ಬುಧವಾರ, ಡಿಸೆಂಬರ್ 8, 2021
25 °C
ಬಮ್ಮನಹಳ್ಳಿಯಲ್ಲಿ ಬಿಜೆಪಿ ಪ್ರಚಾರ ಸಭೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ಬಿಎಸ್‌ವೈ ಕಾಲಿಟ್ಟಿದ್ದಾರೆ, ಗೆಲುವು ಖಚಿತ: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ಬಿ.ಎಸ್‌. ಯಡಿಯೂರಪ್ಪ ಅವರು ಕಾಲಿಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಾನಗಲ್‌ ತಾಲ್ಲೂಕಿನ ಬಮ್ಮನಹಳ್ಳಿಯಲ್ಲಿ ಶುಕ್ರವಾರ ಉಪಚುನಾವಣೆ ಪ್ರಚಾರಾರ್ಥ ಏರ್ಪಡಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್‌. ಯಡಿಯೂರಪ್ಪನವರು ಪರಿಚಯಿಸಿದ ಎಲ್ಲಾ ಯೋಜನೆಗಳ ಹಿಂದೆ ಬಲವಾದ ಸಾಮಾಜಿಕ ಅಭಿವೃದ್ಧಿಯ ಕಳಕಳಿ ಮತ್ತು ಕಾಳಜಿ ಇತ್ತು. ರೈತರ ವಿಷಯದಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಂಡವರಲ್ಲ. ನಾನು ಬಿಜೆಪಿಗೆ ಬರಲು, ಶಾಸಕ, ಮಂತ್ರಿ ಹಾಗೂ ಮುಖ್ಯಮಂತ್ರಿಯಾಗಲು ಯಡಿಯೂರಪ್ಪನವರ ಆಶೀರ್ವಾದವೇ ಕಾರಣ ಎಂದರು.

ಅಭಿವೃದ್ಧಿಯೇ ನಮ್ಮ ಅಜೆಂಡಾ: ವಿರೋಧ ಪಕ್ಷದ ಎಲ್ಲ ಟೀಕೆ-ಟಿಪ್ಪಣಿಗಳಿಗೆ ನಾನು ಉತ್ತರ ಕೊಡಲು ಬಯಸುವುದಿಲ್ಲ. ನಮ್ಮ ಮೂಲಮಂತ್ರ ಅಭಿವೃದ್ಧಿಯಾಗಿದ್ದು ಕಾಂಗ್ರೆಸ್ ಪಕ್ಷದವರು ತಮಗೆ ಬೇಕಾದ ಅಜೆಂಡಾ ಇಟ್ಟುಕೊಳ್ಳಲಿ. ಹೆಣ್ಣು ಮಕ್ಕಳು ಹುಟ್ಟಿದರೆ ಶಾಪ ಅನ್ನುವಂತಹ ಕಾಲದಲ್ಲಿ ಯಡಿಯೂರಪ್ಪನವರು ‘ಭಾಗ್ಯಲಕ್ಷ್ಮಿ’ ಯೋಜನೆ ಪರಿಚಯಿಸಿದರು. ಶಾಲೆಗೆ ಹೋಗಲು ಬೈಸಿಕಲ್‌ ನೀಡಿದರು. ಹಾಲು ಪೂರೈಕೆದಾರರಿಗೆ ಪ್ರೋತ್ಸಾಹಧನ ನೀಡಿದರು. ಅಂಗವಿಕಲರು, ವಿಧವೆಯರು, ಹಿರಿಯ ನಾಗರಿಕರಿಗೆ ಮಾಸಾಶನ ಆರಂಭಿಸಿದರು ಎಂದು ಯಡಿಯೂರಪ್ಪ ಅವರನ್ನು ಗುಣಗಾನ ಮಾಡಿದರು. 

ರೈತ ರೇಷ್ಮೆ ಜುಬ್ಬಾ ಹಾಕಬೇಕು: ನಮ್ಮ ರೈತರು ಅಭಿವೃದ್ಧಿ ಹೊಂದಬೇಕು. ಕಾಲಿನಲ್ಲಿ ಜೂರ್ಕಿ ಚಪ್ಪಲಿ, ರೇಷ್ಮೆ ಜುಬ್ಬಾ, ರೇಷ್ಮೆ ರುಮಾಲು ಹಾಕಬೇಕು, ಕೈಯಲ್ಲಿ ಬಾರಕೋಲು ಹಿಡಿದುಕೊಳ್ಳಬೇಕು. ಇದು ಬಿಜೆಪಿಯ ಅಭಿವೃದ್ಧಿಯ ಕನಸು. ನಾವು ಕೋವಿಡ್‌ ಅವಧಿಯಲ್ಲಿ 15 ಸಾವಿರ ಕಿಟ್‌ ಕೊಟ್ಟಿದ್ದೇವೆ. ಆದರೆ, ಅದನ್ನು ಎಂದಿಗೂ ಚುನಾವಣೆಗೆ ಬಂಡವಾಳ ಮಾಡಿಕೊಳ್ಳಲಿಲ್ಲ. ಕಾಂಗ್ರೆಸ್‌ನವರು ಕಿಟ್‌ ಕೊಟ್ಟಿದ್ದನ್ನೇ ಚುನಾವಣಾ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು. 

2008ರಲ್ಲಿ ಬಿ.ಎಸ್‌.ಯಡಿಯೂರಪ್ಪನವರ ಸರ್ಕಾರ ರೈತರ 10ಎಚ್‌ಪಿ ವಿದ್ಯುತ್‌ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಬಿಲ್‌ ಕಟ್ಟಿತು. ₹4 ಸಾವಿರ ಕೋಟಿಯನ್ನು ಸರ್ಕಾರ ರೈತರಿಗೆ ಅನುದಾನ ಕೊಡುತ್ತಿದೆ. ಹಿಂದಿನ ಸರ್ಕಾರ ಈ ಕೆಲಸ ಮಾಡಲಿಲ್ಲ. ಕಾಂಗ್ರೆಸ್‌ನವರೇ ಏನು ನಿಮ್ಮ ಇತಿಹಾಸ? ಅಧಿಕಾರ ಪಡೆದುಕೊಂಡು ಸ್ವಾರ್ಥಕ್ಕೆ ಬಳಸುವುದೇ ಎಂದು ಪ್ರಶ್ನಿಸಿದರು.

 

ರೈಲು ಸಂಪರ್ಕದಿಂದ ಅಭಿವೃದ್ಧಿ: ಶಾಸಕ ಕುಮಾರ ಬಂಗಾರಪ್ಪ ಮಾತನಾಡಿ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳು ಮೊದಲಿನಿಂದಲೂ ಅಣ್ಣ–ತಮ್ಮಂದಿರಂತೆ ಇವೆ. ವರದಾ ನದಿ ಸಂರ್ಪಕ ಸೇತುವಾಗಿದೆ. ತಾಳಗುಪ್ಪದಿಂದ ಹುಬ್ಬಳ್ಳಿವರೆಗೆ ರೈಲು ಮಾರ್ಗ ಅನುಷ್ಠಾನಗೊಂಡರೆ, ಮಲೆನಾಡು ಮತ್ತು ಬಾಂಬೆ ನಡುವೆ ಸಂಪರ್ಕ ಸಾಧ್ಯವಾಗುತ್ತದೆ. ಬಿಜೆಪಿ ಯೋಜನೆಗಳು ದೂರದೃಷ್ಟಿಯುಳ್ಳ ಯೋಜನೆಗಳು. ಉದಾಸಿ ಅವರ ಕಾರ್ಯವನ್ನು ಶಿವರಾಜ ಸಜ್ಜನರ ಮುಂದುವರಿಸಿಕೊಂಡು ಹೋಗುತ್ತಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು