ಮಂಗಳವಾರ, ಜೂನ್ 28, 2022
20 °C
ನಿಯಂತ್ರಣ ಕೊಠಡಿ, ಸಹಾಯವಾಣಿ ಆರಂಭಿಸಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ

ಮಳೆಗಾಲದ ವಿಪತ್ತು ಎದುರಿಸಲು ಸಿದ್ಧರಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮುಂಗಾರು ಮಳೆಗಾಲದಲ್ಲಿ ಎದುರಾಗಬಹುದಾದ ಪ್ರವಾಹ ಸೇರಿದಂತೆ ವಿಪತ್ತುಗಳನ್ನು ಎದುರಿಸಲು ತಾಲ್ಲೂಕುವಾರು ವಿಪತ್ತು ಯೋಜನೆಗಳೊಂದಿಗೆ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗುವಂತೆ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ತಾಲ್ಲೂಕು ತಹಶೀಲ್ದಾರ್‌ಗಳೊಂದಿಗೆ ವಿಪತ್ತು ನಿರ್ವಹಣೆ ಸಿದ್ಧತೆ ಕುರಿತಂತೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಿಂದ ‘ವಿಡಿಯೊ ಸಂವಾದ’ ನಡೆಸಿದ ಅವರು ತಾಲ್ಲೂಕುವಾರು ಬುಧವಾರದ ಒಳಗಾಗಿ ವಿಪತ್ತು ನಿರ್ವಹಣೆಯ ‘ಕಂಟ್ರೋಲ್ ರೂಮ್‌’ಗಳನ್ನು ಆರಂಭಿಸಬೇಕು. ಸಾರ್ವಜನಿಕ ಸಂಪರ್ಕಕ್ಕಾಗಿ ‘ಸಹಾಯವಾಣಿ’ಗಳನ್ನು ಮಾಹಿತಿಗಾಗಿ ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ 141 ಗ್ರಾಮಗಳು ತಗ್ಗು ಪ್ರದೇಶಗಳಲ್ಲಿದ್ದು, ಪ್ರವಾಹದಿಂದ ಮುಳುಗಡೆ ಸಮಸ್ಯೆ ಎದುರಿಸಲಿವೆ ಎಂಬ ಮಾಹಿತಿ ಸಂಗ್ರಹಿಸಲಾಗಿದೆ. ಮತ್ತೊಮ್ಮೆ ಪರಿಶೀಲನೆ ನಡೆಸಿ ವಿಪತ್ತಿಗೆ ತುತ್ತಾಗಬಹುದಾದ ಗ್ರಾಮಗಳ ಪಟ್ಟಿಯನ್ನು ತಾಲ್ಲೂಕುವಾರು ಸಂಗ್ರಹಿಸಿ ಮಾಹಿತಿ ಇಟ್ಟುಕೊಳ್ಳಬೇಕು. ಅತಿ ಮಳೆ, ಪ್ರವಾಹದಂಥ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಜನ ಮತ್ತು ಜಾನುವಾರುಗಳ ರಕ್ಷಣೆಗೆ ವ್ಯವಸ್ಥಿತ ಯೋಜನೆಗಳನ್ನು ರೂಪಿಸಬೇಕು ಎಂದರು. 

ಸ್ಥಳಾಂತರ ಪ್ರಕ್ರಿಯೆ

ಸಂಕಷ್ಟಕ್ಕೆ ತುತ್ತಾಗುವ ಮುಂಚಿತವಾಗಿಯೇ ಪರ್ಯಾಯವಾಗಿ ‘ಕಾಳಜಿ ಕೇಂದ್ರ’ಗಳನ್ನು ಗುರುತಿಸಿ ಮೂಲ ಸೌಕರ್ಯಗಳೊಂದಿಗೆ ಸಿದ್ಧಮಾಡಿಕೊಳ್ಳಬೇಕು. ನೋಡಲ್ ಅಧಿಕಾರಿಗಳನ್ನು ನೇಮಿಸಿ ಪ್ರವಾಹ ಇತರ ಸಂಕಷ್ಟಕ್ಕೆ ತುತ್ತಾಗುವ ಮುನ್ನವೇ ಸ್ಥಳಾಂತರಿಸುವ ಕಾರ್ಯ ನಡೆಯಬೇಕು. ಈ ಕುರಿತಂತೆ ಈ ಗ್ರಾಮಗಳ ಜನತೆಗೆ ಮುಂಜಾಗ್ರತೆಯಾಗಿ ಮಾಹಿತಿ ನೀಡಿದರೆ ಸ್ಥಳಾಂತರಗೊಳ್ಳಲು ಮಾನಸಿಕವಾಗಿ ಸಿದ್ಧರಾಗಿರುತ್ತಾರೆ ಎಂದು ಸಲಹೆ ನೀಡಿದರು.

ಜನ-ಜಾನುವಾರುಗಳ ಜೀವಹಾನಿ ಸಂಭವಿಸಿದ 24 ತಾಸಿನಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಪರಿಹಾರ ಪಾವತಿಗೆ ತಹಶೀಲ್ದಾರ್‌ ಹಂತದಲ್ಲೇ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಬೆಳೆಹಾನಿ, ಮನೆಹಾನಿಗಳನ್ನು ಈಗಾಗಲೇ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿಆರ್.ಎಫ್ ನಿಯಮಾವಳಿಯಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಮಳೆಗಾಲ ಮುನ್ನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ, ರಾಜಕಾಲುವೆಗಳ ಸ್ವಚ್ಛತೆಗೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು. ಮಳೆಗಾಲದಲ್ಲಿ ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರು ಸರಬರಾಜು ಘಟಕಗಳನ್ನು ವೈಜ್ಞಾನಿಕವಾಗಿ ಸ್ವಚ್ಛಗೊಳಿಸುವ ಕೆಲಸವಾಗಬೇಕು. 

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಇ. ಕ್ರಾಂತಿ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ್, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ತಹಶೀಲ್ದಾರ್‌ ಗಿರೀಶ ಸ್ವಾದಿ, ಜಿಲ್ಲಾ ಯೋಜನಾ ನಿರ್ದೇಶಕ ವಿರಕ್ತಿಮಠ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ಡಿಡಿಪಿಐ ಅಂದಾನೆಪ್ಪ ವಡಗೇರಿ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ರಾಜೀವ ಕೂಲೇರ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ ಅಂಗಡಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು