ಗುರುವಾರ , ಸೆಪ್ಟೆಂಬರ್ 23, 2021
28 °C
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ

ಆರ್ಥಿಕ ಪ್ಯಾಕೇಜ್‌: ಫಲಾನುಭವಿ ಗುರುತಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ರಾಜ್ಯ ಸರ್ಕಾರದ ಹೊಸ ಬಜೆಟ್ ಘೋಷಿತ ಕಾರ್ಯಕ್ರಮಗಳ ಆರಂಭ ಹಾಗೂ ರಾಜ್ಯ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಅಡಿ ಪರಿಹಾರ ಒದಗಿಸಲು ಫಲಾನುಭವಿಗಳ ಗುರುತಿಸುವ ಕೆಲಸ ಆರಂಭಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿಡಿಯೊ ಸಂವಾದದ ಮೂಲಕ ತಾಲ್ಲೂಕು ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು.

ಕೋವಿಡ್ ಲಾಕ್‍ಡೌನ್‍ನಿಂದ ತೊಂದರೆಗೊಳಗಾದ ವಿವಿಧ ವೃತ್ತಿಪರ ಸಮುದಾಯಗಳಿಗೆ ಸರ್ಕಾರ ಹಲವು ಪ್ರೋತ್ಸಾಹದಾಯಕ ನೆರವನ್ನು ಘೋಷಿಸಿದೆ. ಇವರಿಂದ ಅರ್ಜಿ ಸ್ವೀಕರಿಸಿ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ತಹಶೀಲ್ದಾರ್‌ಗಳು ಹಾಗೂ ಯೋಜನೆಗಳ ವ್ಯಾಪ್ತಿಗೆ ಬರುವ ಅಧಿಕಾರಿಗಳು ಕ್ರಮವಹಿಸುವಂತೆ ಸೂಚನೆ ನೀಡಿದರು.

ನಷ್ಟದ ವಿವರ ಸಂಗ್ರಹಿಸಿ: ಹೂ ಬೆಳೆಗಾರರು, ತರಕಾರಿ ಹಾಗೂ ಹಣ್ಣು ಬೆಳೆಗಾರರಿಗೆ ಕೋವಿಡ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ ಕಾರಣ ಪರಿಹಾರ ಘೋಷಿಸಿದೆ. ಈಗಾಗಲೇ ಸಮಿತಿಯನ್ನು ರಚಿಸಿ ನಷ್ಟದ ವಿವರ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ಈ ಕುರಿತಂತೆ ತೋಟಗಾರಿಕಾ, ಕೃಷಿ , ಕಂದಾಯ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಅಗಸ ವೃತ್ತಿಯಲ್ಲಿರುವ ಜನರಿಗೆ ಹಾಗೂ ಕ್ಷೌರಿಕ ವೃತ್ತಿ, ಆಟೊ ಹಾಗೂ ಟ್ಯಾಕ್ಸಿ ಚಾಲಕರಿಗೆ ತಲಾ ₹5 ಸಾವಿರ ಒಂದು ಬಾರಿ ಪರಿಹಾರ ಘೋಷಣೆ ಮಾಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಈ ಕುರಿತಂತೆ ಮಾಹಿತಿ ಸಂಗ್ರಹಿಸಿ ಅರ್ಹರಿಗೆ ಅಗತ್ಯ ಪರಿಹಾರ ನೀಡುವ ನಿಟ್ಟಿನಲ್ಲಿ ತಹಶೀಲ್ದಾರ್‌ಗಳೊಂದಿಗೆ ಸಮನ್ವಯ ಸಾಧಿಸುವಂತೆ ಸೂಚನೆ ನೀಡಿದರು.

ಪ್ರೋತ್ಸಾಹದಾಯಕ ನೆರವು: ಕೈಗಾರಿಕೆ, ಸಣ್ಣ ಕೈಗಾರಿಕೆಗಳಿಗೆ ನೆರವು, ನೇಕಾರರಿಗೆ, ರೈತರಿಗೆ ಬಡ್ಡಿರಹಿತ ಸಾಲ ಸೇರಿದಂತೆ ಹಲವು ಪರಿಹಾರ ಯೋಜನೆಗಳನ್ನು ಸರ್ಕಾರ ಪ್ರಕಟಿಸಿದೆ. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರವು ಹಲವು ಪ್ರೋತ್ಸಾಹದಾಯಕ ನೆರವು ಪ್ರಕಟಿಸಿದೆ. ಈ ಕುರಿತಂತೆ ಸಂಬಂಧಿಸಿದ ಇಲಾಖೆಗಳು ಫಲಾನುಭವಿಗಳನ್ನು ನೋಂದಾಯಿಸಿ ನೆರವು ಒದಗಿಸುವ ಕಾರ್ಯವನ್ನು ಮಾಡುವಂತೆ ಸೂಚನೆ ನೀಡಿದರು.

ರಾಜ್ಯ ಸರ್ಕಾರ 2020-21ನೇ ಸಾಲಿನ ಬಜೆಟ್ ಘೋಷಿತ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ನೀರಾವರಿ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಯ ಹೊಸ ಯೋಜನೆಗಳ ವಿಸ್ತೃತ ಕ್ರಿಯಾಯೋಜನೆಗಳನ್ನು ತ್ವರಿತವಾಗಿ ತಯಾರಿಸಿಕೊಂಡು ಅನುಷ್ಠಾನಕ್ಕೆ ಸಿದ್ಧವಾಗಬೇಕು. ಗಂಭೀರವಾಗಿ ಈ ವಿಷಯವನ್ನು ಪರಿಗಣಿಸಿ ಈಗಿನಿಂದಲೇ ಕಾರ್ಯೋನ್ಮುಖರಾಗುವಂತೆ ಸೂಚನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು