ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೃತ್ಯುಕೂಪವಾದ ಗುತ್ತಲ–ಹಾವೇರಿ ರಸ್ತೆ

ಅಕ್ರಮ ಮರಳು ಗಣಿಗಾರಿಕೆ; ಟಿಪ್ಪರ್‌ ಲಾರಿಗಳ ಮಿತಿಮೀರಿದ ವೇಗ ಅಪಘಾತಕ್ಕೆ ದಾರಿ...
Published 9 ಜೂನ್ 2024, 5:21 IST
Last Updated 9 ಜೂನ್ 2024, 5:21 IST
ಅಕ್ಷರ ಗಾತ್ರ

ಗುತ್ತಲ: ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವ ಹಾವೇರಿ ತಾಲ್ಲೂಕಿನ ಟಿಪ್ಪರ್ ಮತ್ತು ಲಾರಿಗಳ ಮೀತಿಮೀರಿದ ವೇಗಕ್ಕೆ ಅಪಘಾತಕ್ಕೆ ದಾರಿಯಾಗಿ ಜನರು ಜೀವ ಕಳೆದುಕೊಳ್ಳುವಂತಾಗಿದೆ.

ಇದಕ್ಕೆ ತಾಜಾ ಉದಾಹರಣೆಯಾಗಿ ಶುಕ್ರವಾರ ಗುತ್ತಲ ಕಡೆಯಿಂದ ಹಾವೇರಿ ಕಡೆಗೆ ಮರಳು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಮತ್ತು ಕಾರಿನ ನಡುವೆ ಢಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ವ್ಯಕ್ತಿ ಮೃತಪಟ್ಟು ಮೂವರು ಪ್ರಯಾಣಿಕರು ಗಾಯಗೊಂಡು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಹಾವೇರಿ ತಾಲ್ಲೂಕಿನ ತುಂಗಭದ್ರ ಮತ್ತು ವರದಾ ನದಿಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಿ ಟಿಪ್ಪರ್‌ ಮತ್ತು ಲಾರಿಗಳ ಮೂಲಕ ಹಾವೇರಿ ನಗರಕ್ಕೆ ಸಾಗಾಣೆ ಮಾಡುತ್ತಾರೆ. ಲಾರಿ ಮತ್ತು ಟಿಪ್ಪರ್ ಚಾಲಕರು ಅತಿ ವೇಗದಲ್ಲಿ ಟಿಪ್ಪರ್‌ ಮತ್ತು ಲಾರಿಗಳನ್ನು ಚಾಲನೆ ಮಾಡುತ್ತಾರೆ. ಗುತ್ತಲ ಮತ್ತು ಹಾವೇರಿ ರಸ್ತೆಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸಿದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ರಸ್ತೆ ತಿರುವು ಮತ್ತು ಅಪಘಾತ ಸ್ಥಳಗಳಲ್ಲಿ ಅಧಿಕಾರಿಗಳು ರಸ್ತೆಗೆ ಹಂಪ್‌ ಮತ್ತು ಸೂಚನಾ ಫಲಕಗಳನ್ನು ಅಳವಡಿಸದೇ ಇರುವುದರಿಂದ ಇಂತಹ ಅಪಘಾತಗಳು ಸಂಭವಿಸುತ್ತಿವೆ’ ಎಂದು ಜನರು ಆರೋಪಿಸುತ್ತಾರೆ.

2015ರಲ್ಲಿ ಬೂದಗಟ್ಟಿ ಹಳ್ಳದ ಹತ್ತಿರ ಮರಳು ತುಂಬಿದ ಲಾರಿ ಪ್ರಯಾಣಿಕರ ಟೆಂಪೊಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ 3 ಜನ ಸೇರಿ 10 ಮಂದಿ ಮೃತಪಟ್ಟಿದ್ದರು. 2012ರಲ್ಲಿ ವೇಗವಾಗಿ ಬಂದ ಮರಳಿನ ಲಾರಿ ಕುರಿಗಳ ಹಿಂಡಿನ ಮೇಲೆ ಹಾದು ಹೋಗಿ 28ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿದ್ದವು. ಕುರಿಗಾಹಿ ಹಳ್ಳಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದರು.

2012ರಲ್ಲಿ ಬೈಕ್‌ ಅಪಘಾತ ಸಂಭವಿಸಿ ಬಸಪೂರ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕರು ಮೃತಪಟ್ಟಿದ್ದರು. 2013ರಲ್ಲಿ ಹಾವೇರಿ ಕಡೆಯಿಂದ ವೇಗವಾಗಿ ಬಂದ ಲಾರಿ ರಸ್ತೆ ಬದಿಯಲ್ಲಿದ್ದ ತಡಗೋಡೆಗೆ ಅಪ್ಪಳಿಸಿ ಬಿದ್ದಿತ್ತು. 2014ರಲ್ಲಿ ಕಬ್ಬು ಹೇರಿಕೊಂಡು ಗುತ್ತಲದಿಂದ ಹಾವೇರಿಗೆ ಹೋಗುತ್ತಿದ್ದ ಲಾರಿಗೆ ಬೈಕ್‌  ಡಿಕ್ಕಿಯಾಗಿ ಹಾವೇರಿ ನಗರಸಭೆಯ ಇಬ್ಬರು ನೌಕರರು ಮೃತರಾಗಿದ್ದರು.

2014ರಲ್ಲಿಯೇ ಕನವಳ್ಳಿ ಗ್ರಾಮದ ಮೂವರು ಯುವಕರು ಬೈಕ್‌ನಿಮದ ಬಿದ್ದು ಮೃತಪಟ್ಟಿದ್ದರು. 2020 ರಲ್ಲಿ ಮರಳು ಲಾರಿ ಹಾಯ್ದು ಗುತ್ತಲ ತಾಂಡಾದ ಯುವಕ ಸಾವನ್ನಪ್ಪಿದ್ದನು. 2021ರಲ್ಲಿ ಬಸಾಪೂರ ಗ್ರಾಮದ ಹತ್ತಿರ ಕಾನೂನು ವಿದ್ಯಾರ್ಥಿ ಬಸ್ ಹಾದು ಮೃತಪಟ್ಟಿದ್ದ. ಹೀಗೆ ನಿರಂತರ ಅಪಘಾತಗಳು ಸಂಭವಿಸಿ 10 ವರ್ಷಗಳಿಂದ ಗುತ್ತಲ–ಹಾವೇರಿ ರಸ್ತೆ ಮೃತ್ಯುಕೂಪವಾಗಿದೆ ಎಂದು ಜನರು ಹೇಳುತ್ತಾರೆ.

ಹಾವೇರಿಗೆ ಹೋಗುವ ಮಾರ್ಗದ ಹಲವಾರು ಕಡೆಗಲ್ಲಿ ತಿರುವು ಮತ್ತು ಕ್ರಾಸ್‌ಗಳು ಬರುತ್ತವೆ. ತಿರುವು ಮತ್ತು ಕ್ರಾಸ್‌ಗಳು ಇದ್ದಲ್ಲಿ ಯಾವುದೇ ಸೂಚನಾ ಫಲಕಗಳು ಇಲ್ಲ. ವೇಗವಾಗಿ ಚಾಲನೆ ಮಾಡುವ ಚಾಲಕರಿಗೆ ಕ್ರಮ ತೆಗೆದುಕೊಳ್ಳದ ಆರ್‌ಟಿಒ ಅಧಿಕಾರಿಗಳು, ಪೊಲೀಸ್ ಮತ್ತು ಲೋಕೋಪಯೋಗಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಘಾತಗಳು ಸಂಭವಿಸುತ್ತವೆ ಎಂದು ಜನರು ಆರೋಪಿಸುತ್ತಾರೆ.

ಕೆಲವೇ ದಿನಗಳಲ್ಲಿ ಹಾವೇರಿ–ಗುತ್ತಲ ರಸ್ತೆಗೆ ಅಪಘಾತ ಸ್ಥಳಗಳಲ್ಲಿ, ತಿರುವು ಮತ್ತು ಕ್ರಾಸ್‌ಗಳಲ್ಲಿ ಸೂಚನಾ ಫಲಕಗಳಲ್ಲಿ ಅಳವಡಿಸಲಾಗುವುದು.
ಶ್ರೀಮಂತ ಹದಗಲ್ಲ, ಲೋಕೊಪಯೊಗಿ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT