ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕೊರೊನಾ ವಾರಿಯರ್‌ಗಳ ಸೇವೆ ಅನನ್ಯ': ಕಾಂಗ್ರೆಸ್‌ ಮುಖಂಡರಿಂದ ಅಭಿನಂದನಾ ಸಮಾರಂಭ

ಹಾವೇರಿ ವಿಧಾನಸಭಾ ಕ್ಷೇತ್ರ
Last Updated 3 ಆಗಸ್ಟ್ 2021, 14:35 IST
ಅಕ್ಷರ ಗಾತ್ರ

ಹಾವೇರಿ: ‘ಕೋವಿಡ್‌ನಂಥ ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಜೀವ ಉಳಿಸಲುಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ‘ಕೊರೊನಾ ವಾರಿಯರ್‌’ಗಳಾದ ವೈದ್ಯಕೀಯ ಸಿಬ್ಬಂದಿ ಸೇವೆ ಶ್ಲಾಘನೀಯ. ಅವರನ್ನು ಗೌರವಿಸಬೇಕಾಗಿರುವುದು ನಮ್ಮ ಕರ್ತವ್ಯ’ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಅಭಿಪ್ರಾಯಪಟ್ಟರು.

ನಗರದ ಕೆಇಬಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕೋವಿಡ್‌ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗೆ ಹಾವೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡರಿಂದ ಅಭಿನಂದನಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.

ವೈದ್ಯರು, ಶುಶ್ರೂಷಕರು, ತಾಂತ್ರಿಕ ಸಿಬ್ಬಂದಿ ತೋರಿದ ಬದ್ಧತೆ, ಕರ್ತವ್ಯ ಪ್ರಜ್ಞೆ ಮತ್ತು ನಿಸ್ವಾರ್ಥ ಸೇವೆಯು ವೈದ್ಯಕೀಯ ಸಿಬ್ಬಂದಿ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದೆ. ಕೊರೊನಾ ಸೋಂಕಿತರನ್ನು ಮನೆಯವರೇ ಕೀಳಾಗಿ ನೋಡುತ್ತಿದ್ದ ಸಂದರ್ಭ ವೈದ್ಯಕೀಯ ಸಿಬ್ಬಂದಿ ಕಾಳಜಿಯಿಂದ ಶುಶ್ರೂಷೆ ಮಾಡಿ, ಗುಣಮುಖರಾಗಿಸಲು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್‌.ಹಾವನೂರ ಮಾತನಾಡಿ, ‘ಜಿಲ್ಲೆಯಲ್ಲಿ 22 ಸಾವಿರಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ಕಂಡು ಬಂದಿವೆ. ಎಲ್ಲರನ್ನೂ ಗುಣಪಡಿಸಲು ಶಕ್ತಿಮೀರಿ ಶ್ರಮಿಸಿದ್ದೇವೆ. ಉತ್ತಮ ಚಿಕಿತ್ಸೆ ನೀಡಿ, ರೋಗಿಗಳ ಜೀವವನ್ನು ಉಳಿಸಿದ್ದೇವೆ. ನಮ್ಮ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಪಿಪಿಇ ಕಿಟ್‌ ಧರಿಸಿ, ಉಸಿರುಗಟ್ಟಿಸುವ ವಾತಾವರಣದಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಎಷ್ಟೋ ಮಂದಿ ಮನೆಗಳಿಗೆ ಹೋಗದೆ, ವಾರದ ರಜೆ ತೆಗೆದುಕೊಳ್ಳದೆ ದುಡಿದಿದ್ದಾರೆ ಎಂದು ಕೊಂಡಾಡಿದರು.

ಜಿಲ್ಲಾಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕಾಂಗ್ರೆಸ್‌ ಮುಖಂಡ ಕೊಟ್ರೇಶಪ್ಪ ಬಸೇಗಣ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಂ.ಹಿರೇಮಠ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ,ಎಸ್.ಎಫ್‌.ಎನ್. ಗಾಜಿಗೌಡ್ರ, ಎಂ.ಎಂ.ಮೈದೂರ, ಕಾಂಗ್ರೆಸ್‌ ಶಹರ ಘಟಕದ ಅಧ್ಯಕ್ಷ ಪ್ರಭು ಬಿಷ್ಟನಗೌಡ್ರ, ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸನ್ನ ಹಿರೇಮಠ, ನಗರಸಭೆಯ ಸದಸ್ಯರು, ಕಾಂಗ್ರೆಸ್‌ ಕಾರ್ಯಕರ್ತರು, ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT