ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಬಾರುಕೋಲು ಚಳವಳಿ

ಒಟಿಎಸ್‌ಗಾಗಿ ಆಗ್ರಹ: ಬ್ಯಾಂಕ್‌ ಸಿಬ್ಬಂದಿ, ಸಂಸದ ಉದಾಸಿ ವಿರುದ್ಧ ರೈತರ ಆಕ್ರೋಶ
Last Updated 13 ಏಪ್ರಿಲ್ 2022, 4:54 IST
ಅಕ್ಷರ ಗಾತ್ರ

ಮಾಕನೂರು (ಕುಮಾರಪಟ್ಟಣ): ಒಟಿಎಸ್‌ ಸೌಲಭ್ಯ ಕಲ್ಪಿಸಿ ರೈತರನ್ನು ಋಣಮುಕ್ತರನ್ನಾಗಿ ಮಾಡುವಂತೆ ಒತ್ತಾಯಿಸಿ ಕಳೆದ 20 ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದರೂ ಭಂಡತನಕ್ಕೆ ಅಂಟಿಕೊಂಡಿರುವ ಜನಪ್ರತಿನಿಧಿಗಳು ಹಾಗೂ ಬ್ಯಾಂಕ್‌ ಅಧಿಕಾರಿಗಳು ದಿಟ್ಟ ನಿಲುವು ತೋರುತ್ತಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಆರೋಪಿಸಿದರು.

ಇಲ್ಲಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಅಧಿಕಾರಿಗಳ ವರ್ತನೆ ಖಂಡಿಸಿ ಒಟಿಎಸ್ ಸೌಲಭ್ಯವಂಚಿತ ರೈತರು ಹಮ್ಮಿಕೊಂಡಿದ್ದ ಬಾರುಕೋಲು ಚಳವಳಿ ಭಜನೆ ಮತ್ತು ಅಣಕು ಶವಸಂಸ್ಕಾರ ಚಳವಳಿಯಲ್ಲಿ ಪಾಲ್ಗೊಂಡು ಮಾತನಾಡಿದರು. ರೈತರಿಗೆ ಸೂಕ್ತ ಮಾರ್ಗದರ್ಶನ ನೀಡದೆ ಅವರ ಸಹಿ ಪಡೆದು ಒಟಿಎಸ್‌ ಯೋಜನೆ ರೈತರಿಗೆ ಸಿಗದಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಸಿಗಬೇಕಾದ ಸಾಲ ಸೌಲಭ್ಯಗಳು ಸಿಗುತ್ತಿಲ್ಲ. ತಿರುವಳಿ ಸಾಲ ಪಡೆಯಲು ರೈತರು ಅರ್ಹತೆ ಹೊಂದಿದ್ದರೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ಎಡವಟ್ಟಿನಿಂದ ನೂರಾರು ರೈತರು ಒಟಿಎಸ್ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಧರಣಿ ಸ್ಥಳಕ್ಕೆ ಕೃಷಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಲೀಡ್‌ ಬ್ಯಾಂಕ್‌ ಅಧಿಕಾರಿಗಳು ಭೇಟಿ ನೀಡಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಮೂಗಿಗೆ ತುಪ್ಪ ಸವರಿ ಹೋದವರು ಇತ್ತ ತಿರುಗಿ ನೋಡುತ್ತಿಲ್ಲ. ರೈತರು ಋಣಮುಕ್ತರಾಗಿ ನೆಮ್ಮದಿಯಿಂದ ಬದುಕುವುದು ಸರ್ಕಾರ ಮತ್ತು ಅಧಿಕಾರಿಗಳಿಗೆ ಇಷ್ಟವಿಲ್ಲ ಎಂದು ಅಸಮಾದಾನ ಹೊರ ಹಾಕಿದರು.

ಏ.14ರಂದು ಅರೆಬೆತ್ತಲೆ ಧರಣಿ: ಏ.14ರಂದು ಡಾ.ಬಿ.ಆರ್‌ ಅಂಬೇಡ್ಕರ್‌ ಜಯಂತಿ ಹಿನ್ನೆಲೆಯಲ್ಲಿ ಅರೆಬೆತ್ತಲೆ ಧರಣಿ ನಡೆಸಿ ಜನಪ್ರತಿನಿಧಿಗಳು ಹಾಗೂ ರೈತರಿಗೆ ವಂಚನೆ ಮಾಡುತ್ತಿರುವ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತೇವೆ. ನಮ್ಮ ಸಮಸ್ಯೆ ಈಡೇರುವ ತನಕ ವಿರಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರೈತರಿಂದ ಭಜನೆ: ಹಲವು ದಿನಗಳಿಂದ ರೈತರ ಧರಣಿ ನಡೆಯುತ್ತಿದ್ದರೂ ಸೌಜನ್ಯಕ್ಕೂ ಭೇಟಿ ಕೊಡದೆ ಜಾಣ ಕುರುಡು ಪ್ರದರ್ಶಿಸುತ್ತಿರುವ ಸಂಸದ ಶಿವಕುಮಾರ ಉದಾಸಿ ಅವರ ಅಣಕು ಶವಸಂಸ್ಕಾರ ನಡೆಸಿದರು. ಸಂಸದರಾಗಿ ಹೆಚ್ಚಿನ ಜವಾಬ್ದಾರಿ ಇದ್ದರೂ ರೈತರ ನೋವು ಆಲಿಸಲು ಮುಂದಾಗುತ್ತಿಲ್ಲ. ಧರಣಿ ಸ್ಥಳದಲ್ಲಿ ಭಜನೆ ಮಾಡಿದ ಬಳಿಕ ಬಾರುಕೋಲು ಬೀಸಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಪಟ್ಟಣ ಪಿಎಸ್ಐ ಸಂಜೀವಕುಮಾರ್ ಜೆ.ಎಸ್., ಹಲಗೇರಿ ಠಾಣೆ ಪಿಎಸ್‌ಐ ಕೋಮಲಾಚಾರಿ ಹಾಗೂ ಸಿಬ್ಬಂದಿ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಿದರು.

ರೈತ ಮುಖಂಡ ಸುರೇಶ್ ಮಲ್ಲಾಪುರ, ಹರಿಹರಗೌಡ ಪಾಟೀಲ, ಹನುಮಂತಪ್ಪ ಕುಂಬಳೂರು, ಶಿವನಗೌಡ ಅಳುವಿ, ಅಶೋಕ ಗಂಗನಗೌಡ್ರ, ಸೋಮಪ್ಪ ಬಣಕಾರ, ಭೀಮೇಶ್ ಪೂಜಾರ, ಕುಮಾರ ಮಾವಿನತೋಪು, ಬಸವರಾಜ ಯಲ್ಲಕ್ಕನವರ, ಯಲ್ಲಪ್ಪ ಡಿ. ಓಲೇಕಾರ್, ಹನುಮಂತಪ್ಪ ಹೊಟ್ಟೆ ಮಲ್ಲಪ್ಪನವರ, ಜಮಾಲಸಾಬ್ ಶೇಕಸನದಿ, ಮಂಜಣ್ಣ ಮುಸ್ಟೂರನಾಯಕ, ಶಂಭು ಪಾಟೀಲ, ಶಿವಪ್ಪ ಬಾರ್ಕಿ, ಬಸವಣ್ಣೆಪ್ಪ ಸಣ್ಣಮನಿ, ಕುಮಾರ್‌ ನಂದಿಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT