ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಬರ: 6,448 ಗ್ರಾಮಗಳಲ್ಲಿ ನೀರಿನ ಸಮಸ್ಯೆ

Published 21 ಡಿಸೆಂಬರ್ 2023, 7:59 IST
Last Updated 21 ಡಿಸೆಂಬರ್ 2023, 7:59 IST
ಅಕ್ಷರ ಗಾತ್ರ

ಹಾವೇರಿ: ಬರ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ 6,448 ಗ್ರಾಮ ಮತ್ತು ನಗರ ಪ್ರದೇಶದ 1,007 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಆತಂಕ ಎದುರಾಗಿದೆ.

ಕುಡಿಯುವ ನೀರು ಪೂರೈಸುವ ಜಲಮೂಲ ಮತ್ತು ನೀರಿನ ಬೇಡಿಕೆ ಆಧಾರದ ಮೇಲೆ ನಾಲ್ಕು ವರ್ಷಗಳ ಪರಿಸ್ಥಿತಿ ಅವಲೋಕಿಸಿ, ಸಮಸ್ಯಾತ್ಮಕ ಗ್ರಾಮ ಮತ್ತು ವಾರ್ಡ್‌ಗಳ ಪಟ್ಟಿಯನ್ನು ಆಯಾ ಜಿಲ್ಲಾ ಪಂಚಾಯಿತಿಗಳು ಸಿದ್ಧಪಡಿಸಿವೆ. ಉತ್ತರ ಕರ್ನಾಟಕಕ್ಕಿಂತ ದಕ್ಷಿಣ ಕರ್ನಾಟಕದ ಜಿಲ್ಲೆಗಳ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆಯಿದೆ.

ಸಮಸ್ಯಾತ್ಮಕ ಗ್ರಾಮ ಮತ್ತು ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸಲು 5,374 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು, ಅವುಗಳ ಮಾಲೀಕರ ಜೊತೆ ಒಪ್ಪಂದ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. 

216 ತಾಲ್ಲೂಕು ಬರಪೀಡಿತ:

ರಾಜ್ಯದ 31 ಜಿಲ್ಲೆಗಳ 236 ಪೈಕಿ 216 ತಾಲ್ಲೂಕುಗಳನ್ನು ‘ಬರಪೀಡಿತ’ ಎಂದು ಸರ್ಕಾರ ಘೋಷಿಸಿದೆ. ಮಳೆಯ ತೀವ್ರ ಕೊರತೆಯಿಂದ ರಾಜ್ಯದಲ್ಲಿ 48 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದ್ದು, ₹35,162 ಕೋಟಿ ನಷ್ಟವಾಗಿದೆ. ಕೇಂದ್ರ ಸರ್ಕಾರದಿಂದ ₹18,171 ಕೋಟಿ ನೆರವನ್ನು ರಾಜ್ಯ ಸರ್ಕಾರ ನಿರೀಕ್ಷಿಸಿದೆ. 

‘ಹಾವೇರಿ ಜಿಲ್ಲೆಯ 243 ಸಮಸ್ಯಾತ್ಮಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು 223 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿದ್ದೇವೆ. ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆ, ಬನ್ನಿಹಟ್ಟಿ ಮತ್ತು ತಡಸ ಗ್ರಾಮದಲ್ಲಿ ನೀರಿನ ಸಮಸ್ಯೆಯಿದ್ದು, 7 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸುತ್ತಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ತಿಳಿಸಿದರು. 

ಕೊಳವೆಬಾವಿಯಲ್ಲೂ ನೀರಿನ ಪ್ರಮಾಣ ಕುಸಿತ:

‘ಈ ಬಾರಿ ಮಳೆ ಕೈಕೊಟ್ಟ ಕಾರಣ ಖಾಸಗಿ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.  ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 3 ಗಂಟೆ, ರಾತ್ರಿ 3 ಗಂಟೆ ಮಾತ್ರ ವಿದ್ಯುತ್‌ ನೀಡಲಾಗುತ್ತಿದೆ. ವಿದ್ಯುತ್‌ ಸಮಸ್ಯೆಯಿಂದ ಹಿಂಗಾರು ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಕಷ್ಟವಾಗಿದೆ. ಅದಕ್ಕೆ ಬಹುತೇಕ ರೈತರು ಬಾಡಿಗೆಗೆ ನೀರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಖಾಸಗಿ ಕೊಳವೆಬಾವಿಗಳಿಂದ ಗ್ರಾಮಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವೇ? ಸರ್ಕಾರ ಪರ್ಯಾಯ ಕ್ರಮಗಳ ಬಗ್ಗೆ ಚಿಂತಿಸಬೇಕಿದೆ’ ಎಂದು ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

ತಾಲ್ಲೂಕು ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿ ರಚಿಸಲಾಗಿದ್ದು ನೀರಿನ ಕೊರತೆ ಎದುರಾಗದಂತೆ ನಿಗಾವಹಿಸಲಾಗಿದೆ. ಬರ ನಿರ್ವಹಣೆಗೆ ಪಿ.ಡಿ. ಖಾತೆಯಲ್ಲಿ ₹14 ಕೋಟಿ ಲಭ್ಯವಿದೆ
– ರಘುನಂದನ ಮೂರ್ತಿ ಜಿಲ್ಲಾಧಿಕಾರಿ ಹಾವೇರಿ
ರಾಜ್ಯದ 115 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು 89 ಗ್ರಾಮಗಳಿಗೆ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ.
–ಕೃಷ್ಣ ಬೈರೇಗೌಡ ಕಂದಾಯ ಸಚಿವ
ಅತಿ ಹೆಚ್ಚು ಸಮಸ್ಯಾತ್ಮಕ ಗ್ರಾಮಗಳು ಹೊಂದಿದ 10 ಜಿಲ್ಲೆಗಳ ವಿವರ 
ಜಿಲ್ಲೆ;ಗ್ರಾಮಗಳ ಸಂಖ್ಯೆ ತುಮಕೂರು;746 ಶಿವಮೊಗ್ಗ;541 ಹಾಸನ;358 ಬೆಳಗಾವಿ;339 ಚಿಕ್ಕಮಗಳೂರು;313 ಚಿತ್ರದುರ್ಗ;289 ವಿಜಯನಗರ;282 ಉತ್ತರ ಕನ್ನಡ;280 ಕೋಲಾರ;265 ಬಾಗಲಕೋಟೆ–257

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT