ಮಂಗಳವಾರ, ಜನವರಿ 21, 2020
20 °C

ನಕಲಿ ಅಂಕಪಟ್ಟಿ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ನರ್ಸರಿ ಟೀಚರ್ಸ್‌ ಟ್ರೈನಿಂಗ್ ಕೋರ್ಸ್‌ನ (ಎನ್‌ಟಿಟಿಸಿ) ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ ವಿತರಿಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ಶುಕ್ರವಾರ ನಗರದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಟಿ. ದುರ್ಗಾನಾಯ್ಕ ಮತ್ತು ಹಿರೇಕೆರೂರಿನ ವಿದ್ಯಾನಗರದ ಸತೀಶ ಪಟ್ಟಣಶೆಟ್ಟಿ ಬಂಧಿತರು. 

ಸಾಗರದ ಚೌಡೇಶ್ವರಿ ಎಸ್‌ಸಿ–ಎಸ್ಟಿ ಶಿಕ್ಷಣ ಸಂಸ್ಥೆಯ ಲೆಟರ್‌ ಪ್ಯಾಡ್‌ ಅನ್ನು ದುರುಪಯೋಗ ಪಡಿಸಿಕೊಂಡು, ಪ್ರಾಂಶುಪಾಲರು, ಜ್ಞಾನಸಾಗರ ಎನ್‌.ಟಿ.ಸಿ. ಕಾಲೇಜು, ಸಾಗರ ಎಂಬ ಮೊಹರು ಬಳಸಿ, ವಿದ್ಯಾರ್ಥಿಗಳಿಗೆ ಎನ್‌ಟಿಟಿಸಿ ನಕಲಿ ಅಂಕಪಟ್ಟಿಯನ್ನು ಮತ್ತು ಪ್ರಮಾಣಪತ್ರವನ್ನು ನೀಡುತ್ತಿದ್ದಾರೆ ಎಂದು ಚೌಡೇಶ್ವರಿ ಸಂಸ್ಥೆಯ ಅಧ್ಯಕ್ಷ ಕೆ.ಮಂಜಪ್ಪ ಎಂಬುವರು ಜ.3ರಂದು ದೂರು ನೀಡಿದ್ದರು. 

ಹಿರೇಕೆರೂರಿನ ಸಹ್ಯಾದ್ರಿ ಬಾಲ ಪ್ರಶಿಕ್ಷಣ ವಿದ್ಯಾಪೀಠದಿಂದ ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ ನೀಡಲಾಗುತ್ತಿತ್ತು. ಈ ಸಂಸ್ಥೆ 2005–06ರಲ್ಲಿ ನೋಂದಣಿಯಾಗಿದೆ. ಆದರೆ, ಮತ್ತೆ ನೋಂದಣಿಯನ್ನು ನವೀಕರಿಸಿಕೊಂಡಿಲ್ಲ. ಅಂಕಪಟ್ಟಿ ಮತ್ತು ಪ್ರಮಾಣಪತ್ರವನ್ನು ದುರ್ಗಾನಾಯಕ್‌ ಅವರು ವಿದ್ಯಾರ್ಥಿಗಳಿಂದ ಹಣ ಪಡೆದು ವಿತರಿಸುತ್ತಿದ್ದರು. 2005–06ರಿಂದ ಇಲ್ಲಿಯವರೆಗೆ, ಪ್ರತಿ ವರ್ಷ ಸುಮಾರು 30ರಿಂದ 40 ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ತಿಳಿಸಿದರು. 

ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಹಾವೇರಿಯ ಸೈಬರ್‌ ಕ್ರೈಂ ಠಾಣೆಯಲ್ಲಿ ದಾಖಲಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು