ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಅತಿಯಾದ ಮಳೆ; ಜಲಾವೃತವಾದ ಬೆಳೆ

ಜಿಲ್ಲೆಯಲ್ಲಿ 4,335 ಹೆಕ್ಟೇರ್‌ ಬೆಳೆನಷ್ಟ: ನೆರೆ ಪರಿಹಾರಕ್ಕೆ ಕಾದು ಕುಳಿತಿರುವ ರೈತರು
Last Updated 27 ಜುಲೈ 2021, 2:21 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಬೆಳೆಗಳು ಜಲಾವೃತಗೊಂಡು ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ 1,348 ಹೆಕ್ಟೇರ್‌ ತೋಟಗಾರಿಕೆ ಬೆಳೆ ಮತ್ತು 2,987 ಹೆಕ್ಟೇರ್‌ ಕೃಷಿ ಬೆಳೆ ಸೇರಿದಂತೆ ಒಟ್ಟು 4,335 ಹೆಕ್ಟೇರ್‌ ಬೆಳೆಗಳು ನೀರುಪಾಲಾಗಿವೆ.

₹8.55 ಕೋಟಿ ಮೌಲ್ಯದ ಕೃಷಿ ಬೆಳೆ ಹಾಗೂ ₹2.51 ಕೋಟಿ ಮೌಲ್ಯದ ತೋಟಗಾರಿಕೆ ಬೆಳೆಗಳು ಸೇರಿದಂತೆ ಒಟ್ಟು ₹11 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ. ₹72 ಲಕ್ಷ ಮೌಲ್ಯದ ಭತ್ತ, ₹62 ಲಕ್ಷ ಮೌಲ್ಯದ ಶೇಂಗಾ, ₹98 ಲಕ್ಷ ಮೌಲ್ಯದ ಸೋಯಾಬಿನ್‌, ₹75 ಲಕ್ಷ ಮೌಲ್ಯದ ಹತ್ತಿ, ₹3 ಲಕ್ಷ ಮೌಲ್ಯದ ಕಬ್ಬು ಹಾಗೂ ₹5.31 ಕೋಟಿ ಮೌಲ್ಯದ ಮೆಕ್ಕೆಜೋಳ (ಗೋವಿನಜೋಳ) ಹಾನಿಯಾಗಿವೆ.

ಜುಲೈ 19ರಿಂದ 26ರವರೆಗೆ ಹಗಲು–ರಾತ್ರಿ ಬಿಡುವಿಲ್ಲದೆ ಸುರಿದ ಮಳೆಯಿಂದ ಜಿಲ್ಲೆಯ ವಿವಿಧೆಡೆ ತೋಟಗಾರಿಕಾ ಬೆಳೆಗಳು ಹೆಚ್ಚು ಹಾನಿಯಾದವು.

ವಾಡಿಕೆಗಿಂತ ಹೆಚ್ಚು ಮಳೆ:ಜಿಲ್ಲೆಯಲ್ಲಿ ಜೂನ್‌ ತಿಂಗಳಲ್ಲಿ 119 ಮಿಲಿ ಮೀಟರ್‌ ವಾಡಿಕೆ ಮಳೆಯಾಗಬೇಕು. ಆದರೆ, 128 ಮಿ.ಮೀ.ನಷ್ಟು ಮಳೆಯಾಗಿದ್ದು, ಶೇ 8ರಷ್ಟು ಹೆಚ್ಚು ಮಳೆಯಾಗಿದೆ. ಜುಲೈ 1ರಿಂದ 23ರವರೆಗೆ 124 ಮಿ.ಮೀ. ವಾಡಿಕೆ ಮಳೆಯಾಗುವ ಪ್ರದೇಶಗಳಲ್ಲಿ 145 ಮಿ.ಮೀ. ಮಳೆಯಾಗಿದ್ದು, ಶೇ 17ರಷ್ಟು ಹೆಚ್ಚುವರಿ ಮಳೆ ಸುರಿದಿದೆ.

ಅತಿವೃಷ್ಟಿಯಿಂದ ವರದಾ, ಕುಮದ್ವತಿ ಮತ್ತು ತುಂಗಭದ್ರಾ ನದಿಗಳು ಉಕ್ಕಿ ಹರಿದವು. ಮಳೆಯ ಅಬ್ಬರ ಮತ್ತು ನದಿಗಳ ಉಬ್ಬರದಿಂದ ತಗ್ಗಿನಲ್ಲಿದ್ದ ಕೃಷಿ ಜಮೀನುಗಳ ಬೆಳೆಗಳು ನೀರಿನಲ್ಲಿ ಮುಳುಗಿದವು. ರೈತರಿಗೆ ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬಂಥ ಪರಿಸ್ಥಿತಿ ಉಂಟಾಗಿದೆ.

ಹಿರೇಕೆರೂರಿನಲ್ಲಿ ಹೆಚ್ಚು ನಷ್ಟ:ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ಹಿರೇಕೆರೂರು (1,100 ಹೆ.) ಮತ್ತು ರಟ್ಟೀಹಳ್ಳಿ (900 ಹೆ.) ತಾಲ್ಲೂಕುಗಳಲ್ಲಿ ಅತಿ ಹೆಚ್ಚು ನಷ್ಟ ಉಂಟಾಗಿದ್ದರೆ, ಬ್ಯಾಡಗಿ ತಾಲ್ಲೂಕಿನಲ್ಲಿ (32 ಹೆ.) ಅತಿ ಕಡಿಮೆ ನಷ್ಟ ಉಂಟಾಗಿದೆ. ಹಿರೇಕೆರೂರು ತಾಲ್ಲೂಕಿನಲ್ಲಿ ಬಾಳೆ, ಶುಂಠಿ, ಮೆಣಸಿನಗಿಡ, ಎಲೆಕೋಸು, ಎಲೆಬಳ್ಳಿ, ಟೊಮೆಟೊ ಬೆಳೆಗಳು ನೀರುಪಾಲಾಗಿವೆ.

ರಾಣೆಬೆನ್ನೂರು ತಾಲ್ಲೂಕಿನಲ್ಲಿ ಭತ್ತ, ಈರುಳ್ಳಿ, ಟೊಮೆಟೊ; ಹಾವೇರಿ ತಾಲ್ಲೂಕಿನಲ್ಲಿ ಮೆಣಸಿನಗಿಡ, ಟೊಮೆಟೊ; ಸವಣೂರು ತಾಲ್ಲೂಕಿನಲ್ಲಿ ಬಾಳೆ, ಚೆಂಡು ಹೂ; ಶಿಗ್ಗಾವಿ ತಾಲ್ಲೂಕಿನಲ್ಲಿ ಶುಂಠಿ, ಶೇಂಗಾ, ಟೊಮೆಟೊ, ಭತ್ತ ಹಾಗೂ ಹಾನಗಲ್‌ ತಾಲ್ಲೂಕಿನಲ್ಲಿ ಸೋಯಾಬಿನ್‌ ಬೆಳೆಗಳು ಹೆಚ್ಚು ಹಾನಿಯಾಗಿವೆ.

ಸಮೀಕ್ಷೆಗೆ ಸೂಚನೆ:ನದಿ ಹಾಗೂ ಕೆರೆ ತಗ್ಗು ಪ್ರದೇಶಗಳ ಜಮೀನಿನಲ್ಲಿ ನೀರು ನಿಂತು ಮುಳುಗಡೆಯಾದ ಪ್ರದೇಶವನ್ನು ಖುದ್ದಾಗಿ ಹೋಗಿ ಪರಿಶೀಲನೆ ನಡೆಸಬೇಕು. ಬೆಳೆ ಮುಳುಗಡೆ ಹಾಗೂ ಹಾನಿಯಾದ ಬೆಳೆಗಳ ನಿಖರ ಮಾಹಿತಿಯನ್ನು ಸಂಗ್ರಹಿಸಿ ಜಮೀನಿನ ಸರ್ವೇ ನಂಬರ್‌ವಾರು ಮಾಹಿತಿ ಸಲ್ಲಿಸುವಂತೆ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದ್ದಾರೆ.

ಅತಿವೃಷ್ಟಿ ಮತ್ತು ಪ್ರವಾಹದಿಂದ ಉಂಟಾದ ಬೆಳೆನಷ್ಟದ ವಿವರ (ಹೆಕ್ಟೇರ್‌ಗಳಲ್ಲಿ)

ತಾಲ್ಲೂಕು

ತೋಟಗಾರಿಕೆ ಕೃಷಿ ಒಟ್ಟು
ಹಿರೇಕೆರೂರು 600 500 1,100
ರಟ್ಟೀಹಳ್ಳಿ 500 400 900
ಶಿಗ್ಗಾವಿ 19 670 689
ರಾಣೆಬೆನ್ನೂರು 9 574 583
ಹಾನಗಲ್‌ 116 370 486
ಹಾವೇರಿ 68 271 339
ಸವಣೂರು 28 177 205
ಬ್ಯಾಡಗಿ 7 25 32
ಒಟ್ಟು 1,348 2,987 4,335

***

ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿದ ನಂತರ, ರೈತರ ಖಾತೆಗೆ ಪರಿಹಾರದ ಹಣ ವರ್ಗಾವಣೆಯಾಗಲಿದೆ
– ಪ್ರದೀಪ ಎಲ್‌., ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

***

ಪರಿಹಾರದ ವಿವರ (ಪ್ರತಿ ಹೆಕ್ಟೇರ್‌ಗೆ)
₹6,800:
ಮಳೆಯಾಶ್ರಿತ ಜಮೀನುಗಳಿಗೆ ಪರಿಹಾರ
₹13,500:ನೀರಾವರಿ ಜಮೀನುಗಳಿಗೆ ಪರಿಹಾರ
₹18,000:ಬಹುವಾರ್ಷಿಕ ಬೆಳೆಗಳಿಗೆ ಪರಿಹಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT