ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಸಂಪದ್ಭರಿತ ಗ್ರಾಮ ‘ಆಲದಗೇರಿ’

ಗ್ರಾಮಕ್ಕೆ ಪುನರುಜ್ಜೀವನಗೊಂಡ ಕಲ್ಯಾಣ ಚಾಲುಕ್ಯರ ಶೈಲಿಯ ಈಶ್ವರ ದೇವಾಲಯ
Last Updated 31 ಜುಲೈ 2021, 11:31 IST
ಅಕ್ಷರ ಗಾತ್ರ

ಹಿರೇಕೆರೂರ: ತಾಲ್ಲೂಕು ಕೇಂದ್ರದಿಂದ ಸುಮಾರು 18 ಕಿ.ಮೀ. ದೂರದಲ್ಲಿರುವ ‘ಆಲದಗೇರಿ’ ಪ್ರಾಚೀನ ಗ್ರಾಮಗಳಲ್ಲಿ ಒಂದಾಗಿದೆ. ಆಲ ಎಂಬ ಶಬ್ದವು ವೃಕ್ಷ ಜಾತಿಗೆ ಸೇರಿದ್ದು, ಈ ಊರಿನಲ್ಲಿ ಅರಳಿ ಹಾಗೂ ಆಲ ಎರಡೂ ಮರಗಳಿವೆ. ಗೇರಿ ಎಂಬುದು ಕೇರಿಯ ಹಲವಾರು ರೂಪಗಳಲ್ಲಿ ಒಂದಾಗಿದೆ.

ಹಾಗಾಗಿ ಆಲ+ದ+ಕೆರೆ ಸೇರಿ ‘ಆಲದಗೇರಿ’ ಎಂಬ ಹೆಸರು ಬಂದಿರಬಹುದು. ಆಲದಗೇರಿ ಎಂದರೆ ಅಂತರ್ಜಲ ಹಾಗೂ ಬಹಿರ್ಜಲಗಳಿಂದ ಸಂಪನ್ನವಾದ ಊರು ಎಂದು ಸಂಶೋಧಕ ಡಾ.ಭೋಜರಾಜ ಪಾಟೀಲ ಅವರು ತಮ್ಮ ಹಿರೇಕೆರೂರ ತಾಲ್ಲೂಕು ಗ್ರಾಮನಾಮ ಅಧ್ಯಯನ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಗ್ರಾಮದ ಉತ್ತರಕ್ಕೆ ಸುಮಾರು 80 ಎಕರೆ ವಿಸ್ತಾರವಾದ ಕೆರೆ ಇದೆ. ಇದರ ಪಕ್ಕದಲ್ಲಿ ಸುಮಾರು 8 ಎಕರೆ ವಿಸ್ತೀರ್ಣದ ಸಣ್ಣ ಕೆರೆ ಇದೆ. ಹಾಗಾಗಿ ಕಳೆದ ಶತಮಾನದಲ್ಲಿ ಇಲ್ಲಿ ಸಾಕಷ್ಟು ಅಂತರ್ಜಲ ಲಭ್ಯವಿತ್ತು ಹಾಗೂ ಬಾನಾಡಿಗಳ ತಾಣವಾಗಿತ್ತು ಎನ್ನಲಾಗಿದೆ.

ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಯ ಈಶ್ವರ ದೇವಾಲಯವಿದೆ. ಇದರ ಕಾಲ ಸುಮಾರು 11-12ನೇ ಶತಮಾನ ಎನ್ನಲಾಗಿದೆ. ಮಣ್ಣಿನಲ್ಲಿ ಮುಚ್ಚಿಹೋಗಿದ್ದ ಇದನ್ನು ಇತ್ತೀಚಿನ ವರ್ಷಗಳಲ್ಲಿ ಪುನರುಜ್ಜೀವನಗೊಳಿಸಲಾಗಿದೆ. ಇದು ತ್ರಿಕೂಟ ದೇವಾಲಯವಾಗಿದ್ದು, ಮೂರು ಗರ್ಭ ಗೃಹಗಳಿವೆ. ಎರಡರಲ್ಲಿ ಶಿವಲಿಂಗ, ಒಂದರಲ್ಲಿ ವಿಷ್ಣುವಿನ ಪಾಣಿಪೀಠವಿದೆ. ಗುಡಿಯ ಆವರಣದಲ್ಲಿ ವೀರಗಲ್ಲು ಹಾಗೂ ಸಪ್ತಮಾತೃಕೆಯರ ಫಲಕಗಳಿವೆ. ಗ್ರಾಮದಲ್ಲಿ ಯಾದವರ ಶಾಸನವಿರುವ ಏಳು ವೀರಗಲ್ಲುಗಳಿವೆ.

ಗ್ರಾಮದಲ್ಲಿ ಅಪರೂಪದ ‘ಆತ್ಮಬಲಿ’ ಶಿಲ್ಪವಿದೆ. ನಾಲ್ಕು ಹಂತಗಳ ಈ ಶಾಸನಶಿಲ್ಪವು ಶೂಲದ ಮೇಲೆ ಬಿದ್ದು ಬಲಿಯಾಗುವ ಅಪರೂಪದ ಸನ್ನಿವೇಶವನ್ನು ವಿವರಿಸುತ್ತದೆ. ವ್ಯಕ್ತಿಯೊಬ್ಬ ಮೆರವಣಿಗೆಯಲ್ಲಿ ಹೊರಟು, ಎತ್ತರವಾದ ಕಂಬವನ್ನೇರಿ, ಕೆಳಗೆ ನೆಟ್ಟಿದ್ದ ಕತ್ತಿಗಳ ಮೇಲೆ ಬಿದ್ದು ತನ್ನನ್ನು ಬಲಿಕೊಡುವುದನ್ನು ಇಲ್ಲಿ ಕಣ್ಣಿಗೆ ಕಟ್ಟುವಂತೆ ಶಿಲ್ಪಿ ಚಿತ್ರಿಸಿದ್ದಾನೆ ಎಂದು ರಟ್ಟೀಹಳ್ಳಿ ಪ್ರಿಯದರ್ಶಿನಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಚಾಮರಾಜ ಕಮ್ಮಾರ ತಿಳಿಸಿದರು.

ಗ್ರಾಮದ ಈಶ್ವರ ದೇವಸ್ಥಾನದ ಸಮೀಪ ಮಣ್ಣಿನಲ್ಲಿ ಹೂತು ಹೋಗಿದ್ದ 12ನೇ ಶತಮಾನದ ತುರುಗೋಳ್‌ ವೀರಗಲ್ಲನ್ನು ಸ್ವತಃ ಪತ್ತೆ ಮಾಡಿರುವ ಡಾ.ಚಾಮರಾಜ ಕಮ್ಮಾರ ಅವರು, ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಬಮ್ಮೆನಾಯಕನ ಮಗ ಬೀರಯ್ಯನಾಯಕನು ರಣರಂಗದಲ್ಲಿ ಅಂಕಣಮಲ್ಲನಾಗಿ ಹೋರಾಡಿದ ಉಲ್ಲೇಖವಿರುವ ಶಾಸನ ಇದಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮದಲ್ಲಿ ದೊರಕಿರುವ ಇನ್ನೊಂದು ವೀರಗಲ್ಲಿನಲ್ಲಿ ಹಂದಿ ಬೇಟೆಯ ಚಿತ್ರಣವಿದೆ. ಒಂದು ದೊಡ್ಡ ಹಂದಿಯ ಹಿಂದೆ ಮುಂದೆ ಬೇಟೆಗಾರರು ಬಿಲ್ಲು, ಬಾಣ, ಭರ್ಜಿ ಹಿಡಿದು ನಿಂತಿದ್ದಾರೆ. ಹಂದಿಯನ್ನು ನಾಲ್ಕು ನಾಯಿಗಳು ಮುತ್ತಿವೆ. ಕೃಷಿ ಪ್ರಧಾನವಾಗಿರುವ ಈ ಪ್ರದೇಶದಲ್ಲಿ ರೈತರ ಬೆಳೆಗಳನ್ನು ಹಾಳು ಮಾಡುವ ಹಂದಿಗಳನ್ನು ನಾಯಿಗಳ ಸಹಾಯದಿಂದ ಬೇಟೆಯಾಡುತ್ತಿದ್ದರು ಎಂಬುದನ್ನು ತಿಳಿಯಬಹುದು.

ಜೈನ ಮುನಿಗಳು ತಪಸ್ಸು ಮಾಡಿದ ಕುರಿತು ಶಿಲಾಶಾಸನಗಳು ಸಹ ಗ್ರಾಮದಲ್ಲಿ ದೊರಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT