ಬುಧವಾರ, ನವೆಂಬರ್ 20, 2019
22 °C
1.23 ಲಕ್ಷ ಹೆಕ್ಟೇರ್ ಬೆಳೆ ಹಾನಿ * ಎನ್‌ಡಿಆರ್‌ಎಫ್‌ ಪ್ರಕಾರ ಗುಂಟೆಗೆ ₹ 68 ‍ಪರಿಹಾರ

ನೆರೆ ಬಂದು ಹೋದ ಬಳಿಕ ಹಾವೇರಿ ಜಿಲ್ಲೆಯ 26 ಅನ್ನದಾತರ ಆತ್ಮಹತ್ಯೆ!

Published:
Updated:
Prajavani

ಹಾವೇರಿ: ನೆರೆ ಬಂದು ಹೋದ ಮೇಲೆ ಸಾಲದ ಶೂಲ, ಬೆಳೆ ಹಾಗೂ ಜಮೀನು ಹಾನಿ ಕಾರಣದಿಂದಲೇ ಜಿಲ್ಲೆಯಲ್ಲಿ 26 ಅನ್ನದಾತರು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ. ಜೀವನ ನಿರ್ವಹಣೆಗೆ ಆಧಾರವಾಗಿದ್ದವರನ್ನು ಕಳೆದುಕೊಂಡು ಅವರ ಕುಟುಂಬದವರೂ ಕಂಗಾಲಾಗಿದ್ದಾರೆ. ಮತ್ತೊಂದೆಡೆ ಸರ್ಕಾರ ಗುಂಟೆಯ ಪರಿಹಾರಕ್ಕೂ ತರಹೇವಾರಿ ಲೆಕ್ಕಾಚಾರ ಪೋಣಿಸಿ ಕೃಷಿಕನ ಬದುಕಿಗೇ ಬೆರೆ ಎಳೆಯುತ್ತಿದೆ.

ಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆ ಹಾಗೂ ಉಂಟಾದ ಪ್ರವಾಹದಿಂದ 1.23 ಲಕ್ಷ ಹೆಕ್ಟೇರ್ ಕೃಷಿ ಬೆಳೆ, 13,649 ತೋಟಗಾರಿಕಾ ಬೆಳೆಗಳು ಹಾಳಾಗಿವೆ. ಹಾಗೆಯೇ, 13 ಸಾವಿರ ಹೆಕ್ಟೇರ್ ಕೃಷಿ ಭೂಮಿ ಹಾಗೂ 228 ಹೆಕ್ಟೇರ್ ತೋಟಗಾರಿಕಾ ಪ್ರದೇಶದಲ್ಲಿ ಮಣ್ಣಿನ ಸವಕಳಿ ಉಂಟಾಗಿದೆ. ಇಷ್ಟೆಲ್ಲ ಅನಾಹುತ ಸಂಭವಿಸಿ ಒಂದೂವರೆ ತಿಂಗಳು ಕಳೆದರೂ ಕೃಷಿಕರಿಗೆ ಬಿಡಿಗಾಸಿನ ಪರಿಹಾರವೂ ಸಿಕ್ಕಿಲ್ಲ.

‘ಮನೆಯೊಳಗೆ ನೀರು ನುಗ್ಗಿದ್ದಕ್ಕೆ ಹಾಗೂ ಗೋಡೆ ಕುಸಿದಿದ್ದಕ್ಕೆ ಸರ್ಕಾರ ತಕ್ಷಣದ ಪರಿಹಾರವೆಂದು ₹ 10 ಸಾವಿರ ನೀಡಿತು. ಆ ಕ್ರಮವನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. ಆದರೆ, ಅದೇ ಕಾಳಜಿಯನ್ನು ರೈತರ ಮೇಲೆ ಏಕೆ ತೋರಿಸುತ್ತಿಲ್ಲ? ಒಂದಿಷ್ಟು ಹಣವನ್ನು ತಾತ್ಕಾಲಿಕ ಪರಿಹಾರವೆಂದು ನಮಗೂ ಕೊಟ್ಟಿದ್ದರೆ, ಜಮೀನು ಸ್ವಚ್ಛ ಮಾಡಿಕೊಂಡು ಮುಂದಿನ ಬಿತ್ತನೆಗೆ ಸಜ್ಜಾಗುತ್ತಿದ್ದೆವು’ ಎಂಬುದು ಜಿಲ್ಲೆಯ ಅಸಹಾಯಕ ರೈತರ ಮಾತುಗಳು.

ಗುಂಟೆಗೆ ₹ 68 ಅಂತೆ:

‘ಕೃಷಿ ಇಲಾಖೆ ಅಧಿಕಾರಿಗಳು ಈಗಾಗಲೇ ಹಾನಿಯಾದ ಜಮೀನುಗಳ ಸಮೀಕ್ಷೆ ನಡೆಸಿದ್ದಾರೆ. ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಬೆಳೆ ಹಾನಿಗೆ ಗುಂಟೆಗೆ ₹ 68ರಂತೆ ಪರಿಹಾರ ಸಿಗುತ್ತದಂತೆ. ಅಷ್ಟು ಹಣದಲ್ಲಿ ಬಿತ್ತನೆ ಬೀಜವನ್ನೂ ಖರೀದಿಸಲು ಆಗುವುದಿಲ್ಲ. ರೈತನ ವಿಚಾರದಲ್ಲಿ ಇಷ್ಟೊಂದು ಅನ್ಯಾಯ ಯಾಕೆ’ ಎಂಬುದು ದೇವಗಿರಿಯ ರೈತ ಮಂಜಪ್ಪ ಬಾಗೇವಾಡ ಅವರ ಪ್ರಶ್ನೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ‘ದಶಕದ ಹಿಂದೆ ಗುಂಟೆಗೆ ₹ 45ರಂತೆ ಪರಿಹಾರ ಕೊಡಲಾಗುತ್ತಿತ್ತು. ಈ ನೀತಿ ವಿರುದ್ಧ ರೈತ ಸಂಘಗಳು ಹೋರಾಟ ನಡೆಸಿದ್ದರಿಂದ ಆ ಮೊತ್ತ ₹ 68ಕ್ಕೆ ಬಂದು ನಿಂತಿದೆ. ಬರಗಾಲದ ಪರಿಹಾರವೇ ಇನ್ನೂ ಜಿಲ್ಲೆಯ ರೈತರ ಕೈಸೇರಿಲ್ಲ. ಹೀಗಿರುವಾಗ ನೆರೆಪರಿಹಾರಕ್ಕೆ ಅದೆಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ’ ಎಂದರು.

‘ಒಂದೂವರೆ ತಿಂಗಳಲ್ಲಿ 26 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅವರ ಆರ್ಥಿಕ ಸ್ಥಿತಿಯನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಜಮೀನಿನಲ್ಲಿ ಮರಳು ತುಂಬಿಕೊಂಡಿದ್ದು, ಅದನ್ನು ರೈತನೇ ಹೊರಹಾಕಬೇಕು. ಇನ್ನೂ ಐದಾರು ವರ್ಷ ಆ ಜಮೀನುಗಳಲ್ಲಿ ಬೆಳೆ ಬೆಳೆಯಲು ಸಾಧ್ಯವಿಲ್ಲ. ಸರ್ಕಾರ ಕೂಡಲೇ ತಾತ್ಕಾಲಿಕ ಪರಿಹಾರವೆಂದು ಎಕರೆಗೆ ₹ 25 ಸಾವಿರದಂತೆ ರೈತನಿಗೆ ಹಣ ಕೊಡಬೇಕು’ ಎಂದು ಅವರು ಮನವಿ ಮಾಡಿದರು.

ಹೊಣೆ ಯಾರು?

‘ನಮ್ಮದು ಏಳು ಎಕರೆ ಜಮೀನಿದ್ದು, ಕೃಷಿ ಉದ್ದೇಶಕ್ಕಾಗಿ ತಂದೆ ವೀರಭದ್ರಗೌಡ ವಿಜಯಾ ಬ್ಯಾಂಕ್‌ನ ಹುಲಗೂರು ಶಾಖೆಯಲ್ಲಿ ₹ 7.5 ಲಕ್ಷ ಸಾಲ ಮಾಡಿದ್ದರು. ಇತರೆ ಸಂಘ ಸಂಸ್ಥೆಗಳಿಂದಲೂ ₹ 15 ಲಕ್ಷ ಸಾಲ ಪಡೆದಿದ್ದರು. ಕಳೆದ ವರ್ಷ ಬರದಿಂದ, ಈ ವರ್ಷ ನೆರೆಯಿಂದ ಎಲ್ಲ ಬೆಳೆ ನಷ್ಟವಾಯಿತು. ಇದರಿಂದ ನೊಂದು ತಂದೆ ಸೆ.2ರಂದು ದನದ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡರು. ಅವರ ಸಾವಿಗೆ ಯಾರನ್ನು ಹೊಣೆ ಮಾಡಬೇಕು’ ಎನ್ನುತ್ತ ದುಃಖತಪ್ತರಾದರು ಅವರ ಮಗ ಬಸವನಗೌಡ ಪಾಟೀಲ. 

ಈಚೆಗೆ ವರದಿಯಾದ ಪ್ರಕರಣಗಳು

ಸೆ.10: ರಾಣೆಬೆನ್ನೂರಿನ ರೈತ ಕರಿಯಪ್ಪ ನೇಣಿಗೆ ಶರಣಾದರು. ಶೇಂಗಾ ಹಾಗೂ ಗೋವಿನ ಜೋಳ ಬೆಳೆ ಹಾನಿಯಾಗಿತ್ತು. ₹ 2.65 ಲಕ್ಷ ಸಾಲ ಮಾಡಿಕೊಂಡಿದ್ದರು.

ಸೆ.8: ಹೊನ್ನತ್ತಿ ಗ್ರಾಮದ ಹನುಮಂತಪ್ಪ ನೀಲಪ್ಪ ವಿಷ ಕುಡಿದು ಅಸುನೀಗಿದರು. ಕೆವಿಜಿ ಬ್ಯಾಂಕ್‌ನಲ್ಲಿ ₹ 20 ಸಾವಿರ ಹಾಗೂ ಖಾಸಗಿ ಕೈಗಡ ₹ 40 ಸಾವಿರ ಇತ್ತು. ಜಮೀನು ಜಲಾವೃತವಾಗಿತ್ತು.

ಸೆ.5: ಹೆಡಿಯಾಲ ಗ್ರಾಮದ ನಾಗಪ್ಪ ನೇಣಿಗೆ ಕೊರಳೊಡ್ಡಿದರು. ಎಲೆಬಳ್ಳಿ ಹಾಗೂ ಗೋವಿನಜೋಳ ನಾಶವಾಗಿತ್ತು. ₹ 2.35 ಲಕ್ಷ ಬೆಳೆ ಸಾಲ ಹಾಗೂ ಕುರಿ ಸಾಕಾಣಿಕೆಗೆ ₹ 2.5 ಲಕ್ಷ ಸಾಲ ಮಾಡಿದ್ದರು.

ಸೆ.4: ಐರಣಿ ಗ್ರಾಮದ ಗುರುಮೂರ್ತಪ್ಪ ಕೊಟ್ರಪ್ಪ ಚಳಗೇರಿ ಜಮೀನಿನಲ್ಲೇ ವಿಷ ಕುಡಿದರು. ಬೆಳೆಗಾಗಿ ಸಂಬಂಧಿಕರ ಬಳಿ ಸಾಲ ಮಾಡಿಕೊಂಡಿದ್ದರು.

ಸೆ.1: ಅರಳಿಕಟ್ಟಿ ರೈತ ಕರಬಸಪ್ಪ ಸಿಬಾರ ಓಣಿಯಲ್ಲಿ ಆತ್ಮಹತ್ಯೆಗೆ ಶರಣಾದರು. ₹ 3.25 ಲಕ್ಷ ಸಾಲವಿತ್ತು. ನೆರೆಯಿಂದ ಇವರ 5 ಎಕರೆ 7 ಗುಂಟೆ ಬೆಳೆ ನಾಶವಾಗಿತ್ತು.

ಪ್ರತಿಕ್ರಿಯಿಸಿ (+)