ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್: ಕೋಡಿ ಬಿದ್ದ ಧರ್ಮಾ ಜಲಾಶಯ

––
Last Updated 24 ಜುಲೈ 2021, 16:30 IST
ಅಕ್ಷರ ಗಾತ್ರ

ಹಾನಗಲ್: ತಾಲ್ಲೂಕಿನಲ್ಲಿ ಹರಿದಿರುವ ವರದಾ ಮತ್ತು ಧರ್ಮಾ ನದಿಗಳು ಅಪಾಯದ ಮಟ್ಟ ತಲುಪಿದ್ದು, ಕೆರೆ–ಕಟ್ಟೆಗಳು ತುಂಬಿ ಹರಿಯುತ್ತಿವೆ. ಹಳ್ಳಗಳು ಮೈದುಂಬಿಕೊಂಡು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.

ಗುರುವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಶುಕ್ರವಾರ ಬೆಳಿಗ್ಗೆ ಧರ್ಮಾ ಜಲಾಶಯ ತುಂಬಿ ಕೋಡಿ ಬಿದ್ದಿದೆ. ಸುಮಾರು 32 ಮನೆಗಳು ಕುಸಿದಿವೆ. ಧರ್ಮಾ ಜಲಯಾಶಯಕ್ಕೆ ಗುರುವಾರ ರಾತ್ರಿ ಸುಮಾರು 5 ಸಾವಿರ ಕ್ಯುಸೆಕ್ಸ್‌ ನೀರು ಹರಿದು ಬಂದಿದ್ದು ಜಲಾಶಯ ಭರ್ತಿಯಾಗಿದೆ. ಹೆಚ್ಚುವರಿ 2800 ಕ್ಯುಸೆಕ್ಸ್‌ ನೀರು ಹೊರ ಹೋಗುತ್ತಿದೆ.

ಜಲಾಶಯದ ಹೆಚ್ಚುವರಿ ನೀರು ಧರ್ಮಾ ನದಿ ಸೇರಿಕೊಂಡು ನದಿಪಾತ್ರ ದೊಡ್ಡದಾಗುತ್ತಿದೆ. ಜಲಾಶಯ ಅಡಿಯಲ್ಲಿನ ತಾಲ್ಲೂಕಿನ 98 ಕೆರೆಗಳು ನಿರಂತರ ಮಳೆಗೆ ಭರ್ತಿಯಾಗುವ ಹಂತ ತಲುಪಿವೆ. ಈಗ ಧರ್ಮಾ ಕಾಲುವೆ ನೀರು ಈ ಕೆರೆಗಳಿಗೆ ನುಗ್ಗುತ್ತಿದ್ದು, ಕೆರೆಗಳು ಒಡೆಯುವ ಭೀತಿ ನಿರ್ಮಾಣವಾಗಿದೆ.

ಹಿರೆಕೆರೆ ತುಂಬಿಕೊಂಡ ಪರಿಣಾಮ ತಾಲ್ಲೂಕಿನ ಹಿರೇಕಣಗಿ ಮತ್ತು ಚಿಕೇರಿ ಹೊಸಳ್ಳಿ ಗ್ರಾಮಗಳು ಗುರುವಾರ ಬೆಳಿಗ್ಗೆ ಜಲಾವೃತಗೊಂಡವು. ಈ ಎರಡು ಗ್ರಾಮಗಳಲ್ಲಿ ನಿರಾಶ್ರಿತ ಕೇಂದ್ರ ತೆರೆಯಲಾಗುತ್ತದೆ ಎಂದು ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್ ತಿಳಿಸಿದ್ದಾರೆ.

ನದಿ ತೀರದ ಗ್ರಾಮಗಳಾದ ಕೂಡಲ, ಲಕ್ಮಾಪೂರ, ಹರಗಿ, ಹಿರೇಹುಲ್ಲಾಳ, ಕಲ್ಲಾಪೂರ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಲಾಗಿದೆ. ನದಿಯಿಂದ ಗ್ರಾಮಗಳಿಗೆ ಈತನಕ ತೊಂದರೆಯಾಗಿಲ್ಲ. ಕೆರೆಗಳು ತುಂಬಿಕೊಂಡು ಅವಾಂತರ ಸೃಷ್ಠಿಯಾಗುತ್ತಿದೆ. ನದಿ ತೀರಕ್ಕೆ ಜನರು ಹೋಗಬಾರದು ಎಂದು ಅವರು ತಿಳಿಸಿದ್ದಾರೆ.

ರಕ್ಷಣಾ ತಂಡ ರಚಿಸಲಾಗಿದ್ದು, ಹಾವೇರಿಯಿಂದ ಬೋಟ್ ತರಿಸಲಾಗಿದೆ. ಸಹಾಯವಾಣಿ ತೆರೆಯಲಾಗಿದೆ. 2608379, 262241 ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಹೆಲ್ಪ್‌ಲೈನ್‌ ಆರಂಭಿಸಲಾಗಿದೆ ಎಂದು ತಿಳಿಸಿದರು.

ಹಾನಗಲ್-ಕುಂಟನಹೊಸಳ್ಳಿ, ಕಂಚಿನೆಗಳೂರ-ಬೆಳಗಾಲಪೇಟೆ, ಬಾಳಂಬೀಡ-ಲಕ್ಮಾಪೂರ, ಹರವಿ-ತವರಮೆಳ್ಳಿಹಳ್ಳಿ, ಕೂಡಲ-ನಾಗನೂರ, ಯತ್ನಳ್ಳಿ-ಕಿರವಾಡಿ, ಮಲಗುಂದ-ಕ್ಯಾಸನೂರ ರಸ್ತೆಗಳು ಬಂದ್ ಆಗಿವೆ.

ಧಾರಾಕಾರ ಮಳೆಗೆ ವರದಾ ಮತ್ತು ಧರ್ಮಾ ನದಿಗಳು ಭೋರ್ಗರೆಯುತ್ತಿವೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು,
ಹಾನಗಲ್ ಹೊರಭಾಗದ ಹಾವೇರಿ, ಶಿರಸಿ, ಶಿವಮೊಗ್ಗ ಸಂಪರ್ಕದ ಮುಖ್ಯ ರಸ್ತೆಗೆ ನಿರ್ಮಿಸಿರುವ ಧರ್ಮಾ ನದಿಯ ಸೇತುವೆ ಮೇಲೆ ನೀರು ಹರಿಯುತ್ತಿದೆ. ಮಳೆ ಪ್ರಮಾಣ ಹೆಚ್ಚಾದರೆ ಈ ಸೇತುವೆ ಮುಳುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT