ಸೋಮವಾರ, ಮೇ 23, 2022
22 °C
ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ಹೇಳಿಕೆ

ಕೃಷಿ ಕಾಯ್ದೆ ವಾಪಸ್‌ ಪಡೆಯಲು ಏ.21ರ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ರೈತರ ಪಾಲಿಗೆ ಕರಾಳವಾದ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಶಾಸನಬದ್ಧವಾಗಿ ವಾಪಸ್ ಪಡೆದಿದೆ. ಅದೇ ರೀತಿ ರಾಜ್ಯ ಸರ್ಕಾರ ಕೂಡ ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇರಬೇಕೋ, ಬೇಡವೋ ಎಂಬ ಬಗ್ಗೆ ಬೆಂಗಳೂರಿನಲ್ಲಿ ಏ.21ರಂದು ನಡೆಯುವ ರೈತರ ಬೃಹತ್‌ ಸಮಾವೇಶದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಕೆ ನೀಡಿದರು. 

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನೀತಿ, ಸಿದ್ಧಾಂತಗಳು ರಾಜ್ಯದಲ್ಲಿ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲ. ಕೇವಲ ‘ಪವರ್‌ ಪಾಲಿಟಿಕ್ಸ್‌’ ಮಾಡುತ್ತಿವೆ. ಈಗ ನಡೆಯುತ್ತಿರುವುದು ಅನಾಚಾರದ ರಾಜಕಾರಣ. ಬಿಜೆಪಿ ಸರ್ಕಾರ ಚೆನ್ನಾಗಿ ಕೆಲಸ ಮಾಡಿಲ್ಲ ಅಂದ್ರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಜನರಿಗೆ ಅನಿವಾರ್ಯವಲ್ಲ. ‘ಪರ್ಯಾಯ ರಾಜಕಾರಣ’ದ ಬಗ್ಗೆ ರೈತ ಸಂಘ ತೀರ್ಮಾನ ತೆಗೆದುಕೊಳ್ಳಲಿದೆ. ಮುಂಬರುವ ಚುನಾವಣೆಯಲ್ಲಿ ರೈತಸಂಘದ ಅಭ್ಯರ್ಥಿಗಳು ಸ್ಪರ್ಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು. 

ಭ್ರಷ್ಟಾಚಾರ ಸಮರ್ಥಿಸಿಕೊಂಡ ಸಿಎಂ:

ದೇಶದಲ್ಲೇ ಮೊದಲು ಕರ್ನಾಟಕ ರಾಜ್ಯದಲ್ಲಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದು ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ. ಹಸಿರು ಶಾಲು ಧರಿಸಿ ವಿಷಕಾರಿ ಕಾಯ್ದೆ ಜಾರಿಗೊಳಿಸಿದ್ದು ಬಿಎಸ್‌ವೈ ಸಾಧನೆ ಎಂದು ಟೀಕಿಸಿದರು. ಶೇ 40ರ ಕಮಿಷನ್‌ ಬಗೆಗಿನ ಕಾಂಗ್ರೆಸ್‌ ಆರೋಪಕ್ಕೆ, ‘ನೀವು ಪ್ರಾರಂಭ ಮಾಡಿದ್ದೀರಿ, ನಾವು ಮುಂದುವರಿಸುತ್ತಿದ್ದೇವೆ’ ಎಂದು ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುವ ಮೂಲಕ ಭ್ರಷ್ಟಾಚಾರವನ್ನು ಸರ್ಮಥಿಸಿಕೊಂಡಿದ್ದಾರೆ. ಹೀಗಾಗಿ ಇದು ಭ್ರಷ್ಟ ಸರ್ಕಾರ ಎಂದು ಒಪ್ಪಿಕೊಂಡಂತಾಗಿದೆ ಎಂದು ಜರಿದರು. 

ರೈತಸಂಘಗಳು ಒಡೆದು ಹೋಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ನಾಯಿಕೊಡೆಗಳಂತೆ ಬೆಳಿಗ್ಗೆ ಹುಟ್ಟಿ ಸಂಜೆ ವೇಳೆಗೆ ಕೆಲವು ಸಂಘಗಳು ಸಾಯುತ್ತಿವೆ. ತ್ಯಾಗ, ಬಲಿದಾನದ ಮೇಲೆ ನಾವು ರೈತ ಚಳವಳಿ ಕಟ್ಟಿದ್ದೇವೆ. ನಾಗರಿಕರಿಗೆ ಯಾರು ವಂಚಕರು, ಭ್ರಷ್ಟರು ಎಂಬುದನ್ನು ತಿಳಿಸುವ ಕೆಲಸು ಶುರು ಮಾಡುತ್ತೇವೆ’ ಎಂದರು. 

ಕಸದ ಬುಟ್ಟಿಗೆ ಹಾಕುತ್ತಾರೆ!:

ಹಿಂದೂ–ಮುಸ್ಲಿಂ ಕೋಮುದ್ವೇಷದ ಬಗೆಗಿನ ಪ್ರಶ್ನೆಗೆ, ‘ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕೇ ಹೊರತು, ಮನುಷ್ಯ ದ್ವೇಷ ಹುಟ್ಟುಹಾಕಿ ಸರ್ಕಾರವೇ ಸಮಸ್ಯೆಯಾಗಬಾರದು. ಚುನಾವಣೆಯಲ್ಲಿ ಹೆಚ್ಚು ಮತ ಗಳಿಸಲು ಈ ತಂತ್ರ ಹೂಡಿದರೆ, ಬರುವ ಮತಗಳು ಕಡಿಮೆಯಾಗುತ್ತವೆ. ಪಕ್ಷದ ಮಾನ, ಮರ್ಯಾದೆ ಕಡಿಮೆಯಾಗಿ, ಜನರು ನಿಮ್ಮನ್ನು ಕಸದ ಬುಟ್ಟಿಗೆ ಹಾಕುತ್ತಾರೆ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ, ಎಂ.ಎನ್‌.ನಾಯಕ, ಹನುಮಂತಪ್ಪ ಹುಚ್ಚಣ್ಣನವರ, ಜಾಕೀರಹುಸೇನ ಅರಳಿಮರದ, ರಾಜೇಸಾಬ ತರ್ಲಘಟ್ಟ, ಬಸವರಾಜ ತಳವಾರ ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು