ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜನತೆಗೆ ದೀಪಾವಳಿ ಕೊಡುಗೆ: ಸಚಿವ ಪ್ರಹ್ಲಾದ ಜೋಶಿ

ಸರ್ಕಾರಿ ವೈದ್ಯಕೀಯ‌ ಕಾಲೇಜಿಗೆ ವರ್ಚುವಲ್ ಪ್ಲಾಟ್‌ಫಾರಂ ಮೂಲಕ ಸಿ.ಎಂ ಶಂಕುಸ್ಥಾಪನೆ
Last Updated 13 ನವೆಂಬರ್ 2020, 16:42 IST
ಅಕ್ಷರ ಗಾತ್ರ

ಹಾವೇರಿ: ‘ಪ್ರಧಾನಿ ನರೇಂದ್ರ ಮೋದಿ ಅವರ ‘ಸಾರ್ವಜನಿಕರ ಆರೋಗ್ಯದ ಅಭಿಯಾನ’ದ ಭಾಗವಾಗಿ ಹಾವೇರಿ ವೈದ್ಯಕೀಯ ಕಾಲೇಜು ಸೇರಿದಂತೆ ದೇಶದಲ್ಲಿ 157 ಹೊಸ ಸರ್ಕಾರಿ ಮೆಡಿಕಲ್ ಕಾಲೇಜುಗಳಿಗೆ ಮಂಜೂರು ನೀಡಲಾಗಿದೆ. ಜಿಲ್ಲೆಯ ಜನತೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ದೀಪಾವಳಿ ಕೊಡುಗೆಯಾಗಿದೆ’ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ದೇವಗಿರಿ-ಯಲ್ಲಾಪುರದ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡದ ನಿವೇಶನದಲ್ಲಿ ಶುಕ್ರವಾರ ಆಯೋಜಿಸಿದ್ದ ನೂತನ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರತಿ ರಾಜ್ಯಕ್ಕೊಂದು ‘ಏಮ್ಸ್ ಸಂಸ್ಥೆ’ ಸ್ಥಾಪಿಸಲು ಉದ್ದೇಶಿಸಿದ್ದು, ಆ ಮೂಲಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ವೆಲ್‍ಫೇರ್ ಸ್ಟೇಟ್ ಆಶಯವಾಗಿ ಕೇಂದ್ರ ಸರ್ಕಾರ ‘ಎಲ್ಲರಿಗೂ ಆರೋಗ್ಯ, ಎಲ್ಲರಿಗೂ ಔಷಧ’ ಗುರಿಯೊಂದಿಗೆ ಸಾರ್ವಜನಿಕ ಆರೋಗ್ಯ ಎಂಬ ಆಂದೋಲನವನ್ನು ಆರಂಭಿಸಲಾಗಿದೆ. ‘ಆಯುಷ್ಮಾನ್‌ ಭಾರತ’ ಯೋಜನೆಯನ್ನು ಜಾರಿಗೊಳಿಸಿದ್ದು, ದೇಶದ 10 ಕೋಟಿ ಕುಟುಂಬಗಳಿಗೆ ಲಾಭವಾಗಿದೆ. ಆ ಮೂಲಕ ದೇಶದ ಜನರ ಆರೋಗ್ಯಕ್ಕೆ ನಮ್ಮ ಸರ್ಕಾರ ಹೆಚ್ಚು ಆದ್ಯತೆ ನೀಡಿದೆ ಎಂದು ಹೇಳಿದರು.

ಟಿ.ಬಿ. ಮುಕ್ತ ಭಾರತ:

2025ರ ಹೊತ್ತಿಗೆ ಭಾರತವನ್ನು ಟಿ.ಬಿ ಮುಕ್ತ ಭಾರತವಾಗಿ ರೂಪಿಸಲು ಯೋಜನೆ ರೂಪಿಸಿದೆ. ಕೋವಿಡ್‍ನಿಂದ ಮರಣ ಹೊಂದುವವರ ಪ್ರಮಾಣ ಕಡಿಮೆ ಮಾಡಲು ಪ್ರಯತ್ನ ಮಾಡಲಾಗಿದೆ. ಈ ಉದ್ದೇಶಕ್ಕಾಗಿ ದೇಶದಲ್ಲಿ 2030 ಲ್ಯಾಬ್‍ಗಳನ್ನು ಆರಂಭಿಸಿದೆ. ಪ್ರತಿ ದಿನ 7 ರಿಂದ 8 ಲಕ್ಷ ಕೋವಿಡ್ ಪರೀಕ್ಷೆ ನಡೆಸುವುದರ ಮೂಲಕ ಮರಣ ಪ್ರಮಾಣವನ್ನು ಜಗತ್ತಿನ ಇತರ ರಾಷ್ಟ್ರಗಳಿಗಿಂತ ಕಡಿಮೆಗೊಳಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ಜನರ ಆರೋಗ್ಯಕ್ಕಾಗಿ ಹೆಚ್ಚು ಹಣ ವ್ಯಯಮಾಡುವುದನ್ನು ಕಡಿಮೆಗೊಳಿಸಲಾಗಿದೆ. ಹೃದ್ರೋಗ, ಸವತೆಗೊಂಡ ಮೊಣಕಾಲು ಚಿಪ್ ಅಳವಡಿಕೆ, ಕಿಡ್ನಿ ಸೇರಿದಂತೆ ನಾನಾ ಗಂಭೀರ ಕಾಯಿಲೆಗಳಿಗೆ ತಗಲುವ ದುಬಾರಿ ವೆಚ್ಚವನ್ನು ಕಡಿತಗೊಳಿಸಿ, ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ದೊರಕುವಂತೆ ಆರೋಗ್ಯ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರು ಓಲೇಕಾರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ, ಜಿ.ಪಂ.ಅಧ್ಯಕ್ಷ ಏಕನಾಥ ಬಾನುವಳ್ಳಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಹಾಗೂ ಜಿಲ್ಲಾ ಪಂಚಾಯತ್ ಸಿಇಒ ರಮೇಶ ದೇಸಾಯಿ ಇತರ ಗಣ್ಯರು, ಅಧಿಕಾರಿಗಳು ಇದ್ದರು. ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿಶೇಷ ಅಧಿಕಾರಿ ಡಾ.ಉದಯ ಮುಳಗುಂದ ವಂದನಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT