ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯ ಗೊಂದಲ; ಗೆಲ್ಲುವ ಕುದುರೆ ಕಣಕ್ಕಿಳಿಸಲು ಪೈಪೋಟಿ

ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ *ಜೆಡಿಎಸ್‌ ನಿರಾಳ
Last Updated 30 ಸೆಪ್ಟೆಂಬರ್ 2021, 5:07 IST
ಅಕ್ಷರ ಗಾತ್ರ

ಹಾವೇರಿ: ಹಾನಗಲ್‌ ವಿಧಾನಸಭಾ ಉಪಚುನಾವಣೆಯ ಟಿಕೆಟ್‌ ಪಡೆಯಲು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಾಯಕರ ನಡುವೆ ತೆರೆಮರೆಯ ಕಸರತ್ತು ಜೋರಾಗಿ ನಡೆಯುತ್ತಿದೆ. ‘ಭದ್ರಕೋಟೆ’ ಉಳಿಸಿಕೊಳ್ಳಬೇಕು ಎಂಬುದು ಬಿಜೆಪಿಯ ತಂತ್ರವಾದರೆ, ಈ ಬಾರಿ ಗೆಲುವು ದಾಖಲಿಸಲೇಬೇಕು ಎಂದು ಕಾಂಗ್ರೆಸ್ ಪ್ರತಿತಂತ್ರ ಹೂಡಿದೆ.

ವರಿಷ್ಠರ ಮನವೊಲಿಸಿ ಟಿಕೆಟ್‌ ಪಡೆಯಲು ಬಿಜೆಪಿ ಮತ್ತು ಕಾಂಗ್ರೆಸ್‌ ಪಾಳಯದಲ್ಲಿತರಹೇವಾರಿ ತಂತ್ರಗಳು ಶುರುವಾಗಿವೆ. ಟಿಕೆಟ್‌ ಆಕಾಂಕ್ಷಿಗಳಿಂದ ಬೆಂಗಳೂರು ಮತ್ತು ದೆಹಲಿ ಯಾತ್ರೆ ಜೋರಾಗಿದೆ.

ಚುನಾವಣಾ ದಿನಾಂಕ ಘೋಷಣೆಯಾಗುವ ನಾಲ್ಕು ತಿಂಗಳ ಮುಂಚೆಯೇ ನಿಯಾಜ್‌ ಶೇಖ್‌ ಅವರನ್ನು ಜೆಡಿಎಸ್‌ ಅಭ್ಯರ್ಥಿ ಎಂದು ಘೋಷಿಸಿ ಅಚ್ಚರಿ ಮೂಡಿಸಿದೆ. ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸದೇ ಅಭ್ಯರ್ಥಿ ಘೋಷಣೆ ಮಾಡಿರುವ ಬಗ್ಗೆ ಆರಂಭದಲ್ಲಿ ಸ್ಥಳೀಯ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಜೆಡಿಎಸ್‌ ವರಿಷ್ಠರ ಸೂಚನೆ ಮೇರೆಗೆ ಈಗ ಅಪಸ್ವರ ಮೇಲ್ನೋಟಕ್ಕೆ ಕ್ಷೀಣಿಸಿದಂತೆ ಕಾಣುತ್ತಿದೆ.

ಸಿಎಂ ತವರು ಜಿಲ್ಲೆ:

ಶಾಸಕರಾಗಿದ್ದ ಸಿ.ಎಂ. ಉದಾಸಿ ಅವರು ಜೂನ್‌ 8ರಂದು ನಿಧನರಾದ ಹಿನ್ನೆಲೆಯಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಉದಾಸಿ ಅವರು ಹಾನಗಲ್‌ ಕ್ಷೇತ್ರದಲ್ಲಿ 9 ಬಾರಿ ಸ್ಪರ್ಧಿಸಿ, 6 ಬಾರಿ ಗೆಲುವು ಕಂಡಿದ್ದರು. ಹೀಗಾಗಿ ಸದ್ಯಕ್ಕೆ ‘ಬಿಜೆಪಿಯ ಭದ್ರಕೋಟೆ’ ಎನಿಸಿರುವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬುದು ಬಿಜೆಪಿಯ ಪಾಲಿಗೆ ಪ್ರತಿಷ್ಠೆಯಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಜತೆಗೆ ‘ಸಿಎಂ ತವರು ಜಿಲ್ಲೆ’ಯಲ್ಲಿ ಉಪಚುನಾವಣೆ ನಡೆಯುತ್ತಿರುವುದರಿಂದ ಇಡೀ ಸರ್ಕಾರವೇ ಅಭ್ಯರ್ಥಿಯ ಬೆನ್ನಿಗೆ ನಿಲ್ಲುತ್ತದೆ. ಹೀಗಾಗಿ ಗೆಲುವು ಬಿಜೆಪಿಗೆ ಕಟ್ಟಿಟ್ಟಬುತ್ತಿ ಎಂದು ಬಿಜೆಪಿ ಕಾರ್ಯಕರ್ತರು ಬೀಗುತ್ತಿದ್ದಾರೆ.

ಟಿಕೆಟ್‌ಗಾಗಿ ಪೈಪೋಟಿ:

ಬಿಜೆಪಿಯಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲ. ತಂದೆಯವರ ಸ್ಥಾನವನ್ನು ಪುತ್ರ ಸಂಸದ ಶಿವಕುಮಾರ ಉದಾಸಿ ತುಂಬುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದೆ ಹೇಳಿದ್ದರು. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ, ಶಿವಕುಮಾರ ಉದಾಸಿ ರಾಷ್ಟ್ರ ರಾಜಕಾರಣದಲ್ಲೇ ಉಳಿದುಕೊಂಡು, ಅವರ ಪತ್ನಿ ರೇವತಿ ಉದಾಸಿ ಅವರನ್ನು ಕಣಕ್ಕಿಳಿಸಬಹುದು ಎನ್ನಲಾಗುತ್ತಿದೆ.

‘ಕೇಸರಿ’ ಪಾಳಯದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಸಂದೀಪ ಪಾಟೀಲ, ಬಿ.ವೈ.ವಿಜಯೇಂದ್ರ, ಕೃಷ್ಣ ಈಳಗೇರ ಸೇರಿದಂತೆ ಹಲವರ ಹೆಸರುಗಳು ಕೇಳಿ ಬರುತ್ತಿವೆ. ಹೀಗಾಗಿ ಗೆಲ್ಲುವ ಕುದುರೆಯನ್ನು ಆಯ್ಕೆ ಮಾಡಲು ಪಕ್ಷದ ವರಿಷ್ಠರು ಕಸರತ್ತು ನಡೆಸುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ!

ಕಾಂಗ್ರೆಸ್‌ನಿಂದ ಮಾಜಿ ಸಚಿವ ಮನೋಹರ ತಹಶೀಲ್ದಾರ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಬಣಗಳ ನಡುವೆ ಮಾತಿನ ಚಕಮಕಿ ಜೋರಾಗಿದೆ. ಟಿಕೆಟ್‌ ಪಡೆಯಲು ಎರಡೂ ಬಣಗಳಿಂದ ಇನ್ನಿಲ್ಲದ ಕಸರತ್ತು ನಡೆಯುತ್ತಿದೆ.

‘ಸ್ಥಳೀಯರು’ ಮತ್ತು ‘ಹೊರಗಿನವರು’ ಎಂಬ ಭಿನ್ನಾಭಿಪ್ರಾಯ ತಲೆದೋರಿದೆ. ಇದೇ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿರುವ ಮನೋಹರ್‌ ತಹಶೀಲ್ದಾರ್‌ ಅವರು ನನಗೇ ಟಿಕೆಟ್‌ ಕೊಡಬೇಕು, ಇಲ್ಲವೇ ಸ್ಥಳೀಯ ನಾಯಕರಿಗೆ ಕೊಡಬೇಕು. ಹೊರಗಡೆಯಿಂದ ಬಂದ ಮಾನೆ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದಿಲ್ಲ ಎಂದು ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದ್ದಾರೆ.

2018ರ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋಲು ಅನುಭವಿಸಿದರೂ, ಶ್ರೀನಿವಾಸ ಮಾನೆ ಅವರು ಕ್ಷೇತ್ರವನ್ನು ಬಿಡದೆ ಪಕ್ಷ ಸಂಘಟನೆ ಮತ್ತು ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ನನಗೇ ಟಿಕೆಟ್‌ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.

ಹಾನಗಲ್‌ ಕ್ಷೇತ್ರದ ಗೆಲುವಿನ ಸರದಾರರು

ವರ್ಷ;ವಿಜೇತರು;ಪಕ್ಷ

1957;ಬಿ.ಆರ್.ಪಾಟೀಲ;ಪಕ್ಷೇತರ

1962;ಜಿ.ಎಸ್‌.ದೇಸಾಯಿ;ಕಾಂಗ್ರೆಸ್‌

1967;ಬಿ.ಆರ್‌.ಪಾಟೀಲ;ಪಕ್ಷೇತರ

1968;ಜಿ.ಎಸ್‌.ದೇಸಾಯಿ;ಕಾಂಗ್ರೆಸ್‌

1972;ಪಿ.ಸಿ.ಶೆಟ್ಟರ್‌;ಕಾಂಗ್ರೆಸ್‌

1978;ಮನೋಹರ ತಹಶೀಲ್ದಾರ್‌;ಕಾಂಗ್ರೆಸ್‌

1983;ಸಿ.ಎಂ.ಉದಾಸಿ;ಪಕ್ಷೇತರ

1985;ಸಿ.ಎಂ.ಉದಾಸಿ;ಜನತಾಪಕ್ಷ

1989;ಮನೋಹರ ತಹಶೀಲ್ದಾರ್‌;ಕಾಂಗ್ರೆಸ್‌

1994;ಸಿ.ಎಂ.ಉದಾಸಿ;ಜನತಾದಳ

1999;ಮನೋಹರ ತಹಶೀಲ್ದಾರ್‌;ಕಾಂಗ್ರೆಸ್‌

2004;ಸಿ.ಎಂ.ಉದಾಸಿ;ಬಿಜೆಪಿ

2008;ಸಿ.ಎಂ.ಉದಾಸಿ;ಬಿಜೆಪಿ

2013;ಮನೋಹರ ತಹಶೀಲ್ದಾರ್;ಕಾಂಗ್ರೆಸ್‌

2018;ಸಿ.ಎಂ.ಉದಾಸಿ;ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT