ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಸಿರು ಪಾರಿವಾಳಗಳು ಗೋಚರ: ರಾಣೆಬೆನ್ನೂರಿನ ಜನರಲ್ಲಿ ಕುತೂಹಲ

Last Updated 31 ಆಗಸ್ಟ್ 2020, 13:52 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಪಶ್ಚಿಮ -ಪೂರ್ವ ಘಟ್ಟಗಳಲ್ಲಿ ಮತ್ತು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಳದಿಕಾಲಿನ ಹಸಿರು ಪಾರಿವಾಳಗಳು ಇಲ್ಲಿನ ಪರಿಸರದಲ್ಲಿ ಅಪರೂಪಕ್ಕೆ ಕಂಡು ಬಂದಿವೆ.

ನಗರದ ಕಲಾವಿದ ನಾಮದೇವ ಕಾಗದಗಾರ ಅವರು ಎಂದಿನಂತೆ ಛಾಯಾಗ್ರಹಣಕ್ಕಾಗಿ ಹೊರಟಾಗ ನಗರದ ಹೊರವಲಯದ ಶಿವಗಂಗಾ ಪಬ್ಲಿಕ್ ಶಾಲೆಯ ಹತ್ತಿರ ವಿದ್ಯುತ್ ತಂತಿಯ ಮೇಲೆ
ಈ ಹಸಿರು ಪಾರಿವಾಳಗಳು ಸಾಲಾಗಿ ಕುಳಿತಿದ್ದವು.

‘ಐದಾರು ವರ್ಷಗಳಲ್ಲಿ ಅನೇಕ ಪಕ್ಷಿಗಳ ಛಾಯಾಚಿತ್ರಗಳನ್ನು ದಾಖಲಿಸಿರುವ ನನಗೆ, ಈ ಹಸಿರು ಪಾರಿವಾಳಗಳು ನಮ್ಮ ಹಾವೇರಿ ಜಿಲ್ಲೆಯ ಪರಿಸರದಲ್ಲಿ ಕಂಡಿದ್ದು ವಿಶೇಷವೆನಿಸಿತು. ಪಶ್ಚಿಮ -ಪೂರ್ವ ಘಟ್ಟಗಳಿಂದ ನಮ್ಮ ಕಡೆಗೆ ವಲಸೆ ಬಂದಿರಬಹುದು’ ಎಂದು ನಾಮದೇವ ’ಪ್ರಜಾವಾಣಿ’ಗೆ ತಿಳಿಸಿದರು.

ಮಳೆಗಾಲದ ಪ್ರಾರಂಭದಲ್ಲಿ ಹಾವೇರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಕಾಡಿನತ್ತ ಈ ಪಕ್ಷಿಗಳು ವಲಸೆ ಬರುತ್ತವೆ. ನಂತರ ಸೆಪ್ಟೆಂಬರ್-ಅಕ್ಟೋಬರ್ ಕೊನೆಯಲ್ಲಿ ತಮ್ಮ ಮೂಲಸ್ಥಾನಕ್ಕೆ ತೆರಳುತ್ತವೆ.ರಾಣೆಬೆನ್ನೂರು ಅರಣ್ಯ ಭಾಗದಲ್ಲಿ ಆಲ, ಅರಳಿ, ಪ್ಲಮ್, ಅತ್ತಿ, ಹುಣಸೆ, ಗಸಗಸಿಗಳು ಹೆಚ್ಚಾಗಿರುವುದರಿಂದ ಇತ್ತ ಕಡೆ ಅವು ವಲಸೆ ಬಂದಿವೆ.

’ಅರಿಸಿನ ಕಾಲಿನ ಹಸಿರು ಪಾರಿವಾಳಗಳನ್ನು ‘ಕಗ್ಗುಲ’ ಎಂತಲೂ ಕರೆಯುತ್ತಾರೆ. ವಿಶೇಷವೆಂದರೆ ಇವುಗಳು ನೆಲದ ಮೇಲೆ ಇಳಿಯುವುದೇ ಅಪರೂಪ. ಹಣ್ಣು ಹಂಪಲುಗಳು ಇವುಗಳ ಪ್ರಮುಖ ಆಹಾರ. ತಾವು ತಿಂದ ಹಣ್ಣುಗಳಲ್ಲಿರುವ ನೀರಿನ ಅಂಶ ಹಾಗೂ ಮರದ ಎಲೆಗಳ ಮೇಲಿನ ಇಬ್ಬನಿಯನ್ನು ಸೇವಿಸುವ ಮೂಲಕ ತಮ್ಮ ನೀರಿನ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತವೆ. ಆಲ ಹಾಗೂ ಅತ್ತಿಮರಗಳು ಹಣ್ಣು ಬಿಟ್ಟ ಸಮಯದಲ್ಲಿ, ಹಣ್ಣು ಸೇವಿಸುವ ಸಲುವಾಗಿ ದೊಡ್ಡ ಗುಂಪುಗಳಾಗಿ ಸೇರಿಕೊಳ್ಳುತ್ತವೆ. ಇವುಗಳ ಮೈಬಣ್ಣ ಹಸಿರಾಗಿರುವುದರಿಂದ ಮರಗಳಲ್ಲಿ ಇವನ್ನು ಬೇಗನೆ ಗುರುತಿಸುವುದೇ ಕಷ್ಟ‘ ಎನ್ನುತ್ತಾರೆ ನಾಮದೇವ ಕಾಗದಗಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT