ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾನಗಲ್ | ನಿತ್ಯ 2 ಕಿ.ಮೀ. ನೀರು ಹೊರಬೇಕು: ಬಾಳಂಬೀಡ ನಿವಾಸಿಗಳು ಗೋಳು

Published 2 ಜೂನ್ 2024, 4:27 IST
Last Updated 2 ಜೂನ್ 2024, 4:27 IST
ಅಕ್ಷರ ಗಾತ್ರ

ಹಾನಗಲ್: ತಾಲ್ಲೂಕಿನ ಬಾಳಂಬೀಡ ಗ್ರಾಮದ 2ನೇ ವಾರ್ಡ್‌ ನಿವಾಸಿಗಳಿಗೆ ನೀರಿನ ಸಮಸ್ಯೆ ಉದ್ಭವಿಸಿದ್ದು, ನಿತ್ಯ ಸುಮಾರು 2 ಕಿ.ಮೀ ದೂರದಿಂದ ನೀರು ತರಬೇಕಾದ ಅನಿವಾರ್ಯತೆಯಲ್ಲಿ ಗ್ರಾಮಸ್ಥರಿದ್ದಾರೆ.

ಬೇಸಿಗೆ ಕಾರಣಕ್ಕಾಗಿ ಸ್ಥಳೀಯ ಆಡಳಿತ ಪೂರೈಸುತ್ತಿದ್ದ ಕುಡಿಯುವ ನೀರಿನ ಕೊಳವೆಬಾವಿಗಳು ಒಂದೊಂದಾಗಿ ಬತ್ತಿ ಹೋಗುತ್ತಿದ್ದು, ಸುಮಾರು 700 ಜನಸಂಖ್ಯೆಯ ಬಾಳಂಬೀಡ ಗ್ರಾಮದ 2 ನೇ
ವಾರ್ಡ್‌ ನಿವಾಸಿಗಳು ಕುಡಿಯಲು, ಗೃಹ ಬಳಕೆಗೆ ಬಳಸಲು ಮತ್ತು ಜಾನುವಾರುಗಳಿಗೆ ಮತ್ತಿತರ ಸಾಕು ಪ್ರಾಣಿಗಳ ದಾಹ ತೀರಿಸಲು ಹರಸಾಹಸ ಪಡುವಂತಾಗಿದೆ.

‘ಈ ಸಮಸ್ಯೆ ಕಳೆದ ಎರಡು ತಿಂಗಳಿನಿಂದ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗ ಮುಂಗಾರುಪೂರ್ವ ಮಳೆ ಆರಂಭಗೊಂಡರೂ ನಮ್ಮ ಸ್ಥಿತಿ ಬದಲಾಗಿಲ್ಲ’ ಎಂದು ಗ್ರಾಮಸ್ಥ ರಮೇಶ ಕಳಸೂರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸಂಬಂಧಿತ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಸರಿಪಡಿಸದಿದ್ದರೆ, ಗ್ರಾಮ ಪಂಚಾಯ್ತಿಗೆ ಬೀಜ ಜಡಿದು, ಹಾನಗಲ್–ಹಾವೇರಿ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆಗೆ
ಮುಂದಾಗುತ್ತೇವೆ ಎಂದು ಗ್ರಾಮದ ಸುಭಾಸ ದುಂಡಣ್ಣನವರ, ಶ್ರಿನಿವಾಸ ಗಾಳಪೂಜಿ, ಬಸವರಾಜ ಚಲವಾದಿ, ಈರಣ್ಣ ಪೂಜಾರ ಎಚ್ಚರಿಸಿದ್ದಾರೆ.

‘ಹೊಸದಾಗಿ ಕೊಳವೆಬಾವಿ ತೋಡಿಸಿ, ಕಿರು ನೀರಿ ಸರಬರಾಜು ಘಟಕ ಸ್ಥಾಪಿಸುವ ಮೂಲಕ 2ನೇ ವಾರ್ಡ್‌ ಜಲ ಸಂಕಷ್ಟಕ್ಕೆ ಮುಕ್ತಿ ನೀಡಬೇಕು. ಗ್ರಾಮ ಹೊರಭಾಗದ ಕೃಷಿ ಪಂಪ್‌ಸೆಟ್‌, ಅಥವಾ
ಪಂಚಾಯ್ತಿಯ ಕೊಳವೆಬಾವಿಯಲ್ಲಿ ನೀರು ಹಿಡಿದು ಮನೆಗೆ ತರಬೇಕಾದ ಸ್ಥಿತಿ ಇಲ್ಲಿದೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಸತೀಶ ದುಂಡಣ್ಣನವರ ಆರೋಪಿಸುತ್ತಾರೆ.

ಮೇಲ್ಮಟ್ಟದ ಪ್ರದೇಶ: ಸಮಸ್ಯೆ ಉದ್ಭವ

ಬರ ಆವರಿಸಿದ ಪರಿಣಾಮ ನೀರು ಪೂರೈಕೆಗಾಗಿ ಹೊಸದಾಗಿ ಎರಡು ಕೊಳವೆಬಾವಿ ತೋಡಲಾಗಿದೆ. ಒಂದು ಖಾಸಗಿ ಕೊಳವೆಬಾವಿ ಆಶ್ರಯಿಸಲಾಗಿದೆ. 2ನೇ ವಾರ್ಡ್‌ ಸ್ವಲ್ಪ ಮೇಲ್ಮಟ್ಟದ ಪ್ರದೇಶವಾದ ಕಾರಣದಿಂದ ಇಲ್ಲಿಗೆ ನೀರು ಸರಬರಾಜು ಸೂಕ್ತವಾಗಿ ನಡೆಯುತ್ತಿಲ್ಲ. ಇದಕ್ಕೆ ಕಾರಣ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿರುವುದು. ಈ ಭಾಗದಲ್ಲಿ ಕಿರು ನೀರು ಸರಬರಾಜು ಘಟಕ ಸ್ಥಾಪನೆಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದೆ. ಆದರೆ ನೀರಿನ ಅಭಾವದಿಂದ ಚಾಲನೆ ಪಡೆದಿಲ್ಲ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜಿ.ಎಸ್‌.ಕನ್ನಕ್ಕನವರ ಹೇಳಿದ್ದಾರೆ.

ಹಾನಗಲ್‌ ತಾಲ್ಲೂಕಿನ ಬಾಳಂಬೀಡ ಗ್ರಾಮದ 2ನೇ ವಾರ್ಡ್‌ ನಿವಾಸಿಗಳು ಗ್ರಾಮ ಹೊರಭಾಗದ ಕೊಳವೆಬಾವಿಯಿಂದ ನಿತ್ಯವೂ ತಳ್ಳು ಗಾಡಿಯಲ್ಲಿ ಕೊಡಪಾನ ಇಟ್ಟುಕೊಂಡು ನೀರು ತರುತ್ತಿರುವುದು
ಹಾನಗಲ್‌ ತಾಲ್ಲೂಕಿನ ಬಾಳಂಬೀಡ ಗ್ರಾಮದ 2ನೇ ವಾರ್ಡ್‌ ನಿವಾಸಿಗಳು ಗ್ರಾಮ ಹೊರಭಾಗದ ಕೊಳವೆಬಾವಿಯಿಂದ ನಿತ್ಯವೂ ತಳ್ಳು ಗಾಡಿಯಲ್ಲಿ ಕೊಡಪಾನ ಇಟ್ಟುಕೊಂಡು ನೀರು ತರುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT