ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಅಪರಾಧಕ್ಕೆ ಕಡಿವಾಣ ಹಾಕಿದ ‘ಕೊರೊನಾ’

ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳಿಗೂ ಬ್ರೇಕ್‌; ಆರೋಪಿಗಳಿಗೂ ಸೋಂಕಿನ ಭಯ!
Last Updated 10 ಮೇ 2020, 20:00 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ನಡೆಯುತ್ತಿದ್ದ ಕೊಲೆ, ಸುಲಿಗೆ, ಡಕಾಯಿತಿ, ಕಳ್ಳತನ, ಗಲಭೆ, ಪೋಕ್ಸೊ ಪ್ರಕರಣಗಳು ಸೇರಿದಂತೆ ಅಪರಾಧ ಪ್ರಕರಣಗಳಿಗೆ ಲಾಕ್‌ಡೌನ್‌ ಅವಧಿಯಲ್ಲಿ ಲಗಾಮು ಬಿದ್ದಿದೆ. ಇದು ಪೊಲೀಸರ ಕೈಚಳಕವಲ್ಲ, ಕೊರೊನಾ ಸೋಂಕಿನ ಭೀತಿಯ ಮ್ಯಾಜಿಕ್‌ ಎನ್ನಲಾಗುತ್ತಿದೆ.

ಜಿಲ್ಲೆಯಲ್ಲಿ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಜನವರಿಯಲ್ಲಿ 226, ಫೆಬ್ರುವರಿಯಲ್ಲಿ 259, ಮಾರ್ಚ್‌ನಲ್ಲಿ 294 ಎಫ್‌ಐಆರ್‌ಗಳು ದಾಖಲಾಗಿದ್ದರೆ, ಏಪ್ರಿಲ್‌ನಲ್ಲಿ ಕೇವಲ 174 ಪ್ರಕರಣಗಳು ಮಾತ್ರ ದಾಖಲಾಗಿವೆ. ಅಂದರೆ ಸರಾಸರಿ ಶೇ 35ರಿಂದ 40ರಷ್ಟು ಅಪರಾಧ ಕೃತ್ಯಗಳಿಗೆ ಕಡಿವಾಣ ಬಿದ್ದಿದೆ.

ಪೊಲೀಸ್‌ ಇಲಾಖೆಯಿಂದ ಪ್ರತಿ ವರ್ಷ ಡಿಸೆಂಬರ್‌ ತಿಂಗಳಲ್ಲಿ ‘ಅಪರಾಧ ತಡೆ ಮಾಸಾಚರಣೆ’ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿ ರೌಡಿಗಳನ್ನು ಪರೇಡ್‌ ಮಾಡಿಸುವ ಮೂಲಕ ದುಂಡಾವರ್ತನೆ ತೋರದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ತಾಕೀತು ಮಾಡುತ್ತಾರೆ.

ಆದರೂ, ಅಪರಾಧ ಕೃತ್ಯಗಳು ಅಡೆತಡೆಯಿಲ್ಲದೆ ನಡೆಯುತ್ತಿದ್ದವು. ಯಾವಾಗ ಕೊರೊನಾ ಸೋಂಕು ತಡೆಯಲು ಲಾಕ್‌ಡೌನ್‌ ಜಾರಿಯಾಯಿತೋ, ಆಗಿನಿಂದ ರೌಡಿಗಳು, ಪುಂಡರು ಬಾಲ ಮುದುರಿಕೊಂಡು ಮನೆಯಲ್ಲೇ ಕುಳಿತಿದ್ದಾರೆ. ಅಷ್ಟರಮಟ್ಟಿಗೆ ಕೊರೊನಾ ಸೋಂಕಿನ ಭೀತಿ ಅವರನ್ನು ಕಟ್ಟಿಹಾಕಿದೆ ಎಂಬುದನ್ನು ಪೊಲೀಸ್‌ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಸವಣೂರು ತಾಲ್ಲೂಕಿನಲ್ಲಿ ಅತಿ ಕಡಿಮೆ: ಈ ವರ್ಷದ ನಾಲ್ಕು ತಿಂಗಳಲ್ಲಿ ರಾಣೆಬೆನ್ನೂರು ತಾಲ್ಲೂಕಿನಲ್ಲಿ 230 ಪ್ರಕರಣ, ಹಾವೇರಿ ತಾಲ್ಲೂಕಿನಲ್ಲಿ 197 ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲೇ ಹೆಚ್ಚು ಪ್ರಕರಣ ದಾಖಲಾದ ಮೊದಲ ಎರಡು ತಾಲ್ಲೂಕುಗಳಾಗಿವೆ. ಶಿಗ್ಗಾವಿಯಲ್ಲಿ 85 ಮತ್ತು ಸವಣೂರಿನಲ್ಲಿ 74 ಪ್ರಕರಣಗಳು ದಾಖಲಾಗುವ ಮೂಲಕ ಅತಿ ಕಡಿಮೆ ಪ್ರಕರಣ ದಾಖಲಾದ ತಾಲ್ಲೂಕುಗಳಾಗಿವೆ.

ಅಪಘಾತಗಳಿಗೂ ಬ್ರೇಕ್‌!
ಜಿಲ್ಲೆಯಲ್ಲಿ ತಿಂಗಳಿಗೆ ಮಾರಣಾಂತಿಕ ಅಪಘಾತಗಳು ಸರಾಸರಿ 20ರಿಂದ 22, ಸಣ್ಣಪುಟ್ಟ ಅಪಘಾತಗಳು 55ರಿಂದ 60 ನಡೆಯುತ್ತಿದ್ದವು. ಆದರೆ, ಲಾಕ್‌ಡೌನ್‌ ಅವಧಿಯ ಏಪ್ರಿಲ್‌ ತಿಂಗಳಲ್ಲಿ 1 ಮಾರಣಾಂತಿಕ ಅಪಘಾತ ಮತ್ತು 8 ಸಣ್ಣಪುಟ್ಟ ವಾಹನ ಡಿಕ್ಕಿ ಘಟನೆಗಳು ನಡೆದಿವೆ. ಕೊರೊನಾ ಭೀತಿ ಮತ್ತು ಪೊಲೀಸರು ಹಾಕುವ ದಂಡದ ಭಯದಿಂದ ಜನರು ಹೆದ್ದಾರಿಗಳಲ್ಲಿ ಅಷ್ಟಾಗಿ ಸಂಚರಿಸಲಿಲ್ಲ. ಇದರಿಂದ ಶೇ 90ರಷ್ಟು ಅಪಘಾತ ಪ್ರಕರಣಗಳು ಕಡಿಮೆಯಾಗಿವೆ ಎಂದು ಸಂಚಾರ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಕಳಪೆ ಬಿತ್ತನೆಬೀಜದ ವಿರುದ್ಧ ಪ್ರಕರಣ: ಲಾಕ್‌ಡೌನ್‌ ಅವಧಿಯಲ್ಲಿ ಗಮನಸೆಳೆದ ಪ್ರಕರಣವೆಂದರೆ, ಕಳಪೆ ಬಿತ್ತನೆ ಬೀಜದ ವಿರುದ್ಧ ದೂರು ದಾಖಲು. ಜಿಲ್ಲೆಯ ಬ್ಯಾಡಗಿ, ಹಿರೇಕೆರೂರ ಮತ್ತು ಗುತ್ತಲದಲ್ಲಿ ಅಕ್ರಮವಾಗಿ ಕಳಪೆ ಅಥವಾ ಬಿಡಿ ಗೋವಿನ ಜೋಳದ ಬಿತ್ತನೆ ಬೀಜಗಳನ್ನು ರೈತರಿಗೆ ಮೋಸದಿಂದ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಲಾಗಿತ್ತು. ಈ ಸಂಬಂಧ 6 ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ವಾಹನ ಸವಾರರಿಗೆ ‘ದಂಡ’ದ ಬಿಸಿ: ಅಪರಾಧ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದರೆ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು (ಐಎಂವಿ) ಬೇಸಿಗೆಯ ತಾಪಮಾನದಂತೆ ಏರಿಕೆಯಾಗಿವೆ. ಹೌದು, ಜನವರಿಯಲ್ಲಿ 3,446 ಪ್ರಕರಣ, ಫೆಬ್ರುವರಿಯಲ್ಲಿ 5,709 ಪ್ರಕರಣ, ಮಾರ್ಚ್‌ನಲ್ಲಿ 5,713 ಪ್ರಕರಣಗಳು ದಾಖಲಾಗಿದ್ದವು. ಆದರೆ, ಲಾಕ್‌ಡೌನ್‌ ಅವಧಿಯ ಏಪ್ರಿಲ್‌ನಲ್ಲಿ ಅನಗತ್ಯವಾಗಿ ಬೈಕ್‌ನಲ್ಲಿ ಅಡ್ಡಾಡಿದವರ ವಿರುದ್ಧ ಬರೋಬ್ಬರಿ 8,389 ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಮೂಲಕ ಪೊಲೀಸರು ದಂಡದ ಬಿಸಿ ಮುಟ್ಟಿಸಿದರು.

ಈ ನಾಲ್ಕು ತಿಂಗಳಲ್ಲಿ ಸಂಗ್ರಹವಾದ ದಂಡದ ಒಟ್ಟು ಮೊತ್ತ ₹1.05 ಕೋಟಿ. ಲಾಕ್‌ಡೌನ್‌ ಅವಧಿಯಲ್ಲಿ (ಮಾರ್ಚ್‌ 24ರಿಂದ ಮೇ 8ರವರೆಗೆ) 11,760 ಪ್ರಕರಣಗಳನ್ನು ದಾಖಲಿಸಿಕೊಂಡು, ₹50.26 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂಬುದನ್ನು ಇಲಾಖೆಯ ಅಂಕಿ ಅಂಶಗಳು ತಿಳಿಸುತ್ತವೆ.

*
ಕೊರೊನಾ ಸೋಂಕು ತಡೆಗಟ್ಟಲು ದಿಟ್ಟ ಕ್ರಮ ಕೈಗೊಂಡೆವು. ಲಾಕ್‌ಡೌನ್ ಅವಧಿಯಲ್ಲಿ ಬೈಕ್‌ಗಳಲ್ಲಿ ಅನಗತ್ಯ ಅಡ್ಡಾಡಿದವರ ವಿರುದ್ಧ ₹ 50 ಲಕ್ಷದಂಡ ಹಾಕಿದ್ದೇವೆ.
-ಕೆ.ಜಿ.ದೇವರಾಜು, ಎಸ್ಪಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT