ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್: ಮತದಾನ ಬಹಿಷ್ಕಾರ– ಮನವೊಲಿಕೆ ಯಶಸ್ವಿ

Published 7 ಮೇ 2024, 14:57 IST
Last Updated 7 ಮೇ 2024, 14:57 IST
ಅಕ್ಷರ ಗಾತ್ರ

ಹಾನಗಲ್ (ಹಾವೇರಿ): ತಾಲ್ಲೂಕಿನ ರತ್ನಾಪುರ ಗ್ರಾಮದಲ್ಲಿ ಸಂತ ಸೇವಾಲಾಲ್ ಭವನದ ಅಪೂರ್ಣ ಕಾಮಗಾರಿಯಿಂದ ಅಸಮಾಧಾನಗೊಂಡ ಗ್ರಾಮಸ್ಥರು ಮಂಗಳವಾರ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರು. ತಾಲ್ಲೂಕು ಆಡಳಿತದ ಮಧ್ಯಸ್ಥಿಕೆಯಿಂದ ಬಳಿಕ ಮತದಾನ ಪ್ರಕ್ರಿಯೆ ಯಥಾಸ್ಥಿತಿಯಲ್ಲಿ ನಡೆಯಿತು.

‘ಎಂಟು ವರ್ಷದ ಹಿಂದೆ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತ್ತು. ₹20 ಲಕ್ಷ ಅನುದಾನ ನೀಡುವಲ್ಲಿ ತಾಂಡಾ ಅಭಿವೃದ್ಧಿ ಮಂಡಳಿ ನಿಷ್ಕಾಳಜಿ ಮಾಡಿದೆ. ಕೇವಲ ₹4 ಲಕ್ಷ ನೀಡಿದೆ’ ಎಂದು ಆರೋಪಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದರು.

ಗ್ರಾಮ ಪ್ರವೇಶ ಸ್ಥಳದಲ್ಲಿ ಫಲಕ ಅಳವಡಿಸಿ ಲೋಕಸಭೆ ಚುನಾವಣೆಯ ಮತದಾನಕ್ಕೆ ಬಹಿಷ್ಕಾರ ಹಾಕುವುದಾಗಿ ಸೋಮವಾರ ಘೋಷಿಸಿದ್ದರು. ತಹಶೀಲ್ದಾರ್‌ ರೇಣುಕಾ ಎಸ್‌. ಅವರು ಗ್ರಾಮಸ್ಥರ ಸಭೆ ನಡೆಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮನವೊಲಿಸಿದರು.

ಗ್ರಾಮದ ಮುಖಂಡ ಪ್ರಶಾಂತ ಪೂಜಾರ, ‘ಚುನಾವಣೆ ಮುಗಿದ ಎರಡು ತಿಂಗಳಲ್ಲಿ ಅನುದಾನ ದೊರಕಿಸಿಕೊಡುವ ತಹಶೀಲ್ದಾರ್ ಅವರ ಭರವಸೆ ಈಡೇರದಿದ್ದರೆ, ತಹಶೀಲ್ದಾರ್‌ ಕಚೇರಿ ಮುಂದೆ ಧರಣಿ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಮನವೊಲಿಕೆ: 114 ಮತ ಚಲಾವಣೆ 

ತಡಸ(ಹಳವ ತರ್ಲಗಟ್ಟ): ಗ್ರಾಮಕ್ಕೆ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ಶಿಗ್ಗಾವಿ ತಾಲ್ಲೂಕಿನ ಗಡಿ ಭಾಗದ ಗ್ರಾಮವಾದ ಹಳವ ತರ್ಲಗಟ್ಟದ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದರು. ತಹಶೀಲ್ದಾರ್‌ ಸಂತೋಷ ಹಿರೇಮಠ ಅವರು ಗ್ರಾಮಸ್ಥರ ಮನವೊಲಿಸಿ ಮಧ್ಯಾಹ್ನ 2.30ರಿಂದ ಸಂಜೆ 6ರವರೆಗೆ ಮತದಾನ ಮಾಡಿಸಿದರು. ಈ ಗ್ರಾಮದಲ್ಲಿ ಒಟ್ಟು 227 ಮತಗಳಿದ್ದು, 114 ಮತಗಳು ಮಾತ್ರ ಚಲಾವಣೆಯಾದವು. 

ಸಾರಿಗೆ, ಆರೋಗ್ಯ, ಶೌಚಾಲಯ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕೊರತೆಯನ್ನು ಇಲ್ಲಿನ ಗ್ರಾಮಸ್ಥರು ಎದುರಿಸುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ಜನಪ್ರತಿನಿಧಿಗಳು ಸುಳ್ಳು ಭರವಸೆಗಳನ್ನು ನೀಡಿ ಮತ ಹಾಕಿಸಿಕೊಳ್ಳುತ್ತಾರೆ ಎಂದು ಗ್ರಾಮಸ್ಥರು ದೂರಿದರು. 

ಕಂದಾಯ ಗ್ರಾಮವಾಗದ ಕಾರಣ ಜನಸಾಮಾನ್ಯರಿಗೆ ಮನೆ, ರಸ್ತೆ, ರೇಷನ್ ಕಾರ್ಡ್ ಮುಂತಾದ ಮೂಲಭೂತ ಸೌಕರ್ಯ ಸಿಗುತ್ತಿಲ್ಲ ಎಂದು ಬಾಹುಬಲಿ ಸೋಗಲಿ ಅವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT