ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ‌ಗೌಡರ ಸೇವೆಗೆ ‘ಚಿನ್ನದ ಪದಕ’

ಅಗ್ನಿಶಾಮಕ ಇಲಾಖೆಯಲ್ಲಿ 25 ವರ್ಷಗಳ ಸುದೀರ್ಘ ಸೇವೆ
Last Updated 15 ಜುಲೈ 2021, 16:28 IST
ಅಕ್ಷರ ಗಾತ್ರ

ಕುಮಾರಪಟ್ಟಣ: ಅಗ್ನಿಶಾಮಕ ಇಲಾಖೆಯಲ್ಲಿ 25 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಅಗ್ನಿಶಾಮಕ ಠಾಣೆ ‘ಪ್ರಮುಖ ಅಗ್ನಿಶಾಮಕ’ ಗಣೇಶ್ ಗೌಡರ ಈ ಬಾರಿಯ ‘ಮುಖ್ಯಮಂತ್ರಿ ಚಿನ್ನದ ಪದಕ’ ಪಡೆದು ಗಮನ ಸೆಳೆದಿದ್ದಾರೆ.

1996ರಲ್ಲಿ ‘ಅಗ್ನಿಶಾಮಕ’ನಾಗಿ ಇಲಾಖೆಗೆ ಸೇರಿಕೊಂಡೆ. ದಾವಣಗೆರೆ ಅಗ್ನಿಶಾಮಕ ಠಾಣೆಯಲ್ಲಿ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಪ್ರಸ್ತುತ ಶಿಗ್ಗಾವಿ ಠಾಣೆಯಲ್ಲಿ 13 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎನ್ನುತ್ತಾರೆ ಗಣೇಶ ಗೌಡರ.

ದಾವಣಗೆರೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ದೇವರ ಬೆಳಕೆರೆ ಬಸ್ ದುರಂತದಲ್ಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದೆ. ಈ ದುರಂತದಲ್ಲಿ ಸುಮಾರು 95 ಮಂದಿ ಪ್ರಯಾಣಿಕರು ಜೀವ ಕಳೆದುಕೊಂಡಿದ್ದರು. ಆ ಘಟನೆ ಇಂದಿಗೂ ದುಃಸ್ವಪ್ನದಂತೆ ಕಾಡುತ್ತಿದೆ. ಹರಪನಹಳ್ಳಿ ತಾಲ್ಲೂಕಿನ ಕಂಚಿಕೆರೆ ಗ್ರಾಮದಲ್ಲಿ ಇಡೀ ಊರಿಗೆ ಊರೇ ಅಗ್ನಿ ಅವಘಡಕ್ಕೆ ತುತ್ತಾಗಿತ್ತು. ಈ ಘಟನೆಯಲ್ಲಿ ಅಗ್ನಿ ನಂದಿಸಲು ಮೂರು ದಿನ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ ಅನುಭವಗಳನ್ನು ಬಿಚ್ಚಿಟ್ಟರು.

‘ಚಿತ್ರದುರ್ಗದ ಸಂತೆ ಹೊಂಡಕ್ಕೆ ಬಸ್‌ ಬಿದ್ದು 62 ಮಂದಿ ಜೀವ ಕಳೆದುಕೊಂಡರು. ಪ್ರಯಾಣಿಕರ ಜೀವ ರಕ್ಷಣೆಗಾಗಿ ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಹೀಗೆ, ರಾಣೆಬೆನ್ನೂರು ತಾಲ್ಲೂಕಿನ ಬೆಣ್ಣೆಹಳ್ಳ ದುರಂತ ಹಾಗೂ ಉಚ್ಚಂಗಿದುರ್ಗದಲ್ಲಿ ಸಂಭವಿಸಿದ ಬಸ್ ಅವಘಡದ ಸಂದರ್ಭ ಕಾರ್ಯಾಚರಣೆ ನಡೆಸಿ, ಜನರ ಜೀವ ರಕ್ಷಣೆ ಮಾಡಿದೆವು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಗಣೇಶ್ ಗೌಡರು.

‘ಅಗ್ನಿ ಅವಘಡ, ರಕ್ಷಣಾ ಕರೆಗಳು ಬಂದಾಗ ಜೀವರಕ್ಷಣೆಗೆ ಮೊದಲ ಆದ್ಯತೆ. ನಂತರ ಆಸ್ತಿ, ಸಂಪತ್ತಿನ ರಕ್ಷಣೆಯತ್ತ ಗಮನ ಹರಿಸುತ್ತೇವೆ. ಮನುಷ್ಯರ ಜೀವರಕ್ಷಣೆ ಜೊತೆಗೆ ಪ್ರಾಣಿ ರಕ್ಷಣೆ ಹಾಗೂ ಉರಗ ರಕ್ಷಣೆ ಮಾಡಲಾಗುತ್ತಿದೆ. ಅಗ್ನಿಶಾಮಕ ವೃತ್ತಿ ತೃಪ್ತಿ ಕೊಟ್ಟಿದೆ’ ಎಂಬುದು ಗಣೇಶ್‌ ಅವರ ಮನದಾಳದ ಮಾತು.

ಇಲಾಖೆ ಅಧಿಕಾರಿಗಳು ಮತ್ತು ಪತ್ನಿ ನಿರ್ಮಲ, ಮೂವರು ಮಕ್ಕಳು ನನ್ನ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ಗಣೇಶ ಗೌಡರ ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT