ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಪಟ್ಟಣ: ಊರಿಗೆ ಮೆರುಗು ತಂದ ‘ದಸರಾ’

ಕರೂರು ಗ್ರಾಮ ಕಲಾವಿದರ ತವರೂರು: ಕ್ರೀಡೆಯಲ್ಲೂ ಛಾಪು ಮೂಡಿಸಿದ ಯುವಕರು
Last Updated 7 ಆಗಸ್ಟ್ 2021, 13:28 IST
ಅಕ್ಷರ ಗಾತ್ರ

ಕುಮಾರಪಟ್ಟಣ: ಅರಸರ ಕಾಲದಿಂದಲೂ ಮೈಲಾರಲಿಂಗೇಶ್ವರನ ಸನ್ನಿಧಾನದಲ್ಲಿ ಮೈಸೂರು ದಸರಾ ಮಾದರಿಯಲ್ಲಿಯೇ ಉತ್ಸವ ಜರುಗುತ್ತದೆ. ವಿಶೇಷ ಆಚರಣೆ ಮೂಲಕ ರಾಣೆಬೆನ್ನೂರು ತಾಲ್ಲೂಕಿನ ಕರೂರು ಗ್ರಾಮ ವರ್ಷಕ್ಕೊಮ್ಮೆ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಪ್ರತಿ ತಿಂಗಳ ಹುಣ್ಣಿಮೆಯಂದು ಮೈಲಾರಲಿಂಗೇಶ್ವರನ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ದಸರಾ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ವಿವಿಧ ಬಗೆಯ ಕಾರ್ಯಕ್ರಮಗಳು ನಡೆಯುತ್ತವೆ. ಮೊದಲನೇ ದಿನ ದೀಪ ಹಚ್ಚಿದ ಬಳಿಕ ವಿಶೇಷ ಅಭಿಷೇಕ, ಹೋಮ ಹವನ ಕೈಗೊಂಡ ನಂತರವೇ ಉತ್ಸವಕ್ಕೆ ಚಾಲನೆ ದೊರೆಯುತ್ತದೆ.

ಬನ್ನಿ ವಿನಿಮಯ: ಯುವಕರು ಅಜ್ಜಯ್ಯನ ದೇವಸ್ಥಾನದಲ್ಲಿ ‘ಬನ್ನಿ ಪಡೆದ ಬಾಳು ಬಂಗಾರವಾಗಲಿ’ ಎಂದು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಬಳಿಕ ಮನೆಗೆಳಿಗೆ ತೆರಳಿ ಕುಟುಂಬದ ಬಂಧುಗಳೊಂದಿಗೆ ಸಿಹಿ ಭೋಜನ ಸವಿಯುವರು ಎನ್ನುತ್ತಾರೆ ಗ್ರಾಮಸ್ಥರಾದ ಪರಸಪ್ಪ ಕ್ಯಾತರಿ ಹಾಗೂ ಅಜ್ಜಪ್ಪ ಲೆಕ್ಕಿಕೊನಿ.

‘ಗ್ರಾಮದ ಬೀರೇಶ್ವರ, ಮೈಲಾರಲಿಂಗೇಶ್ವರ, ಗಂಗೆ ಮಾಳಮ್ಮ, ದುರ್ಗಾದೇವಿ, ಆಂಜನೇಯಸ್ವಾಮಿ, ಸತ್ಯಶಿವಾನಂದ ದೇವರ ಮೆರವಣಿಗೆ ಸಡಗರದಿಂದ ನಡೆಯುತ್ತದೆ. ಬಳಿಕ ಪ್ಯಾಟಿ ಬಸವೇಶ್ವರ ವೃತ್ತದಲ್ಲಿ ಅರಳಿ ಮರದ ಕಟ್ಟೆಯ ಮೇಲೆ ಬೀಡು ಬಿಡುತ್ತವೆ. ಗೊರವಯ್ಯ ಮತ್ತು ತಂಡ ತ್ರಿಶೂಲ ಕಡ್ಡಿಗಳನ್ನು ಬಾಯಿ, ನಾಲಿಗೆ, ಗಂಟಲುಗಳಲ್ಲಿ ಸಿಕ್ಕಿಸಿಕೊಳ್ಳುವುದನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಾರೆ’ ಎಂದು ದಸರಾ ಉತ್ಸವ ಸಮಿತಿಯ ಸದಸ್ಯರು ತಿಳಿಸುತ್ತಾರೆ.

‘ಪಲ್ಲಕ್ಕಿ ಉತ್ಸವ:ಐರಣಿ ಮಠದ ಕುದುರೆ, ಒಂಟೆ, ಆನೆಗಳು ಅಲಂಕೃತಗೊಂಡು ಮೆರವಣೆಗೆಯಲ್ಲಿ ಪಾಲ್ಗೊಳ್ಳುತ್ತವೆ. ಪಲ್ಲಕ್ಕಿ ಉತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾತಂಡಗಳು ಸೇರಿದಂತೆ ಸ್ಥಳೀಯರಿಂದ ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು, ಕಂಸಾಳೆ, ಕೋಲಾಟ, ಹಲಗೆಮೇಳ, ಕುದುರೆ ಕುಣಿತ, ಗೊರವರ ಕುಣಿತ ಹಾಗೂ ಕೀಲು ಕುದುರೆ ಕಲಾತಂಡಗಳು ಮನ ಸೆಳೆಯುತ್ತವೆ ಎನ್ನುತ್ತಾರೆ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೊನ್ನಪ್ಪ ಮುಡದ್ಯಾವಣ್ಣನವರ ಹಾಗೂ ಚೋಳಪ್ಪ ಕಚ್ಚರಬಿ ಅವರು.

‘ಮೆರವಣಿಗೆಯಲ್ಲಿ ಶಾಲಾ ಮಕ್ಕಳು ಬಸವೇಶ್ವರ, ರಾಣಿ ಚೆನ್ನಮ್ಮ, ಶಿವಾಜಿ, ಅಕ್ಕಮಹಾದೇವಿ, ಕುವೆಂಪು, ದ.ರಾ.ಬೇಂದ್ರೆ, ಒನಕೆ ಓಬವ್ವ, ಗಾಂಧೀಜಿ, ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಅನೇಕ ನಾಯಕರ ವೇಷಭೂಷಣಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಹಾವೇರಿ, ದಾವಣಗೆರೆ ಸೇರಿದಂತೆ ಸುತ್ತಮುತ್ತಲ ಊರುಗಳ ಜನರು ಪಾಲ್ಗೊಳ್ಳುತ್ತಾರೆ ಎಂದು ಜಗದೀಶ ಪವಾರ ಹಾಗೂ ಮಂಜುನಾಥ ಕನ್ನಗೌಡ್ರ ವಿವರಿಸುತ್ತಾರೆ.

ಸ್ವಾತಂತ್ರ್ಯ ಹೋರಾಟಗಾರ ಲಕ್ಷ್ಮಣ ಶೆಟ್ಟರ್, ವೈದ್ಯ ಬಸವರಾಜ ಶಾಸ್ತ್ರಿ ತಮ್ಮ ಸೇವೆ ಮೂಲಕ ಗಮನ ಸೆಳೆದರೆ, ಮಂಜುನಾಥ ರಾಜನಹಳ್ಳಿ, ತಿಪ್ಪೇಶಿ ಲೆಕ್ಕಿಕೊನಿ, ಜಮಾಲಸಾಬ್‌ ತಾವರಗೊಂದಿ ಜನಪದ ಕಲೆಯಲ್ಲಿ ರಾಜ್ಯ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ ಎನ್ನುತ್ತಾರೆ ಕುಮಾರ್‌ ಸಣ್ಣಬೊಮ್ಮಾಜಿ

ಕ್ರೀಡೆಗಳಲ್ಲಿ ಸೈ:ಯುವಕರು ತಮ್ಮ ಕೃಷಿ ಚಟುವಟಿಕೆಗಳ ಜೊತೆಗೆ ಪ್ರತಿನಿತ್ಯವೂ ಗರಡಿ ಮನೆಗಳಲ್ಲಿ ದೇಹ ದಂಡಿಸುತ್ತಾರೆ. ಹಲವು ಕುಸ್ತಿ ಪಟುಗಳು ಜಿಲ್ಲೆ, ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಕಬಡ್ಡಿ, ಕೊಕ್ಕೊ, ಓಟಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಬಹುಪಾಲು ಯುವಕರು ದುಶ್ಚಟಗಳಿಂದ ದೂರ ಉಳಿದಿದ್ದಾರೆ ಎಂದು ಉಪನ್ಯಾಸಕ ನಾಗರಾಜ ಎಲಿಗಾರ ಹೆಮ್ಮೆ ಪಡುತ್ತಾರೆ.

ಕನ್ನಡ ಸೇವೆ:ಕನ್ನಡ ಸಾಹಿತ್ಯ ಪರಿಷತ್‌ ಗ್ರಾಮ ಘಟಕದ ಮೂಲಕ 150ಕ್ಕೂ ಹೆಚ್ಚು ಮಂದಿ ಭುವನೇಶ್ವರಿ ತಾಯಿ ಸೇವೆಯಲ್ಲಿ ತೊಡಗಿದ್ದಾರೆ. ಜೈ ಮಾತೃಭೂಮಿ ಯುವಕ ಸಂಘದ ಮೂಲಕ ಯುವಜನ ಮೇಳ, ಜಿಲ್ಲೆ, ರಾಜ್ಯಮಟ್ಟದ ಜಾನಪದ ಕಾರ್ಯಕ್ರಮ ಆಯೋಜಿಸಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಗಂಗಿ ಮಾಳಮ್ಮ ದೇವಸ್ಥಾನ ಜೀರ್ಣೋದ್ಧಾರ ನಡೆಯುತ್ತಿದೆ. ಶಾಸಕ ಅರುಣಕುಮಾರ ಪೂಜಾರ ಹಾಗೂ ಗ್ರಾಮಸ್ಥರೆಲ್ಲರೂ ಕೈಜೋಡಿಸಿದ್ದಾರೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮಾಲತೇಶ ಪೂಜಾರ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT