ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರೇಕೆರೂರು | ಗಣೇಶೋತ್ಸವ ಸಡಗರ: ಏಕದಂತನಿಗೆ ಕಲಾವಿದರ ಅಂತಿಮ ಸ್ಪರ್ಶ

Published : 6 ಸೆಪ್ಟೆಂಬರ್ 2024, 5:39 IST
Last Updated : 6 ಸೆಪ್ಟೆಂಬರ್ 2024, 5:39 IST
ಫಾಲೋ ಮಾಡಿ
Comments

ಹಿರೇಕೆರೂರು: ಗಣೇಶ ಚತುರ್ಥಿಗೆ ಕ್ಷಣಗಣನೆ ಆರಂಭವಾಗಿದ್ದು ತರಹೇವಾರಿ ಪರಿಸರಸ್ನೇಹಿ, ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳು ಸಾರ್ವಜನಿಕರನ್ನು ಗಮನಸೆಳೆಯುತ್ತಿವೆ. ಮತ್ತೊಂದೆಡೆ ಮೂರ್ತಿ ತಯಾರಕರು ವಿಘ್ನನಿವಾರಕನಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದರೆ. ಇನ್ನೊಂದೆಡೆ ತಾಲ್ಲೂಕಿನಾಂದ್ಯತ ಗಣೇಶ ಚತುರ್ಥಿಯ ಸಂಭ್ರಮ ಗರಿಗೆದರಿದೆ.

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ವೈವಿಧ್ಯಮಯ ಗಣೇಶನ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ. ಚೌತಿಗೆ 2 ದಿನ ಬಾಕಿ ಇರುವಾಗ ಗಣಪನ ಮೂರ್ತಿಗಳಿಗೆ ಅಂತಿಮ ರೂಪ ನೀಡುವ, ಬಣ್ಣ ಬಳೆಯುವ ನಾಜೂಕು ಕೆಲಸ ಚುರುಕುಪಡೆದುಕೊಂಡಿದೆ. ಕಳೆದ ಬಾರಿಗಿಂತಲೂ ಈ ಬಾರಿಮೂರ್ತಿಗಳ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಕಲಾವಿದರು.

ವಿವಿಧ ಆಕೃತಿಗಳ ಗಣೇಶ: ರೈತನ ಮೇಲೆ ಗಣೇಶ ಮೂರ್ತಿ, ಶಂಖದ ಮೇಲೆ ಗಣೇಶ, ರಾಮಮಂದಿರ ಗಣಪ, ಬಾಲರಾಮನ ಮೂರ್ತಿ ಗಣೇಶ, ಗರುಡ ಮೇಲೆ ಗಣೇಶ, ಸಿಂಹ ಗಣಪ, ಸಿಂಹಾಸನ, ನಂದಿ, ಕಮಲ ಹೂವು ಗಣಪ, ಬಸವಣ್ಣನ ಮೇಲೆ ಗಣೇಶ, ಶಿವನ ಅವತಾರ, ಡಮರುಗ, ತ್ರಿಶೂಲ, ಬಾಲ ಗಣಪ, ಹೀಗೆ ವಿವಿಧ ಆಕೃತಿಗಳ ಗಣೇಶ ಮೂರ್ತಿಗಳು ಮಾರಾಟವಾಗುತ್ತಿವೆ.

ಉತ್ಸವಕ್ಕೆ ಸಿದ್ಧತೆಗಳು: ಚೌತಿಗೆ 2 ದಿನ ಬಾಕಿ ಇರುವಾಗ ಪಟ್ಟಣದಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಹಿರೇಕೆರೂರು ಪಟ್ಟಣವೊಂದರಲ್ಲೇ 25ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಆಗಲಿದೆ. ಅದಕ್ಕಾಗಿ ಬೃಹತ್ ಪೆಂಡಾಲ್ ಹಾಕುವ ಕೆಲಸ ಕಳೆದ ಒಂದು ವಾರದಿಂದ ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಆಯಾ ಗಣೇಶ ಮಂಡಳಿಯವರು ಸ್ಪರ್ಧೆಗೆ ಬಿದ್ದವರಂತೆ ಅದ್ಧೂರಿಯಾಗಿ ಜನರ ಗಮನ ಸೆಳೆಯುವ ರೀತಿಯಲ್ಲಿ ಆಕರ್ಷಕವಾದ ಪೆಂಡಾಲ್‌ಗಳನ್ನು ಹಾಕಿಸಿ, ಬಗೆ, ಬಗೆಯ ದೀಪಗಳ ಅಲಂಕಾರ ಮಾಡುತ್ತಿದ್ದಾರೆ.

‘ಗಣೇಶ ವಿಸರ್ಜನೆ ಕಾರ್ಯಕ್ರಮ ಮೆರವಣಿಗೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಡಿಜೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಬಾಂಗ್ಲಾದೇಶ ಹಿಂದೂಗಳಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಶನಿವಾರ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ವೈಭವದಿಂದ ಮಾಡಲಾಗುತ್ತದೆ’ ಎಂದು ವಿಎಚ್‌ಪಿ ಕಾರ್ಯದರ್ಶಿ ಅನಿಲ್ ಹಲವಾಗಿಲ ಹೇಳಿದರು.

ಗೌರಿ-ಗಣೇಶ ಹಬ್ಬ: ವ್ಯಾಪಾರ ಜೋರು

ಹಾವೇರಿ: ಜಿಲ್ಲೆಯಲ್ಲಿ ಗೌರಿ–ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಗುರುವಾರ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಖರೀದಿ ಜೋರಾಗಿತ್ತು.

ಶುಕ್ರವಾರ ಗೌರಿ ಹಬ್ಬ ಆಚರಿಸಲು ತಯಾರಿ ನಡೆಸಿರುವ ಜನರು, ಅಲಂಕಾರಿಕ ಹಾಗೂ ಇತರೆ ವಸ್ತುಗಳನ್ನು ಖರೀದಿಸಿದರು. ಶನಿವಾರ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಇದ್ದು, ಮಂಟಪದ ಅಲಂಕಾರಕ್ಕೆ ಬೇಕಿದ್ದ ಹಲವು ವಸ್ತುಗಳನ್ನು ಜನರು ಖರೀದಿಸಿಟ್ಟುಕೊಂಡರು.

ಹಾವೇರಿಯ ಎಂ.ಜಿ. ರಸ್ತೆಯಲ್ಲಿ ಪ್ರತಿಯೊಂದು ಅಂಗಡಿಯಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಲಾಲ್ ಬಹದ್ದೂರು ಶಾಸ್ತ್ರಿ ಮಾರುಕಟ್ಟೆಯಲ್ಲಿಯೂ ತರಕಾರಿ ಹಾಗೂ ಇತರೆ ವಸ್ತುಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು ಕಂಡುಬಂತು.

ಕುಟುಂಬ ಸಮೇತರಾಗಿ ಮಾರುಕಟ್ಟೆಗೆ ಬಂದಿದ್ದ ಜನರು, ಹೊಸ ಬಟ್ಟೆಗಳನ್ನು ಖರೀದಿಸಿದರು. ಮಂಟಪ ನಿರ್ಮಾಣಕ್ಕೆ ಅಗತ್ಯವಿದ್ದ ಬಾಳೆ ಗಿಡ, ಹೂವು, ವಿದ್ಯುತ್ ಅಲಂಕಾರದ ವಸ್ತುಗಳು ಹಾಗೂ ಇತರೆ ಸಾಮಗ್ರಿಗಳನ್ನು ಖರೀದಿಸಿದರು.

ಹಬ್ಬವಿದ್ದಿದ್ದರಿಂದ ಪ್ರತಿಯೊಂದು ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಇದರ ನಡುವೆಯೇ ಕನಕಾಂಬರ, ಸೇವಂತಿಗೆ, ಮಲ್ಲಿಗೆ, ಗುಲಾಬಿ ಹೂವುಗಳ ಖರೀದಿಯೂ ಜೋರಾಗಿತ್ತು.

ಗಣಪತಿ ಹಬ್ಬಕ್ಕೆ ಹಲವು ದಿನಗಳು ಬಾಕಿ ಇರುವಾಗಲೇ ನಗರದ ಹಲವು ಕಡೆಗಳಲ್ಲಿ ಗಣಪತಿ ಮೂರ್ತಿಗಳನ್ನು ಇರಿಸಲಾಗಿತ್ತು. ಅಲ್ಲೆಲ್ಲೆ ಮೂರ್ತಿ ವೀಕ್ಷಿಸಿದ ಜನರು, ತಮ್ಮಿಷ್ಟದ ಗಣಪತಿಯನ್ನು ಕಾಯ್ದಿರಿಸಿದರು. ಶನಿವಾರ ನಸುಕಿನಿಂದಲೇ ಜನರು, ಮೂರ್ತಿಗಳನ್ನು ತೆಗೆದುಕೊಂಡು ಹೋಗಿ ತಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಲಿದ್ದಾರೆ.

ಜಿಲ್ಲೆಯ 2 ಸಾವಿರಕ್ಕೂ ಹೆಚ್ಚು ಕಡೆ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಕೂರಿಸಲಾಗುತ್ತಿದೆ. ಸಂಘಟಕರು ಹಲವು ದಿನಗಳಿಂದ ಬೃಹತ್ ಮಂಟಪವನ್ನು ನಿರ್ಮಿಸುತ್ತಿದ್ದು, ಗುರುವಾರ ಅಂತಿಮ ಸ್ಪರ್ಶ ನೀಡಿದರು. ವಿವಿಧ ಸಂದೇಶ ಸಾರುವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಗಣೇಶ ಮೂರ್ತಿಗಳು ಮಾರಾಟವಾಗಿವೆ. ಈಗಾಗಲೇ 200ಕ್ಕೂ ಹೆಚ್ಚು ಗಣೇಶ ಮೂರ್ತಿ ಕಾಯ್ದಿರಿಸಿದ್ದಾರೆ
ಸೋಮಶೇಖರ್ ಆಚಾರ್ಯಗಣೇಶ ಮೂರ್ತಿ ತಯಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT