ಮಂಗಳವಾರ, ಜೂನ್ 15, 2021
26 °C
ಲಾಕ್‌ಡೌನ್‌: ಪರಿಹಾರ ನೀಡಲು ರೈತರ ಆಗ್ರಹ

ತತ್ತರಿಸಿದ ಪುಷ್ಪ ಬೆಳೆಗಾರರು: ಪರಿಹಾರ ನೀಡಲು ರೈತರ ಆಗ್ರಹ

ಎಸ್‌.ಎಸ್‌.ನಾಯಕ Updated:

ಅಕ್ಷರ ಗಾತ್ರ : | |

Prajavani

ಮಾಕನೂರು (ಕುಮಾರಪಟ್ಟಣ): ಕೈತುಂಬ ಸಂಪಾದನೆ ಮಾಡಿ ನೆಮ್ಮದಿ ಕಾಣಬೇಕಿದ್ದ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರು ಗ್ರಾಮದ ಪುಷ್ಪ ಬೆಳೆಗಾರರು ಲಾಕ್‌ಡೌನ್‌ನಿಂದ ಬೆಳೆದ ಹೂ ಮಾರಾಟಲಾಗದೆ ಅಕ್ಷರಶಃ ಕಂಗಾಲಾಗಿದ್ದಾರೆ.

ಕಳೆದ ಬಾರಿ ಲಾಕ್‌ಡೌನ್‌ ಆಗಿ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡಿದ್ದಾಯಿತು. ಹೂ ಬೆಳೆಗಾರರಿಗಾಗಿ ಸರ್ಕಾರ ಘೋಷಿಸಿದ್ದ ನಷ್ಟ ಪರಿಹಾರ ನಮಗೆ ಸಿಗಲಿಲ್ಲ. ಈ ಬಾರಿಯಾದರೂ ಹಾಕಿದ ಬಂಡವಾಳ ಕೈಸೇರುವ ನಿರೀಕ್ಷೆಯಿತ್ತು. ಪುನಃ ಲಾಕ್‌ಡೌನ್‌ ಆಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಮಂಜಪ್ಪ ಸಾವಂತ ಬೇಸರ ವ್ಯಕ್ತಪಡಿಸಿದರು.

ಮುಕ್ಕಾಲು ಎಕರೆ ಜಮೀನನಲ್ಲಿ 800 ಮಲ್ಲಿಗೆ ಹೂವಿನ ಗಿಡಗಳನ್ನು ನಾಟಿ ಮಾಡಲಾಗಿದ್ದು, ಮಳೆಗಾಳಿಗೆ ಮೊಗ್ಗು ನಾಶವಾಗಿ ಗಿಡಗಳಷ್ಟೆ ಉಳಿದುಕೊಂಡಿವೆ. ಒಂದು ಕೆಜಿ ₹ 250-300 ಬಿಡಿ ಹೂ ಮಾರಾಟವಾಗುತ್ತಿತ್ತು. ಜಾತ್ರೆ, ಉತ್ಸವ, ದೇವಸ್ಥಾನಗಳಿಗೆ ನಿರ್ಬಂಧ ಹೇರಿದ್ದರಿಂದ ಹೂವಿಗೆ ಬೇಡಿಕೆ ಇಲ್ಲದಂತಾಗಿ ಹೊಲದಲ್ಲೆ ಉದುರುತ್ತಿದೆ. ಸುಮಾರು ₹ 1.5 ಲಕ್ಷ ನಷ್ಟವಾಗಲಿದೆ ಎಂದು ವಿವರಿಸಿದರು.

ಒಂದು ಎಕರೆಯಲ್ಲಿ 1500 ಕನಕಾಂಬರ (ಕಾಕಡ) ಗಿಡಗಳನ್ನು ಹಚ್ಚಿದ್ದು, ವ್ಯಾಪಾರವಿಲ್ಲದೆ ಹೊಲದಲ್ಲೆ ಒಣಗಿ ಹಾಳಾಗುತ್ತಿದೆ. ಸುಮಾರು ₹ 1 ಲಕ್ಷ ನಷ್ಟವಾಗಲಿದೆ. 1 ಎಕರೆಯಲ್ಲಿ ಬೆಳದ ಸುಗಂಧರಾಜ ಹೂವು ಕೈಗೆ ಬಂದಿದ್ದು, ₹ 80-90 ಸಾವಿರ ಆದಾಯ ಕಳೆದುಕೊಳ್ಳು ವಂತಾಗಿದೆ ಎಂದು ಕರಬಸಪ್ಪ ತುಮ್ಮಿನಕಟ್ಟಿ ನೋವು ತೋಡಿಕೊಂಡರು.

ಬೆಲೆ ಕುಸಿದು, ಬಾಯಿಗೆ ಬಂದಂತೆ ಕೇಳುತ್ತಾರೆ. ದಿನಕ್ಕೆ ಒಂದು ಆಳಿಗೆ ₹ 300ರಿಂದ ₹ 400 ಕೂಲಿ ಕೊಡಬೇಕು. ಬೆಳೆದ ಹೂವು ಬಿಡಿಸಲು ಕೂಲಿ ಕೊಡಲಾಗುತ್ತಿಲ್ಲ. ಹೂವು ಮಾರಲು ಹೋದರೆ ಈಗೇನು ಹಬ್ಬಗಳಿಲ್ಲ, ಸಮಾರಂಭಗಳಿಲ್ಲ ಹೂವು ಮುಡಿಸಿಕೊಂಡು ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಾರೆ ಎನ್ನುತ್ತಾರೆ ಕರಬಸಪ್ಪ.

ಪದೇ ಪದೆ ರೈತರು ಪೆಟ್ಟು ತಿನ್ನುತ್ತಿದ್ದು, ರೈತರ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಮಾರಾಟಕ್ಕೆ ಅವಕಾಶ ನೀಡಬೇಕು, ಇಲ್ಲವೇ ಹೂವು ಬೆಳೆಗಾರರಿಗೆ ಬೆಳೆ ಪರಿಹಾರ ಘೋಷಿಸುವ ಮೂಲಕ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು