ಭಾನುವಾರ, ನವೆಂಬರ್ 28, 2021
19 °C
4 ಶತಮಾನಗಳಿಂದ ಮಾಮಲೇ ದೇಸಾಯಿ ಮನೆತನದವರಿಂದ ಆಚರಣೆ

ಹಂದಿಗನೂರ: ದಸರಾ ಖಾಸಗಿ ದರ್ಬಾರ್

ದುರುಗಪ್ಪ ಕೆಂಗನಿಂಗಪ್ಪನವರ Updated:

ಅಕ್ಷರ ಗಾತ್ರ : | |

Prajavani

ಗುತ್ತಲ: ಇಲ್ಲಿಗೆ ಸಮಿಪದ ಹಂದಿಗನೂರ ಗ್ರಾಮದಲ್ಲಿ ನಾಲ್ಕು ಶತಮಾನಗಳಿಂದ ಮಾಮಲೇ ದೇಸಾಯಿ ಮನೆತನದವರು ತಮ್ಮ ವಾಡೆಯಲ್ಲಿ ನವರಾತ್ರಿ ದಿನಗಳಲ್ಲಿ ಖಾಸಗಿ ದರ್ಬಾರ್ ನಡೆಸಿಕೊಂಡು ಬಂದಿದ್ದಾರೆ.

ಈಗ ಅದು ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗಿದ್ದರೂ ಇಂದಿಗೂ ತನ್ನ ಗಾಂಭೀರ್ಯತೆಯನ್ನು ಕಳೆದುಕೊಂಡಿಲ್ಲ. ಆ ಭಾಗದ ಜನಮಾನಸದಲ್ಲಿ ‘ದೇಸಾಯಿ ದರ್ಬಾರ್’ ಎಂದು ಅಚ್ಚಳಿಯದೇ ಉಳಿದಿದೆ.

ಮೈಸೂರ ದಸರಾ ಪ್ರಾರಂಭವಾದ ಒಂದು ವರ್ಷದ ನಂತರ ಹಂದಿಗನೂರ ದೇಸಾಯಿಯವರ ವಾಡೆಯಲ್ಲಿ ‘ನವರಾತ್ರಿ ಉತ್ಸವ’ ಪ್ರಾರಂಭವಾಯಿತು. ಜೊತೆಗೆ ‘ದೇಸಾಯಿ ದರ್ಬಾರ್’ ನಡೆಯಿತು.

ಈ ಮನೆತನಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ಬಿಜಾಪೂರದ ಆದಿಲ್‌ಶಾಹಿಗಳ ಆಳ್ವಿಕೆಯಲ್ಲಿ ಅವರ ಸಾಮಂತರಾಗಿ ಕಾರ್ಯನಿರ್ವಹಿಸಿದವರು ಈ ಮನೆತನದ ಹಿರಿಯರನ್ನು ಗಾದಿ ಮಾಲೀಕರೆಂದು ಕರೆಯಲಾಗುತ್ತದೆ. ಇಲ್ಲಿಯವರೆಗೆ 16 ಜನ ಗಾದಿ ಮಾಲೀಕರಾಗಿದ್ದಾರೆ. ಈಗ 17ನೇ ಗಾದಿ ಮಾಲೀಕರಾಗಿ ಅರವಿಂದ ಮಾಮಲೇ ದೇಸಾಯಿಯವರು ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಆಯುಧಪೂಜೆಯ ದಿನದಂದು ದೇಸಾಯಿಯವರು ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಎಲ್ಲ ಆಯುಧಗಳಿಗೆ ಪೂಜೆ ಸಲ್ಲಿಸಿ ತಮ್ಮ ಕುಲದೇವರಾದ ಸರ್ವೇಶ್ವರ ಹಾಗೂ ವಾಡೆಯಲ್ಲಿರುವ ದೇವರುಗಳಿಗೆ ವಿಶೇಷ ಪೂಜೆಯನ್ನು ತಮ್ಮ ಸಂಸ್ಥಾನದ ಪುರೋಹಿತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ–ವಿಧಾನಗಳ ಮೂಲಕ ನೇರವೇರಿಸಿ ಗ್ರಾಮಸ್ಥರಿಂದ ಒಪ್ಪಿಗೆ ಪತ್ರ ಪಡೆದುಕೊಳ್ಳುತ್ತಾರೆ. ತಮ್ಮ ಸಂಸ್ಥಾನದ ಸೇವಕರಿಗೆ ಆಯುಧಗಳು ಹಾಗೂ ಮನೆತನದ ಬಿಲ್ ಉಡುಗೆಗಳನ್ನು ನೀಡಿ ತಮ್ಮ ವಾಡೆಯ ಆವರಣದಲ್ಲಿ ಖಾಸಗಿ ದರ್ಬಾರ್ ನಡೆಸುತ್ತಾರೆ.

ನಂತರ ಗ್ರಾಮ ದೇವತೆಗಳಾದ ಆಂಜನೇಯ, ಗಾಳೆಮ್ಮ, ದ್ಯಾಮವ್ವ, ಬಸವಣ್ಣ ದೇವರುಗಳ ಪಲ್ಲಕ್ಕಿ ಉತ್ಸವದೊಂದಿಗೆ ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಬನ್ನಿಮಂಟಪಕ್ಕೆ ತೆರಳಿ ಶಮೀ ಪೂಜೆ ಸಲ್ಲಿಸಿ ಶಮೀ ಪತ್ರೆಯೊಂದಿಗೆ ದೇಸಾಯಿಯವರು ಮರಳಿ ಉತ್ಸವದೊಂದಿಗೆ ವಾಡೆಗೆ ಬರುವರು.

ವಾಡೆಯ ಮಹಾದ್ವಾರದಲ್ಲಿ ದೇಸಾಯಿಯವರಿಗೆ ಆರತಿ ಬೆಳಗಿ ಸ್ವಾಗತಿಸುವರು. ನಂತರ ದೇಸಾಯಿಯವರಿಗೆ ತಮ್ಮ ಮನೆಯ ದೇವರಿಗೆ ಹಿರಿಯರಿಗೆ ಶಮೀ ಪತ್ರೆ ನೀಡಿ ಆರ್ಶೀವಾದ ಪಡೆದು ನಂತರ ಮನೆಯ ಮೊಗಸಾಲೆಯಲ್ಲಿ ಗ್ರಾಮಸ್ಥರಿಗೆ ಶಮೀ ಪತ್ರೆ ನೀಡುವ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು