ್ಲಿ ಒಟ್ಟು 6 ದಿನ,ನಿತ್ಯ 20 ಸಾವಿರಕ್ಕೂ ಅಧಿಕ ಲಸಿಕೆ ಹಾಕಿದ್ದೇವೆ. ಲಸಿಕಾ ಕೇಂದ್ರಗಳಿಗೆ ಜನರು ಆಧಾರ್‌ ಕಾರ್ಡ್‌ನೊಂದಿಗೆ ಬಂದು ಕೋವಿಡ್‌ ಲಸಿಕೆಯನ್ನು ಪಡೆಯಬಹುದು. ಮೊದಲ ಡೋಸ್‌ ಪಡೆದವರು 84 ದಿನಗಳ ನಂತರ ಎರಡನೇ ಡೋಸ್‌ ಪಡೆಯಬೇಕು. ಕೊರೊನಾ ತಡೆಗಟ್ಟಲು ಪ್ರಮುಖ ಅಸ್ತ್ರವಾಗಿರುವ ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಸೆ.1ರಿಂದ ನಿತ್ಯ 25 ಸಾವಿರ ಲಸಿಕೆ ಹಾಕುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಹೆಚ್ಚುವರಿ ಲಸಿಕೆ ಪೂರೈಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಆರೋಗ್ಯ ಇಲಾಖೆಯ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT