ರಾಣೆಬೆನ್ನೂರು: ಬರಗಾಲದ ಛಾಯೆಯಲ್ಲೂ ಗೌರಿ ಹಬ್ಬಕ್ಕೆ ತಾಲ್ಲೂಕಿನಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ಪ್ರತಿ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.
ಮಹಿಳೆಯರು ಸಕ್ಕರೆ ಗೊಂಬೆ ತೆಗೆದುಕೊಂಡು ಗೌರಿ ದೇವಿಗೆ ಆರತಿ ಬೆಳಗುವುದು ಗೌರಿ ಹುಣ್ಣಿಮೆ ವಿಶೇಷ. ಹೀಗಾಗಿ ಮಾರುಕಟ್ಟೆಯಲ್ಲಿ ಸಕ್ಕರೆ ಗೊಂಬೆ, ಸಕ್ಕರೆ ಆರತಿಗಳ ಮಾರಾಟ ಜೋರಾಗಿ ಸಾಗಿದೆ.
ವಿಧ ವಿಧದ ಕಲಾಕೃತಿಗಳಲ್ಲಿ ಗೊಂಬೆಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಬಾಯೊಳಗೆ ಇಟ್ಟುಕೊಂಡ ಮರುಕ್ಷಣವೇ ಕರಗಿ ನೀರಾಗುವ ಸಕ್ಕರೆ ಗೊಂಬೆಗಳ ರುಚಿಯೇ ಬೇರೆ. ಕುದುರೆ, ಆನೆ, ಬಾತುಕೋಳಿ, ಗುಬ್ಬಿ, ನವಿಲು ಒಳಗೊಂಡ ನಾನಾ ಪಕ್ಷಿಗಳ ಸಕ್ಕರೆ ಗೊಂಬೆ, ರಥ, ಬಸವಣ್ಣ, ಪ್ರಭಾವಳಿ, ಹಂಪಿ ಗೋಪುರ, ಬಂದಾವನ, ಕೇದಿಗೆ, ಗಣೇಶ, ಗೌರಿ, ಬನಶಂಕರಿ, ಆಂಜನೇಯ, ಲಕ್ಷ್ಮಿ, ಕುಳಿತ ನಂದಿ ಆಕಾರದ ಸಕ್ಕರೆ ಗೊಂಬೆಗಳು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಒಂದೊಂದು ಗೊಂಬೆಯೂ ಒಂದೊಂದು ಕತೆಯನ್ನು ಹೇಳುತ್ತಿವೆ. ಬಾಂಧವ್ಯ ವೃದ್ಧಿ, ಸಾಮರಸ್ಯದ ಬೆಸುಗೆಯ ಸಂಕೇತವೇ ಈ ಆಚರಣೆಯಾಗಿದೆ.
‘ಗೌರಿ ಹುಣ್ಣಿಮೆ ಅಂಗವಾಗಿ ಕಳೆದ ಹತ್ತಾರು ದಿನಗಳಿಂದ ಸಕ್ಕರೆ ಗೊಂಬೆ ತಯಾರಿಸುವಲ್ಲಿ ನಿರತರಾಗಿದ್ದೇವೆ. ಸಕ್ಕರೆ ಬೆಲೆ ಸೇರಿದಂತೆ ತಯಾರಿಕೆಯಲ್ಲಿ ಬಳಸಲಾಗುವ ಕಚ್ಚಾವಸ್ತುಗಳ ಬೆಲೆ ಹೆಚ್ಚಾಗಿದ್ದರಿಂದ ಸಕ್ಕರೆ ಗೊಂಬೆಗಳ ಬೆಲೆಯೂ ಅಧಿಕವಾಗಿದೆ. ಸಕ್ಕರೆ ಗೊಂಬೆಯ ಆರತಿ 1 ಕೆ.ಜಿಗೆ ₹180ರಿಂದ ₹200, ಬಣ್ಣ ಬಣ್ಣದ ಕೊಲುಂಬರ ಜೋಡಿಗೆ ₹60, ದಂಡಿಗಳು ಒಂದಕ್ಕೆ ₹30ರಿಂದ ₹50ಕ್ಕೆ ಮಾರುತ್ತಿದ್ದೇವೆ. ಲಾಭ ಗಳಿಕೆಯ ಉದ್ದೇಶ ಬದಿಗೊತ್ತಿ ಸಂಪ್ರದಾಯದ ಪರಿಪಾಲನೆಗಾಗಿ ಸಕ್ಕರೆ ಗೊಂಬಿ ತಯಾರಿಕೆಯಲ್ಲಿ ತೊಡಗಿದ್ದೇವೆ’ ಎಂದು ಹೇಳಿದರು ವ್ಯಾಪಾರಿ ರತ್ನವ್ವ ಕೊತಂಬ್ರಿ.
‘ಕಳೆದ ಐದಾರು ದಶಕಗಳಿಂದ ಬೆಂಡು, ಬೆತ್ತಾಸು, ಸಿಹಿ ಪದಾರ್ಥ ಮಾರಾಟ ವ್ಯಾಪಾರ ಮಾಡುತ್ತಿದ್ದೇವೆ. ಒಂದು ಕ್ವಿಂಟಲ್ ಸಕ್ಕರೆಯಿಂದ 75ರಿಂದ 80 ಕೆ.ಜಿಗೂ ಅಧಿಕ ಗೊಂಬೆಗಳನ್ನು ತಯಾರಿಸಬಹುದಾಗಿದೆ. ಅಚ್ಚು ಮಾಡುವಾಗ ಶೇ.10ರಷ್ಟು ಮುರಿಯುತ್ತವೆ. ಇದರಿಂದ ನಷ್ಟ ಉಂಟಾಗುತ್ತದೆ. ಆ ಹಿರಿಯರು ಮಾಡಿಕೊಂಡು ಬಂದ ಉದ್ಯೋಗ ಬಿಡಬಾರದು ಎಂದು ವೃತ್ತಿ ಮುಂದುವರಿಸಿದ್ದೇವೆ’ ಎನ್ನುತ್ತಾರೆ ನಗರದ ದೊಡ್ಡಪೇಟೆಯ ಪ್ರಕಾಶ ಕೊತಂಬ್ರಿ.
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬರಗಾಲ ಆವರಿಸಿದೆ. ರೈತರ ಬಳಿ ದುಡ್ಡು ಇಲ್ಲ. ಸರ್ಕಾರ ಬರಗಾಲ ಘೋಷಣೆ ಮಾಡಿದರೂ ರೈತರಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ಹೀಗಾಗಿ ರೈತರ ಮುಖದಲ್ಲಿ ಹಬ್ಬದ ಖುಷಿ ಇಲ್ಲ -ಮುರುಗೇಶ ಕೋರಿಶೆಟ್ಟರ ರೈತ ಮುಖಂಡ ಹರನಗಿರಿ
ಸಕ್ಕರೆ ಗೊಂಬೆ ತಯಾರಿಕೆಯೂ ಕಲೆ
ಸಕ್ಕರೆ ಗೊಂಬೆಗಳ ತಯಾರಿಕೆ ಒಂದು ಕಲೆ. ಶುದ್ಧವಾದ ಸಕ್ಕರೆಗೆ ತಕ್ಕಂತೆ ನೀರು ನಿಂಬೆರಸ ಹಾಲು ಏಲಕ್ಕಿ ಹಾಕಿ ಒಲೆಯ ಮೇಲೆ ಹದ ಬರುವಂತೆ ಕಾಯಿಸಲಾಗುತ್ತದೆ. ಸಕ್ಕರೆಯನ್ನು ಪಾಕ ಮಾಡಿ ಅದನ್ನು ಅಚ್ಚುಗಳಿಗೆ ಹಾಕಿ ಗೊಂಬೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ಅಪಾರ ಅನುಭವದ ಅಗತ್ಯವಿದೆ. ಪಾಕ ತಯಾರಿಕೆ ವಿಧಾನದಲ್ಲಿ ಕೊಂಚ ಮೈಮರೆತರೂ ಹಾಳಾಗುತ್ತದೆ ಎನ್ನುತ್ತಾರೆ ಸಕ್ಕರೆ ಗೊಂಬೆ ತಯಾರಕರು. ಸಕ್ಕರೆ ಬೆಲೆ ಸೇರಿದಂತೆ ತಯಾರಿಕೆಯಲ್ಲಿ ಬಳಸಲಾಗುವ ವಸ್ತುಗಳ ಬೆಲೆ ಏರಿಕೆಯಾಗಿದ್ದರಿಂದ ಗೊಂಬೆಗಳ ಬೆಲೆ ಅನಿವಾರ್ಯವಾಗಿ ಹೆಚ್ಚಿಸುವಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮತ್ತೆ ಬೆಲೆ ಹೆಚ್ಚಳಗೊಂಡಿದೆ. ಸೋಮವಾರ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಬೀದಿಬದಿ ಮಿಠಾಯಿ ವ್ಯಾಪಾರಸ್ಥ ಸಂತೋಷ ಕಾನೋಜಿ. ಪರಿಸರಸ್ನೇಹಿ ಆಚರಣೆಗೆ ಇರಲಿ ಆದ್ಯತೆ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಅಗ್ಗದ ದರಕ್ಕೆ ಸಿಗುವ ಸಕ್ಕರೆ ಗೊಂಬೆಗಳ ಬದಲಾಗಿ ನೈಸರ್ಗಿಕ ಬಣ್ಣ ಬಳಸಿದ ಅಥವಾ ಬಿಳಿ ಬಣ್ಣದ ಸಕ್ಕರೆ ಗೊಂಬೆಗಳನ್ನು ಕೊಂಡು ಹಬ್ಬದ ಸಂಭ್ರಮದಲ್ಲಿ ತೊಡಗಿದರೆ ಹೆಚ್ಚು ಅರ್ಥಪೂರ್ಣವಾಗಲಿದೆ. ಕಾರ್ತಿಕ ಮಾಸದ ಹದಿನೈದು ದಿನ ಪೂಜಿಸಿ ಹುಣ್ಣಿಮೆ ದಿನ ಸಂಪನ್ನಗೊಳಿಸುವ ಗೌರಿ ಹುಣ್ಣಿಮೆ ಹಬ್ಬವು ತಾಲ್ಲೂಕಿನ ಜನತೆಗೆ ವಿಶಿಷ್ಟ ಹಬ್ಬವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.