ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್: ಆತ್ಮರಕ್ಷಣೆಗಾಗಿ ಚಿರತೆ ಹತ್ಯೆಗೈದ ಅಪ್ಪ–ಮಗ

ಮೃತ ಚಿರತೆಯ ಕಾಲು ಕತ್ತರಿಸಿದ ಆರೋಪ: ಇಬ್ಬರ ಬಂಧನ
Last Updated 1 ಸೆಪ್ಟೆಂಬರ್ 2021, 16:10 IST
ಅಕ್ಷರ ಗಾತ್ರ

ಹಾನಗಲ್: ದಾಳಿ ಮಾಡಿದ ಚಿರತೆಯ ವಿರುದ್ಧ ಆತ್ಮರಕ್ಷಣೆಗಾಗಿ ಅಪ್ಪ ಮತ್ತು ಮಗ ಹೋರಾಡಿ, ಚಿರತೆಯನ್ನು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಕಾಮನಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಾಮನಹಳ್ಳಿ ತಾಂಡಾ ನಿವಾಸಿಗಳಾದ ಸೋಮಣ್ಣ ಲಮಾಣಿ (56) ಮತ್ತು ಅವರ ಪುತ್ರ ಸಂತೋಷ ಲಮಾಣಿ (32) ಚಿರತೆಯ ವಿರುದ್ಧ ಸೆಣಸಾಡಿದವರು. ದಾಳಿ ಸಂದರ್ಭ ಸೋಮಣ್ಣ ಅವರ ಕೈ ಮತ್ತು ಬೆನ್ನಿಗೆ ಗಾಯಗಳಾಗಿದ್ದವು. ಇವರು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅರಣ್ಯಕ್ಕೆ ಹೊಂದಿಕೊಂಡಿರುವ ತಮ್ಮ ಜಮೀನಿಗೆ ಸೋಮವಾರ ಮುಂಜಾನೆ ಅಪ್ಪ ಮತ್ತು ಮಗ ಹೋದ ಸಂದರ್ಭ ಚಿರತೆ ದಾಳಿ ನಡೆಸಿತ್ತು. ಆಗ ಕೊಡಲಿಯಿಂದ ಹೊಡೆದು ಚಿರತೆಯನ್ನು ಹತ್ಯೆ ಮಾಡಿದ್ದರು. ಆದರೆ ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ. ಆಸ್ಪತ್ರೆಯಲ್ಲಿ ಸೋಮಣ್ಣ ದಾಖಲಾದ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ದೊರೆತು, ವಿಚಾರಿಸಿದಾಗ ಚಿರತೆ ವಿರುದ್ಧ ಹೋರಾಡಿ ಓಡಿಸಿದೆವು ಎಂದಷ್ಟೇ ಮಾಹಿತಿ ನೀಡಿದ್ದರು.

ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ,ಕಾಮನಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದೆ. ಆದರೆ ಚಿರತೆಯ ನಾಲ್ಕು ಕಾಲುಗಳನ್ನು ಕತ್ತರಿಸಿರುವ ಬಗ್ಗೆ ಅಧಿಕಾರಿಗಳಿಗೆ ಅನುಮಾನ ಉಂಟಾಗಿದೆ.

‘ಸೋಮಪ್ಪನ ಮಗ ಸಂತೋಷನನ್ನು ವಿಚಾರಣೆ ನಡೆಸಿದಾಗ, ಸಂತೋಷ ಮತ್ತು ಅವನ ಸ್ನೇಹಿತ ಮಂಜುನಾಥ ಲಮಾಣಿ ಅವರು ಹತ್ಯೆ ಮಾಡಿದ್ದ ಚಿರತೆಯ ನಾಲ್ಕು ಕಾಲುಗಳನ್ನು ಕತ್ತರಿಸಿಕೊಂಡು ಬಂದು ಮನೆಯ ಹಿತ್ತಲಲ್ಲಿ ಅಡಗಿಸಿಟ್ಟಿದ್ದರು. ನಂತರ ಚಿರತೆಯ ಕಾಲುಗಳನ್ನು ವಶಕ್ಕೆ ಪಡೆದಿದ್ದೇವೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ’ ಎಂದುಉಪವಲಯ ಅರಣ್ಯಾಧಿಕಾರಿ ಎಸ್.ಎಂ. ತಳವಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹಾನಗಲ್ ಪಶು ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಡಿಎಫ್‌ಒ ಬಾಲಕೃಷ್ಣ ಎಸ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ.ಬಸವರಾಜಪ್ಪ, ವಲಯ ಅರಣ್ಯಾಧಿಕಾರಿ ಶಿವರಾಜ ಮಠದ, ಎಸ್.ಕೆ.ರಾಥೋಡ, ಅರಣ್ಯ ರಕ್ಷಕರಾದ ಪರಸಪ್ಪ ತಿಳವಳ್ಳಿ, ವಿಶ್ಬನಾಥ ರಟ್ಟಿಹಳ್ಳಿ, ಹನುಮಂತಪ್ಪ ಉಪ್ಪಾರ, ಸಂತೋಷ ಸವಣೂರ, ಮಂಜುನಾಥ ಚವ್ಹಾಣ, ಬಸವಮ್ಮ ಗೌರಿಹಳ್ಳಿ, ಪದ್ಮನಾಭ ಪೂಜಾರ, ಆರ್.ಪಿ.ಗುರ್ಕಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

2021ರ ಮಾರ್ಚ್‌ ತಿಂಗಳಲ್ಲಿ ರಟ್ಟೀಹಳ್ಳಿ ತಾಲ್ಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಹೊಲದಲ್ಲಿ ನೀರು ಹಾಯಿಸುತ್ತಿದ್ದ ಸಂದರ್ಭ ರೈತರು ಆತ್ಮರಕ್ಷಣೆಗಾಗಿ ಚಿರತೆಯನ್ನು ಹತ್ಯೆ ಮಾಡಿದ್ದ ಘಟನೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT