ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ಮನೆ ನಿರ್ಮಾಣ ಶೀಘ್ರ ಆರಂಭಿಸಿ

ನೆರೆ ಹಾನಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ಕುಮಾರ್‌ ಮೀನಾ ಕಟ್ಟುನಿಟ್ಟಿನ ಸೂಚನೆ
Last Updated 20 ಡಿಸೆಂಬರ್ 2019, 14:38 IST
ಅಕ್ಷರ ಗಾತ್ರ

ಹಾವೇರಿ: ನೆರೆ ಹಾವಳಿಗೆ ತುತ್ತಾಗಿ ಪೂರ್ಣವಾಗಿ ಮನೆ ಕಳೆದುಕೊಂಡಿರುವ ಸಂತ್ರಸ್ತರ ಎಲ್ಲ ಮನೆಗಳ ನಿರ್ಮಾಣ ಕಾರ್ಯವನ್ನು ಒಂದು ವಾರದೊಳಗೆ ಆರಂಭಿಸಲು ಜಿಲ್ಲೆಯ ತಹಶೀಲ್ದಾರ್‌ಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‍ಕುಮಾರ್ ಮೀನಾ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅತಿವೃಷ್ಟಿ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿ ಕುರಿತು ಪರಿಶೀಲನೆ ನಡೆಸಿದ ಅವರು ಕನಿಷ್ಠ ಆಗಸ್ಟ್ ತಿಂಗಳಲ್ಲಿ ಹಾನಿಯಾದ ಮನೆಗಳ ಪುನರ್ ನಿರ್ಮಾಣ ಕಾರ್ಯವಾದರೂ ಒಂದು ವಾರದೊಳಗೆ ಆರಂಭವಾಗಲೇಬೇಕು ಎಂದು ಸೂಚಿಸಿದರು.

ಸಂತ್ರಸ್ತರಿಗೆ ಈಗಾಗಲೇ ಮೊದಲ ಕಂತಾಗಿ ₹ 1 ಲಕ್ಷ ಪಾವತಿಸಲಾಗಿದೆ. ಮನೆಗಳ ನಿರ್ಮಾಣ ಕಾರ್ಯ ಆರಂಭಿಸಿದರೆ ಎರಡನೇ ಹಂತದ ಜಿ.ಪಿ.ಎಸ್.ಮಾಡಿ ನಿಗಮದ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದರೆ ಎರಡನೇ ಕಂತಿನ ಹಣ ಪಾವತಿಸಲಾಗುವುದು. ತಕ್ಷಣವೇ ಈ ಕಾರ್ಯವನ್ನು ಆರಂಭಿಸಬೇಕು ಎಂದು ಹೇಳಿದರು.

ನೆರೆಯಿಂದ ಹಾನಿಯಾದ ಮನೆಗಳನ್ನು ಎ, ಬಿ ಹಾಗೂ ಸಿ ಎಂದು ವಿಂಗಡಿಸಲಾಗಿದೆ. ಹೀಗಿದ್ದರೂ ಕೆಲವೆಡೆ ಎರಡು ಮೂರು ಬಾರಿ ಸರ್ವೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಸಿ ವರ್ಗದಿಂದ ಬಿ ವರ್ಗಕ್ಕೆ ಬದಲಾವಣೆಗಳಾಗಿವೆ. ಈ ಬದಲಾವಣೆಗೆ ಕಾರಣ ಕೇಳಿ ಸರ್ವೆ ಮಾಡಿದ ಅಧಿಕಾರಿಗಳಿಗೆ ನೋಟಿಸ್‌ ಜಾರಿಮಾಡಿ ವಿವರ ಪಡೆಯಿರಿ. ಯಾವುದೇ ಕಾರಣಕ್ಕೂ ಅನರ್ಹರು ಸೌಲಭ್ಯ ಪಡೆಯಬಾರದು. ಸಂತ್ರಸ್ತರಿಗೆ ಮನೆ ಪರಿಹಾರ ಪಾವತಿ ವಿಚಾರ ‘ರೆಡ್ ಅಲರ್ಟ್‌’ ಎಂದು ಭಾವಿಸಿ ನಾಳೆ ಸಂಜೆಯೊಳಗಾಗಿ ತಾಂತ್ರಿಕ ಕಾರಣಗಳಿಗಾಗಿ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಹಣ ಜಮೆಯಾಗಬೇಕು ಎಂದು ತಾಕೀತು ಮಾಡಿದರು.

ಆಗಸ್ಟ್ ಮಾಹೆಯಲ್ಲಿ ಬಿದ್ದ ಮಳೆಗೆ ಎ ವರ್ಗದಡಿ 305 ಮನೆಗಳು ಸಂಪೂರ್ಣ ಹಾಳಾಗಿದ್ದು, ಈ ಪೈಕಿ 304 ಮನೆಗಳಿಗೆ ₹3.04 ಕೋಟಿ ಪರಿಹಾರ ಪಾವತಿಸಿದೆ. ಬಿ ವರ್ಗದಡಿ 3,435 ಮನೆಗಳು ತೀವ್ರ ಹಾನಿಯಾಗಿದ್ದು ಈ ಎಲ್ಲ ಮನೆಗಳಿಗೂ ಪರಿಹಾರವಾಗಿ ₹34.35 ಕೋಟಿ ಪಾವತಿಸಲಾಗಿದೆ. ಸಿ ವರ್ಗದ ಅಲ್ಪಸ್ವಲ್ಪ ಹಾನಿಯಾದ 10,389 ಮನೆಗಳಿಗೆ ₹51.95 ಕೋಟಿ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮಾಹಿತಿ ನೀಡಿದರು.

ಅಕ್ಟೋಬರ್-2019ರ ಮಾಹೆಯ ಅತಿವೃಷ್ಟಿಗೆ ಎ ವರ್ಗದ 58, ಬಿ ವರ್ಗದ 2,354 ಹಾಗೂ ಸಿ ವರ್ಗದ 6,358 ಮನೆಗಳು ಸೇರಿದಂತೆ 8,770 ಮನೆಗಳು ಹಾನಿಯಾಗಿವೆ. ಆಗಸ್ಟ್‌ ಮತ್ತು ಅಕ್ಟೋಬರ್ ತಿಂಗಳಲ್ಲಿ ಎ ಮತ್ತು ಬಿ ವರ್ಗದ 5,136 ಮನೆಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಯಿಂದ ಅನುಮೋದನೆ ನೀಡಲಾಗಿದೆ. ಮನೆ ನಿರ್ಮಾಣಕ್ಕೆ ಸಂತ್ರಸ್ತರಿಗೆ ಜಾಗೃತಿ ಮೂಡಿಸಲಾಗಿದೆ. ಮುಖ್ಯಮಂತ್ರಿಗಳ ಮನವಿ ಪತ್ರ ವಿತರಿಸಲಾಗಿದೆ. ಈ ಪೈಕಿ 420 ಫಲಾನುಭವಿಗಳು ಮನೆಗಳ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ ಎಂದು ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಬೆಳೆಹಾನಿ ಹಾಗೂ ಬೆಳೆ ಪರಿಹಾರ ಕುರಿತಂತೆ ಮಾಹಿತಿ ಪಡೆದ ಅವರು ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಸೇರಿದಂತೆ 1,82,960 ಹೆಕ್ಟೇರ್ ಪ್ರದೇಶದ ಬೆಳೆ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳ ಮಳೆಗೆ ಹಾನಿಯಾಗಿದ್ದು, 1,57,465 ರೈತರು ಬಾಧಿತರಾಗಿದ್ದಾರೆ. ₹909.33 ಕೋಟಿ ಆರ್ಥಿಕ ನಷ್ಟವಾಗಿದೆ. ಮಾರ್ಗಸೂಚಿಯಂತೆ ₹154.21 ಕೋಟಿಗೆ ಬೇಡಿಕೆ ಸಲ್ಲಿಸಲಾಗಿದೆ. ಈವರೆಗೆ 33,644 ರೈತರಿಗೆ ₹56.06 ಕೋಟಿ ಪರಿಹಾರ ಪಾವತಿಸಲಾಗಿದೆ. 1,08,435 ರೈತರಿಗೆ ಪರಿಹಾರ ಪಾವತಿಸಬೇಕಾಗಿದೆ. ₹85.09 ಕೋಟಿ ರೈತರಿಗೆ ಹಣ ಪಾವತಿಸಬೇಕಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಅವರು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕ್ಕಮ್ಮನವರ, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT