ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್ ಉಪಚುನಾವಣೆ: 263 ಮತಗಟ್ಟೆಗಳಲ್ಲಿ ಮತದಾನ ಆರಂಭ

Last Updated 30 ಅಕ್ಟೋಬರ್ 2021, 3:51 IST
ಅಕ್ಷರ ಗಾತ್ರ

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ 263 ಮತಗಟ್ಟೆಗಳಲ್ಲಿ ಶನಿವಾರ ಬೆಳಿಗ್ಗೆ 7ರಿಂದ ಆರಂಭಗೊಂಡಿತು.

ಸಂಜೆ 7 ಗಂಟೆವರೆಗೆ ಮತದಾನ ನಡೆಯಲಿದ್ದು, ಸುಗಮ ಹಾಗೂ ಶಾಂತಿಯುತ ಮತದಾನಕ್ಕೆ ಎಲ್ಲ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ವಿವಿಧ ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಿಗೆ ಪೂಜೆ ಸಲ್ಲಿಸಿದ ನಂತರ ಮತದಾನ ಆರಂಭಗೊಂಡಿತು.

ಕ್ಷೇತ್ರ ವ್ಯಾಪ್ತಿಯಲ್ಲಿ ಸುಗಮ ಮತದಾನಕ್ಕಾಗಿ 239 ಮೂಲ ಹಾಗೂ 24 ಹೆಚ್ಚುವರಿ 263 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಪ್ರತಿ ಮತಗಟ್ಟೆಗಳಲ್ಲಿ ರ‍್ಯಾಂಪ್‌, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ತಲಾ 263 ಬಿಯು, ಸಿಯು ಹಾಗೂ ವಿವಿ ಪ್ಯಾಟ್‍ಗಳನ್ನು ಸಿದ್ಧಪಡಿಸಲಾಗಿದೆ.

ಪ್ರತಿ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ನಾಲ್ಕು ಜನರನ್ನು ನೇಮಕ ಮಾಡಲಾಗಿದೆ. ಒಟ್ಟಾರೆ 263 ಮತಗಟ್ಟೆಗಳಲ್ಲಿ 1155 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಒಂದು ‘ಅಂಗವಿಕಲಸ್ನೇಹಿ’ ಮತಗಟ್ಟೆ (ಸಂಖ್ಯೆ-98) ಹಾಗೂ ಎರಡು ‘ಸಖಿ’ ಮತಗಟ್ಟೆಗಳನ್ನು (ಸಂಖ್ಯೆ 97 ಮತ್ತು 122) ಸ್ಥಾಪಿಸಲಾಗಿದೆ. ಕ್ಷೇತ್ರದಲ್ಲಿ 33 ಸೂಕ್ಷ್ಮ, 3 ದುರ್ಬಲ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಿಗೆ 21 ಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಲಾಗಿದೆ. 121 ಮತಗಟ್ಟೆಗಳಲ್ಲಿ ‘ವೆಬ್ ಕಾಸ್ಟಿಂಗ್’ ಸೌಲಭ್ಯ ಕಲ್ಪಿಸಲಾಗಿದೆ.

ಜಿಲ್ಲಾ ಕಂಟ್ರೋಲ್ ರೂಂ ಹಾಗೂ ಸಿಇಒ ಕಚೇರಿ, ಹಾಗೂ ಆರ್.ಒ. ಕಚೇರಿಯಿಂದ ಮತದಾನವನ್ನು ‘ವೆಬ್ ಕಾಸ್ಟಿಂಗ್’ ಮೂಲಕ ವೀಕ್ಷಣೆ ಮೂಲಕ ನಿಗಾವಹಿಸಲಾಗುತ್ತಿದೆ.

ರಾಜಕೀಯ ಪೋಸ್ಟರ್‌, ಬ್ಯಾನರ್, ಪಕ್ಷದ ಚಿಹ್ನೆಯನ್ನು ಪ್ರದರ್ಶಿಸುವಂತಿಲ್ಲ. ಮತದಾರರಿಗೆ ಪಕ್ಷದ ಚಿಹ್ನೆ, ಹೆಸರು ಇರುವ ಮತದಾರರ ಚೀಟಿ ನೀಡುವಂತಿಲ್ಲ. ಮತಗಟ್ಟೆ ವ್ಯಾಪ್ತಿಯಲ್ಲಿ ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಮತದಾನ ಪ್ರಕ್ರಿಯೆಗೆ 610 ಪೊಲೀಸ್ ಸಿಬ್ಬಂದಿ, ನಾಲ್ಕು ಡಿಎಸ್‍ಪಿ, 11 ಸಿಪಿಐ, 29 ಪಿಎಸ್‍ಐ, 85 ಎಎಸ್‍ಐ, 481 ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಕಾನ್‌ಸ್ಟೆಬಲ್‌ಗಳು, 30 ಜನ ಮಹಿಳಾ ಸಿಬ್ಬಂದಿ, 90 ಸಿಆರ್‌ಪಿ ಸಿಬ್ಬಂದಿ, ಒಂದು ಸಿಐಎಸ್‍ಎಫ್ 90 ಸಿಬ್ಬಂದಿ, ಆರು ಪ್ಲಾಟೂನ್‍ಗಳನ್ನು ಒಳಗೊಂಡ ಕೆಎಸ್‍ಆರ್‌ಪಿ ಸಿಬ್ಬಂದಿ ಹಾಗೂ ಸೂಕ್ಷ್ಮ ಮತಗಟ್ಟೆಗಳಿಗೆ ಅರೆಸೇನಾ ಪಡೆ ಸಿಬ್ಬಂದಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

ಮೂರು ಬೂತ್ ಗಳಲ್ಲಿ ಕೈಕೊಟ್ಟ ಮತಯಂತ್ರ
ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು, ಮೂರು ಬೂತ್ ಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.

ಸೆಕ್ಟರ್ ಒಂದರ ಬೂತ್ ಸಂಖ್ಯೆ 8, ಸೆಕ್ಟರ್ 28ರ ಬೂತ್ ಸಂಖ್ಯೆ 211 ಹಾಗೂ ಹನುಮಸಾಗರ ಗ್ರಾಮದಲ್ಲೂ ಮತಯಂತ್ರಗಳು ಕೈಕೊಟ್ಟಿವೆ.

ಮತದಾರರ ವಿವರ

1,05,525 ಪುರುಷ ಮತದಾರರು

98,953 ಮಹಿಳಾ ಮತದಾರರು

03 ಇತರ ಮತದಾರರು

2,04,481 ಒಟ್ಟು ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT