ಗುತ್ತಲ: ಇಲ್ಲಿಯ ಸರ್ಕಾರಿ ಸಾರ್ವಜನಿಕ ಗ್ರಂಥಾಲಯ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಶಿಥಿಲಗೊಂಡಿರುವ ಕಟ್ಟಡದಲ್ಲಿ ಗ್ರಂಥಾಲಯವಿದ್ದು, ಕುಸಿದು ಬೀಳುವ ಆತಂಕ ಓದುಗರನ್ನು ಕಾಡುತ್ತಿದೆ. ಇದರ ನಡುವೆಯೇ ಕಟ್ಟಡವನ್ನು ತೆರವು ಮಾಡುವಂತೆ ಪುರಸಭೆ ಮುಖ್ಯಾಧಿಕಾರಿ ಸೂಚನೆ ನೀಡಿದ್ದು, ಇದಕ್ಕೆ ಓದುಗರಿಂದ ಆಕ್ರೋಶ ವ್ಯಕ್ತವಾಗಿದೆ.
‘ಗ್ರಂಥಾಲಯ ಜಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲು ಉದ್ದೇಶಿಸಲಾಗಿದೆ. ಹೀಗಾಗಿ, ಗ್ರಂಥಾಲಯ ಕಟ್ಟಡ ಖಾಲಿ ಮಾಡಿ’ ಎಂದು ಗುತ್ತಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದೇವಾನಂದ ದೊಡ್ಡಮನಿ ಸೂಚನೆ ನೀಡಿದ್ದಾರೆ. ಇದಕ್ಕೆ ಮನವಿ ಮೂಲಕ ಉತ್ತರಿಸಿರುವ ಗ್ರಂಥಪಾಲಕರು, ‘ಹೆಚ್ಚು ಓದುಗರಿಗೆ ಅನುಕೂಲವಾಗಿರುವ ಗ್ರಂಥಾಲಯದ ಕಟ್ಟಡ ತೆರವು ಮಾಡುವ ಮುನ್ನ, ಬೇರೊಂದು ಕಡೆ ನಿವೇಶನ ಮಂಜೂರು ಮಾಡಿ ಅಥವಾ ಕಟ್ಟಡ ಸೂಚಿಸಿ. ಏಕಾಏಕಿ ಗ್ರಂಥಾಲಯ ತೆರವು ಮಾಡುವಂತೆ ಹೇಳಿದರೆ ಹೇಗೆ? ಓದುಗರಿಗೆ ತೊಂದರೆ ಆಗುತ್ತದೆ’ ಎಂದು ಕೋರಿದ್ದಾರೆ.
ನಿವೇಶನ ವಿಚಾರವಾಗಿ ಪುರಸಭೆ ಹಾಗೂ ಗ್ರಂಥಾಲಯ ಅಧಿಕಾರಿಗಳ ನಡುವೆ ಪರಸ್ಪರ ಮಾತುಕತೆ ಮುಂದುವರಿದಿದೆ. ಇದರ ನಡುವೆಯೂ ಗ್ರಂಥಾಲಯದಲ್ಲಿ ನಾನಾ ಸಮಸ್ಯೆಗಳು ಇರುವುದಾಗಿ ಓದುಗರು ದೂರುತ್ತಿದ್ದಾರೆ.
‘ಗ್ರಂಥಾಲಯಕ್ಕೆ ವಿದ್ಯುತ್ ಸಂಪರ್ಕ ಹಾಗೂ ಶೌಚಾಲಯವಿಲ್ಲ. ಈ ಬಗ್ಗೆ ಹಲವು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಪಟ್ಟಣ ಪಂಚಾಯತಿಯವರು ಗ್ರಂಥಾಲಯಕ್ಕೆಂದು ನೀಡಿರುವ ಸದ್ಯದ ಕಟ್ಟಡ ಮಳೆ ಬಂದರೆ ಸೋರುತ್ತಿದೆ. ಓದುಗರು ಗ್ರಂಥಾಲಯಕ್ಕೆ ಬಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಕುಳಿತುಕೊಳ್ಳಬೇಕಾದ ಸ್ಥಿತಿ ಇದೆ‘ ಎಂದು ಜನರು ಅಳಲು ತೋಡಿಕೊಂಡರು.
‘ಕಟ್ಟಡದಲ್ಲಿ ಸೌಕರ್ಯ ಕಲ್ಪಿಸುವಂತೆ ಕೋರಿದರೆ, ಕಟ್ಟಡವನ್ನೇ ತೆರವು ಮಾಡುವಂತೆ ಅಧಿಕಾರಿಗಳು ಗ್ರಂಥಪಾಲಕರಿಗೆ ಸೂಚಿಸುತ್ತಿದ್ದಾರೆ. ಇದು ಸರಿಯಲ್ಲ. ಗ್ರಂಥಾಲಯಕ್ಕೆ ಬೇರೆ ಕಟ್ಟಡ ನೀಡಬೇಕು. ಇಲ್ಲದಿದ್ದರೆ, ಬೇರೆ ನಿವೇಶನ ಹುಡುಕಿ ಅಲ್ಲಿ ಹೊಸ ಕಟ್ಟಡ ನಿರ್ಮಿಸಿ ಕೊಡಬೇಕು. ಕಾನೂನು ಬಾಹಿರವಾಗಿ ಕಟ್ಟಡ ತೆರವು ಮಾಡಿದರೆ, ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.
‘ಶಿಕ್ಷಣಕ್ಕೆ ಒತ್ತು ನೀಡಬೇಕು. ಪುಸ್ತಕ ಓದು ಹೆಚ್ಚಿಸಲು ಅನುಕೂಲ ಕಲ್ಪಿಸಬೇಕೆಂದು ಸರ್ಕಾರ ಹೇಳುತ್ತಿದೆ. ಆದರೆ, ಇಲ್ಲಿ ಗುತ್ತಲ ಗ್ರಂಥಾಲಯವನ್ನು ಮುಚ್ಚಿಸಲು ಅಧಿಕಾರಿಗಳು ಮುಂದಾಗಿದ್ದಾರೆ‘ ಎಂದು ಜನರು ಹೇಳಿದರು.
ನಿವೇಶನವಿಲ್ಲ: ‘ಗ್ರಂಥಾಲಯ ನಿರ್ಮಾಣಕ್ಕೆ ಪಟ್ಟಣದಲ್ಲಿ ನಿವೇಶನ ಲಭ್ಯವಿಲ್ಲ. ಈಗಿರುವ ಕಟ್ಟಡವನ್ನು ನೆಲಸಮ ಮಾಡಿ ಅದೇ ಜಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗುವುದು. ಗ್ರಂಥಾಲಯಕ್ಕೆ ಇಲಾಖೆಯವರೇ ಕಟ್ಟಡ ನಿರ್ಮಾಣ ಮಾಡಿಕೊಳ್ಳಬೇಕು‘ ಎಂದು ಮುಖ್ಯಾಧಿಕಾರಿ ದೇವಾನಂದ ದೊಡ್ಡಮನಿ ಹೇಳಿದರು.
ಮಕ್ಕಳು ಯುವಕರು ಜ್ಞಾನ ಹೆಚ್ಚಿಸಿಕೊಳ್ಳಲು ಗ್ರಂಥಾಲಯ ಅವಶ್ಯ. ಸೂಕ್ತ ನಿವೇಶನದಲ್ಲಿ ಹೊಸ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಆಗ್ರಹಿಸಿ ಹೋರಾಟ ಆರಂಭಿಸಲಾಗುವುದು
-ಪಾಲಾಕ್ಷಯ್ಯ ನೆಗಳೂರಮಠ ಶಿಕ್ಷಕ
ಗ್ರಂಥಾಲಯಕ್ಕೆ ನಿವೇಶನ ನೀಡಿ ಹೊಸ ಕಟ್ಟಡ ನಿರ್ಮಿಸಿಕೊಡಬೇಕು. ತಾಲ್ಲೂಕು ಗ್ರಂಥಾಲಯಕ್ಕೆ ಸಿಗುವ ಸೌಕರ್ಯಗಳೆಲ್ಲವನ್ನೂ ಗುತ್ತಲ ಗ್ರಂಥಾಲಯಕ್ಕೆ ನೀಡಬೇಕು
-ಜಾವಿದ ಹಾಲಗಿ ಓದುಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.