ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಾಮಿನಲ್ಲೇ ಕೊಳೆಯುತ್ತಿವೆ 32 ಸಾವಿರ ‘ಡಸ್ಟ್‌ಬಿನ್‌’

ಮನೆ–ಮನೆಗಳಿಗೆ ತಲುಪದ ಕಸದ ಬುಟ್ಟಿಗಳು: ಪೌರಕಾರ್ಮಿಕರಿಗೆ ಕಸ ಪ್ರತ್ಯೇಕಿಸುವ ಸವಾಲು
Published 14 ಜುಲೈ 2023, 4:40 IST
Last Updated 14 ಜುಲೈ 2023, 4:40 IST
ಅಕ್ಷರ ಗಾತ್ರ

ಹಾವೇರಿ: ನಗರದ ಪ್ರತಿ ಮನೆ–ಮನೆಗೆ ಹಸಿ ಮತ್ತು ಒಣ ಕಸ ಸಂಗ್ರಹಿಸಲು ಹಾವೇರಿ ನಗರಸಭೆಯಿಂದ ವಿತರಿಸಬೇಕಿದ್ದ 32,350 ಡಸ್ಟ್‌ ಬಿನ್‌ಗಳು ಕಳೆದ ನಾಲ್ಕು ತಿಂಗಳಿಂದ ಗೋದಾಮಿನಲ್ಲೇ ದೂಳು ತಿನ್ನುತ್ತಿವೆ. 

‘ಸ್ವಚ್ಛ ಭಾರತ್ ಮಿಷನ್’ ಯೋಜನೆಯಡಿ ₹40.76 ಲಕ್ಷ ವೆಚ್ಚದಲ್ಲಿ ಮನೆ–ಮನೆಗೆ ತಲಾ ಎರಡು ಡಸ್ಟ್‌ಬಿನ್‌ಗಳನ್ನು ಕೊಡುವ ಕಾರ್ಯಕ್ರಮಕ್ಕೆ ಮಾರ್ಚ್‌ ತಿಂಗಳಲ್ಲಿ ಹಾವೇರಿ ಕ್ಷೇತ್ರದ ಅಂದಿನ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದ್ದರು. ಚಾಲನೆ ಕೊಟ್ಟು ನಾಲ್ಕು ತಿಂಗಳಾದರೂ ಮನೆಗಳಿಗೆ ತಲುಪಿಲ್ಲ. 

ಹಾವೇರಿ ನಗರದ 31 ವಾರ್ಡ್‌ಗಳಲ್ಲಿರುವ ಸುಮಾರು 16,175 ಮನೆಗಳಿಗೆ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಕೊಡಲು 10 ಲೀಟರ್‌ ಸಾಮರ್ಥ್ಯದ ಕಸದ ಬುಟ್ಟಿಗಳನ್ನು ಕೊಡಲು 14ನೇ ಹಣಕಾಸು ಆಯೋಗ ಅನುದಾನದಡಿ ಕ್ರಿಯಾಯೋಜನೆ ರೂಪಿಸಿ ಮಂಜೂರಾತಿ ಪಡೆಯಲಾಗಿತ್ತು. ಹಾವೇರಿ ನಗರಸಭೆಗೆ ಪೂರೈಕೆಯಾದ 32,350 ಡಸ್ಟ್‌ಬಿನ್‌ಗಳನ್ನು ಹೈಟೆಕ್‌ ರಂಗಮಂದಿರದಲ್ಲಿ ಸುರಿಯಲಾಗಿದೆ. 

‘ಹಸಿ ಮತ್ತು ಒಣಕಸವನ್ನು ಪ್ರತ್ಯೇಕಿಸಿ ಕೊಡಲು ನಗರಸಭೆಯವರು ಡಸ್ಟ್‌ಬಿನ್‌ಗಳನ್ನು ಕೊಡದ ಕಾರಣ ಮನೆಗಳಲ್ಲಿ ಕಸ ಪ್ರತ್ಯೇಕಿಸಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿರುವ ಒಂದೇ ಬಕೆಟ್‌ನಲ್ಲಿ ಹಸಿ ಮತ್ತು ಒಣಕಸವನ್ನು ಒಟ್ಟಿಗೇ ತುಂಬಿ ಕೊಡುತ್ತಿದ್ದೇವೆ. ವಾರಕ್ಕೆ 2 ಅಥವಾ 3 ಬಾರಿ ಆಟೊ ಟಿಪ್ಪರ್‌ಗಳು ಬರುವುದರಿಂದ ಮನೆಯಲ್ಲೇ ಹಸಿ ಕಸ ಕೊಳೆತು ದುರ್ನಾತ ಬೀರುತ್ತದೆ’ ಎಂದು ಗೃಹಿಣಿಯರು ಸಮಸ್ಯೆ ತೋಡಿಕೊಂಡರು. 

ಟಿಪ್ಪರ್‌ಗಳ ಕೊರತೆ:

ಹಾವೇರಿ ನಗರಸಭೆಯಲ್ಲಿ ಪ್ರಸ್ತುತ 16 ಆಟೊ ಟಿಪ್ಪರ್‌ಗಳಿವೆ. ಟಿಪ್ಪರ್‌ಗಳ ಕೊರತೆಯಿಂದ ಮನೆ–ಮನೆಯಿಂದ ನಿತ್ಯ ಕಸ ಸಂಗ್ರಹಿಸುವುದು ಸಾಧ್ಯವಾಗುತ್ತಿಲ್ಲ. 4 ಟಿಪ್ಪರ್‌ಗಳಿಗೆ ಜಿಲ್ಲಾಧಿಕಾರಿಯವರು ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಟೆಂಡರ್‌ ಕರೆಯಬೇಕಿದೆ. ಟಿಪ್ಪರ್‌ ಹೋಗುವುದು ತಡವಾದರೆ, ಖಾಲಿ ನಿವೇಶನ, ರಸ್ತೆ ಬದಿ, ಮರದ ಬುಡಗಳಿಗೆ ಕಸವನ್ನು ತಂದು ನಿವಾಸಿಗಳು ಸುರಿಯುತ್ತಾರೆ ಎಂದು ನಗರಸಭೆ ಸಿಬ್ಬಂದಿ ಹೇಳಿದರು. 

ಕಸ ಪ್ರತ್ಯೇಕಿಸುವ ಸವಾಲು

‘ಮನೆ–ಮನೆಗಳಿಂದ ಕಸ ಸಂಗ್ರಹಿಸುವ ಆಟೊ ಟಿಪ್ಪರ್‌ಗಳಲ್ಲಿ ಸ್ವಚ್ಛತೆ ಜಾಗೃತಿಯ ಹಾಡುಗಳನ್ನು ನಿತ್ಯ ಪ್ರಸಾರ ಮಾಡಲಾಗುತ್ತದೆ. ಘನತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಿ ಕೊಡುವುದರಿಂದ ಕಸದ ವಿಲೇವಾರಿ ಸುಲಭವಾಗುತ್ತದೆ. ಆದರೆ ಬಹುತೇಕ ಮನೆಯವರು ಹಸಿ ಮತ್ತು ಒಣ ಕಸವನ್ನು ಒಟ್ಟಿಗೆ ಕೊಡುವುದರಿಂದ ಅದನ್ನು ಪ್ರತ್ಯೇಕಿಸುವುದೇ ದೊಡ್ಡ ಸವಾಲಾಗಿದೆ’ ಎನ್ನುತ್ತಾರೆ ನಗರಸಭೆಯ ಪರಿಸರ ಅಧಿಕಾರಿ ಶಿವರಾಜು.  ‘ಹಾವೇರಿ ನಗರದಲ್ಲಿ ನಿತ್ಯ 16 ರಿಂದ 17 ಟನ್‌ ಘನತ್ಯಾಜ್ಯ ಉತ್ಪತ್ಪಿಯಾಗುತ್ತದೆ. 16 ಆಟೊ ಟಿಪ್ಪರ್‌ಗಳ ಮೂಲಕ ಮನೆ–ಮನೆಗಳಿಂದ ಕಸ ಸಂಗ್ರಹಿಸಿ ಗೌರಾಪುರದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತದೆ. ಸುಮಾರು 2 ರಿಂದ 3 ಟನ್‌ ಘನತ್ಯಾಜ್ಯವು ಹಸಿ ಮತ್ತು ಒಣಕಸವಾಗಿ ಪ್ರತ್ಯೇಕವಾಗಿ ಬರುವುದಿಲ್ಲ. ಇದನ್ನು ಪ್ರತ್ಯೇಕಿಸಲು 6ರಿಂದ 8 ಕಾರ್ಮಿಕರು ಶ್ರಮಿಸಬೇಕು’ ಎಂದು ಮಾಹಿತಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT