ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್‌ ವಿಧಾನಸಭಾ ಕ್ಷೇತ್ರ: ಹೊರಗಿನವರಿಗೆ ಮಣೆ, ಸ್ಥಳೀಯರಿಗಿಲ್ಲ ಹೊಣೆ

ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡದ ಬಿಜೆಪಿ: ಭಿನ್ನಮತ ಶಮನಗೊಳಿಸಿದ ಕಾಂಗ್ರೆಸ್‌
Last Updated 9 ಅಕ್ಟೋಬರ್ 2021, 16:31 IST
ಅಕ್ಷರ ಗಾತ್ರ

ಹಾವೇರಿ: ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಈ ಮೂರೂ ಪಕ್ಷಗಳು ಕ್ಷೇತ್ರದ ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕಿರುವುದು ಈ ಬಾರಿಯ ವಿಶೇಷ.

ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಮತ್ತು ಜೆಡಿಎಸ್‌ ಅಭ್ಯರ್ಥಿ ನಿಯಾಜ್‌ ಶೇಖ್‌ ಈ ಮೂವರು ಮೂಲತಃ ಹಾನಗಲ್‌ ಕ್ಷೇತ್ರದವರಲ್ಲ.

ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಹಾವೇರಿ ತಾಲ್ಲೂಕಿನ ದೇವಗಿರಿ ಗ್ರಾಮದವರು. 2004ರಲ್ಲಿ ಹಾವೇರಿ ಕ್ಷೇತ್ರದಿಂದ ಶಾಸಕರಾಗಿ, 2009ರಲ್ಲಿ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದರು. 2016ರಿಂದ ಮೂರು ವರ್ಷ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.ಸಿ.ಎಂ.ಉದಾಸಿ ಅವರ ಕುಟುಂಬಕ್ಕೆ ಆಪ್ತರು ಎಂಬುದೇ ಹಾನಗಲ್‌ ಕ್ಷೇತ್ರಕ್ಕೆ ಇವರಿಗಿರುವನಂಟಾಗಿದೆ.

ಅಲ್ಪ ಮತಗಳಿಂದ ಸೋಲು: ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಮೂಲತಃ ಹುಬ್ಬಳ್ಳಿಯವರು.2009 ಮತ್ತು 2015ರಲ್ಲಿ ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದರು. ಎಐಸಿಸಿ ಮತ್ತು ಕೆಪಿಸಿಸಿಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ಅನುಭವವಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಹಾನಗಲ್‌ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಸಿ.ಎಂ.ಉದಾಸಿ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತಿದ್ದರು.

ಸೋಲಿನ ನಂತರವೂ ಕ್ಷೇತ್ರವನ್ನು ತೊರೆಯದೆ, ಹಾನಗಲ್‌ ತಾಲ್ಲೂಕಿನ ಗೆಜ್ಜೆಹಳ್ಳಿ ಗ್ರಾಮದಲ್ಲಿ ಮೂರು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಹಾನಗಲ್‌ ಪಟ್ಟಣದಲ್ಲಿ 10 ಗುಂಟೆ ಜಮೀನು ಖರೀದಿಸಿ, ಮನೆ ಕಟ್ಟಿಸುತ್ತಿದ್ದಾರೆ. ಅದರ ಪಕ್ಕದ ಕಟ್ಟಡದಲ್ಲೇ ಸದ್ಯಕ್ಕೆ ವಾಸವಿದ್ದಾರೆ. ಹಾನಗಲ್‌ ಮತದಾರರ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ.

ಕಾಂಗ್ರೆಸ್ ಸಂಘಟನೆ; ಜೆಡಿಎಸ್‌ ಟಿಕೆಟ್‌!

ಜೆಡಿಎಸ್‌ ಅಭ್ಯರ್ಥಿ ನಿಯಾಜ್‌ ಶೇಖ್‌ ಮೂಲತಃ ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಜಡೆ ಗ್ರಾಮದವರು. ಮೂರ್ನಾಲ್ಕು ವರ್ಷಗಳ ಹಿಂದೆ ಹಾನಗಲ್‌ ಕ್ಷೇತ್ರಕ್ಕೆ ಬಂದು ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಉಪಚುನಾವಣೆ ದಿನಾಂಕ ಘೋಷಣೆಯಾಗುವ ಮೂರು ತಿಂಗಳು ಮುನ್ನವೇ ಜೆಡಿಎಸ್‌ನಿಂದ ಟಿಕೆಟ್‌ ಪಡೆದು ಮತದಾರರಲ್ಲಿ ಅಚ್ಚರಿ ಮೂಡಿಸಿದ್ದರು.

ಶ್ರೀನಿವಾಸ ಮಾನೆ ಮತ್ತು ನಿಯಾಜ್‌ಶೇಖ್‌ ಅವರು ಪ್ರಸ್ತುತ ಹಾನಗಲ್‌ ಪಟ್ಟಣದ ನಿವಾಸಿಗಳಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಣಿ ಮಾಡಿಸಿದ್ದಾರೆ. ಆದರೆ, ಶಿವರಾಜ ಸಜ್ಜನರ ಇಂದಿಗೂ ಹಾವೇರಿ ಪಟ್ಟಣದ ನಿವಾಸಿಯಾಗಿದ್ದಾರೆ.

ಸ್ಥಳೀಯರ ಅಸಮಾಧಾನ:‘ಪಕ್ಷಕ್ಕಾಗಿ ದುಡಿದ ಸ್ಥಳೀಯ ಮುಖಂಡರಿಗೆ ಉಪಚುನಾವಣೆಯಲ್ಲಿ ಟಿಕೆಟ್‌ ನೀಡುವ ಮೂಲಕ ಹೊಸ ನಾಯಕರನ್ನು ಬೆಳೆಸಬಹುದಿತ್ತು. ಆದರೆ, ಮೂರು ಪಕ್ಷಗಳು ಹೊರಗಿನವರಿಗೆ ಆದ್ಯತೆ ನೀಡಿ ಸ್ಥಳೀಯರನ್ನು ಕಡೆಗಣಿಸಿದ್ದಾರೆ’ ಎಂಬ ಅಸಮಾಧಾನ ಪಕ್ಷಗಳ ಕಾರ್ಯಕರ್ತರಲ್ಲಿದೆ.

ಒಟ್ಟು 29 ಅಭ್ಯರ್ಥಿಗಳಿಂದ 45 ನಾಮಪತ್ರಗಳು ಸಲ್ಲಿಕೆಯಾಗಿವೆ. ಅ.11ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅ.13ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ರಾಷ್ಟ್ರೀಯ ಪಕ್ಷಗಳಲ್ಲಿ ತಗ್ಗಿದ ಅಪಸ್ವರ

ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳಲ್ಲಿದ್ದ ಅಸಮಾಧಾನ, ಭಿನ್ನಮತ ಮೇಲ್ನೋಟಕ್ಕೆ ಶಮನಗೊಂಡಂತೆ ಕಾಣುತ್ತಿದೆ.

‘ಹೊರಗಿನವರು’ ಮತ್ತು ‘ಒಳಗಿನವರು’ ಎಂಬ ಭಿನ್ನಮತ ಕಾಂಗ್ರೆಸ್‌ನಲ್ಲಿ ಭುಗಿಲೆದ್ದು, ಮಾಜಿ ಸಚಿವ ಮನೋಹರ ತಹಶೀಲ್ದಾರ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ್‌ ಮಾನೆ ಎರಡು ಬಣಗಳ ನಡುವೆ ಟಿಕೆಟ್‌ಗಾಗಿ ತೀವ್ರ ಜಿದ್ದಾಜಿದ್ದಿ ನಡೆದಿತ್ತು. ತಹಶೀಲ್ದಾರ್‌ ಅವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾನಗಲ್‌ನಲ್ಲಿ ಭರವಸೆ ಕೊಡುವ ಮೂಲಕ ಅಸಮಾಧಾನವನ್ನು ನಿವಾರಿಸಿದ್ದಾರೆ.

ಕೊನೆಯ ಕ್ಷಣದವರೆಗೂ, ಸಂಸದ ಶಿವಕುಮಾರ ಉದಾಸಿ ಅವರ ಪತ್ನಿ ರೇವತಿ ಉದಾಸಿ ಅವರಿಗೆ ಬಿಜೆಪಿಯಿಂದ ಟಿಕೆಟ್‌ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬಿಜೆಪಿ ವರಿಷ್ಠರು ಶಿವರಾಜ ಸಜ್ಜನರ ಅವರಿಗೆ ಟಿಕೆಟ್‌ ನೀಡುವ ಮೂಲಕ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ.

ಉದಾಸಿ ಕುಟುಂಬಕ್ಕೆ ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ಪ್ರತಿಭಟನೆ ನಡೆಸಿದವರನ್ನು ಸ್ವತಃ ಶಿವಕುಮಾರ ಉದಾಸಿ ಅವರೇ ಮನವೊಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT