ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಬೆಳೆ ಹಾನಿ: ಅಳಲು ತೋಡಿಕೊಂಡ ರೈತರು

ಅತಿವೃಷ್ಟಿ–ನೆರೆ ಹಾನಿ ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ: ಶೀಘ್ರ ವರದಿ ಭರವಸೆ
Last Updated 9 ಸೆಪ್ಟೆಂಬರ್ 2022, 15:53 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಾದ್ಯಂತ ಸತತ ಮಳೆ ಹಾಗೂ ನೆರೆಯಿಂದ ಹಾನಿಯಾದ ಪ್ರದೇಶಗಳಿಗೆ ಕೇಂದ್ರ ಸರ್ಕಾರದ ಅಂತರ ಸಚಿವಾಲಯದ ಅಧಿಕಾರಿಗಳ ಅಧ್ಯಯನ ತಂಡ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು.

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಸಿ.ಡಬ್ಲ್ಯೂ.ಸಿ. ನಿರ್ದೇಶಕ ಅಶೋಕಕುಮಾರ.ವಿ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಸೂಪರ್‌ಇಂಟೆಂಡಿಂಗ್‌ ಎಂಜಿನಿಯರ್‌ ಹಾಗೂ ಕೆ.ಎಸ್.ಡಿ.ಎಂ.ಎ. ಹಿರಿಯ ಅಧಿಕಾರಿ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ ನೇತೃತ್ವದ ತ್ರಿಸದಸ್ಯರನ್ನೊಳಗೊಂಡ ತಂಡ ಹಾನಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು.

ಪ್ರವಾಸದುದ್ದಕ್ಕೂ ಸಂತ್ರಸ್ತರ ಬೇಡಿಕೆಗಳನ್ನು ಸಮಚಿತ್ತದಿಂದಲೇ ಆಲಿಸಿದ ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ಅಶೋಕಕುಮಾರ ಅವರು ಕನ್ನಡದಲ್ಲೇ ಸಂತ್ರಸ್ತರೊಂದಿಗೆ ಮಾತನಾಡಿ, ಸಾಂತ್ವನ ಹೇಳಿದರು. ನಿಮ್ಮ ಮನವಿಗಳನ್ನು, ನಿಮ್ಮ ನಷ್ಟದ ವಿವರವನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು. ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದರು.

ಚಿಕ್ಕಲಿಂಗದಹಳ್ಳಿ, ಕದರಮಂಡಲಗಿ, ಅಸುಂಡಿ, ಕುಂಚೂರ, ಶಂಕರನಹಳ್ಳಿ, ಬೋಗಾವಿ, ಆಡೂರ, ತಿಳವಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ಮೆಕ್ಕೆಜೋಳ ತಾಕು, ಹತ್ತಿತಾಕು, ಶುಂಠಿ, ಮೆಣಸಿನಗಿಡ, ಬೆಂಡೆ ಸೇರಿದಂತೆ ತಾರಿಕಾರಿ ತಾಕುಗಳು ಹಾಗೂ ವಿವಿಧ ಫಸಲುಗಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೊಚ್ಚಿಹೋದ ರಸ್ತೆ, ಬಿರುಕು ಬಿಟ್ಟ ಮನೆ:ನೆರೆಯಿಂದ ಕೊಚ್ಚಿಹೋದ ರಸ್ತೆ, ಕೋಡಿಬಿದ್ದ ಕೆರೆಗಳು, ಬಿರುಕುಬಿಟ್ಟ ಕೆರೆಯ ದಂಡೆಗಳು, ಮಳೆಯಿಂದ ಕಿತ್ತುಹೋದ ಶಾಲಾ ಚಾವಣಿ, ಕುಸಿದುಬಿದ್ದ ಸರ್ಕಾರಿ ಶಾಲಾ ಗೋಡೆಗಳು, ಹಾನಿಗೊಂಡ ಮನೆಗಳನ್ನು ವೀಕ್ಷಿಸಿದ ಅಧಿಕಾರಿಗಳು ಸಂತ್ರಸ್ತರಿಂದ ಮಾಹಿತಿ ಪಡೆದುಕೊಂಡರು.

ಕೋಡ ಗ್ರಾಮದ ಪ್ಯಾಸೆಂಜರ್ ಸೇತುವೆ, ಶಂಕರನಹಳ್ಳಿ ಪಂಚಾಯತ್ ರಾಜ್ ಸೇತುವೆ ಹಾನಿ, ಕಾಗಿನೆಲೆ, ಸೋಮಸಾಗರ ಕೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಶ್ವತ ಕಾಮಗಾರಿಗೆ ಪ್ರಸ್ತಾವ ಸಲ್ಲಿಸಿ, ನೆರೆ ಪರಿಹಾರ ಹಣದಿಂದ ತಾತ್ಕಾಲಿಕ ದುರಸ್ತಿಗೆ ಕ್ರಮಕೈಗೊಳ್ಳಿ ಎಂದು ಪಂಚಾಯತ್ ರಾಜ್ ಹಾಗೂ ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿರು.

ಸಂಜೆ ಕುಣಿಮೆಳ್ಳಿಹಳ್ಳಿ, ತೆವರಮೆಳ್ಳಿಹಳ್ಳಿ, ಬಂಕಾಪುರ, ಸವಣೂರ, ಅಲ್ಲಿಪುರ, ಶಿಗ್ಗಾವಿ, ಮುಗಳಿ, ತಿಮ್ಮಾಪೂರಕ್ಕೆ ಭೇಟಿ ನೀಡಿ ಬೆಳೆಹಾನಿ, ಮನೆ ಹಾಗೂ ಮೂಲಸೌಕರ್ಯಗಳ ಹಾನಿ ಕುರಿತಂತೆ ಪರಿಶೀಲನೆ ನಡೆಸಿತು.

‘ಬೆಳೆ ಏನಾಗೈತಿ ನೋಡು, ತುತ್ತು ಅನ್ನ ಹಾಕು’
ಹಾವೇರಿ ತಾಲೂಕು ಚಿಕ್ಕಲಿಂಗದಹಳ್ಳಿ ಗ್ರಾಮದ ರೈತ ನಾಗರಾಜ ಪೂಜಾರ ಅವರ ಮೆಕ್ಕೆಜೋಳ ತಾಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೇಂದ್ರ ಅಧಿಕಾರಿಗಳ ತಂಡ ಆಗಮಿಸುತ್ತಿದ್ದಂತೆ ‘ನೋಡೋ ನನ್ನಪ್ಪ ನೋಡೋ ಎಲ್ಲಾ ಏನಾಗೈತಿ ಅನ್ನುವುದನ್ನು ನೋಡು, ನಮ್ಮ ಬೆಳೆ ಏನಾಗೈತಿ ಅಂತಾ ನೋಡು, ಒಂದು ತುತ್ತು ಅನ್ನಹಾಕು’ ಎಂದು ಗೋಗರೆಯುತ್ತ ಬೆಳೆನಾಶ ಪರಿಸ್ಥಿತಿಯನ್ನು ಅಧಿಕಾರಿಗಳಿಗೆ ವಿವರಿಸಿದರು. ಅಧಿಕಾರಿಗಳು ರೈತನನ್ನು ಸಮಾಧಾನಪಡಿಸಿ, ಸಾಂತ್ವನ ಹೇಳಿದರು.

ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ,‌ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳೆಗಡ್ಡಿ, ರಾಯಪ್ಪ ಹುಣಸಗಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ, ತಹಶೀಲ್ದಾರ್‌ಗಳಾದ ಗಿರೀಶ ಸ್ವಾದಿ, ಶಂಕರ್‌, ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT