ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ರೋಗಿಗಳ ಹಸಿವು ನೀಗಿಸಿದ ಕ್ಯಾಂಟೀನ್‌

ಹಾವೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ರಾಘವೇಂದ್ರ ಭವನದಲ್ಲಿ ಪಾರ್ಸಲ್‌ ಸೌಲಭ್ಯ: ತರಹೇವಾರಿ ಗಂಜಿ ತಯಾರಿ
Last Updated 3 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಹಾವೇರಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ಹೋಟೆಲ್‌, ರೆಸ್ಟೋರೆಂಟ್‌, ಖಾನಾವಳಿ, ಡಾಬಾಗಳು ಬಹುತೇಕ ಮುಚ್ಚಿದ್ದು, ಪಾರ್ಸಲ್‌ ಸೇವೆ ಕೂಡ ಸಿಗುತ್ತಿಲ್ಲ. ಇಂಥ ಹೊತ್ತಿನಲ್ಲಿ ನೂರಾರು ರೋಗಿಗಳ ಹಸಿವು ನೀಗಿಸುವ ಶ್ಲಾಘನೀಯ ಕೆಲಸ ಮಾಡುತ್ತಿದೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ರಾಘವೇಂದ್ರ ಭವನ.

ಪಾರ್ಸಲ್‌ ಕೊಡಲು ಜಿಲ್ಲಾಡಳಿತ ಅನುಮತಿ ನೀಡಿದ್ದರೂ, ಹೋಟೆಲ್‌ ಅಸೋಸಿಯೇಷನ್‌ನವರು ರೆಸ್ಟೋರೆಂಟ್‌ಗಳನ್ನು ತೆರೆಯಲು ಮನಸು ಮಾಡುತ್ತಿಲ್ಲ. ಕಾರ್ಮಿಕರ ಸಮಸ್ಯೆ, ಗ್ರಾಹಕರ ಕೊರತೆ, ವ್ಯಾಪಾರ ನಷ್ಟ...ಮುಂತಾದ ಕಾರಣಗಳಿಂದ ಹೋಟೆಲ್‌ ತೆರೆದಿಲ್ಲ ಎಂಬುದು ಹೋಟೆಲ್‌ ಮತ್ತು ಖಾನಾವಳಿ ಮಾಲೀಕರ ಸಬೂಬು.

ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ನಗರದಲ್ಲಿ ಯಾವುದೇ ಹೋಟೆಲ್‌ಗಳು ತೆರೆಯದ ಕಾರಣ ವಿದ್ಯಾರ್ಥಿಗಳು, ಅವಿವಾಹಿತರು, ಕೂಲಿ ಕಾರ್ಮಿಕರು, ಪೌರಕಾರ್ಮಿಕರು, ಕೋವಿಡ್‌–19 ಅಗತ್ಯ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿ ಅಕ್ಷರಶಃ ಊಟಕ್ಕಾಗಿ ಪರದಾಡುತ್ತಿದ್ದಾರೆ.

ರೋಗಿಗಳಿಗೆ ಗಂಜಿ, ಬಿಸಿನೀರು:‘ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ರಾಘವೇಂದ್ರ ಭವನದಲ್ಲಿ ಉಚಿತವಾಗಿ ಬಿಸಿನೀರು ಕೊಡುತ್ತಿದ್ದೇವೆ. ಬಿಸಿನೀರಿಗಾಗಿಯೇ 2 ದಿನಕ್ಕೊಂದು ಸಿಲಿಂಡರ್‌ ಖಾಲಿಯಾಗುತ್ತದೆ. ಸಕ್ಕರೆ, ಉಪ್ಪು ಮತ್ತು ಬೆಲ್ಲದಿಂದ ತಯಾರಿಸಿದ ಮೂರು ರೀತಿಯ ಗಂಜಿಯನ್ನು ರೋಗಿಗಳಿಗಾಗಿ ವಿಶೇಷವಾಗಿ ಮಾಡಿಕೊಡುತ್ತೇವೆ. ಲಾಕ್‌ಡೌನ್‌ ಘೋಷಣೆಯಾದಾಗ 2 ದಿನ ಕ್ಯಾಂಟೀನ್ ಮುಚ್ಚಿದ ಪರಿಣಾಮ ರೋಗಿಗಳು ಮತ್ತು ಅವರ ಸಂಬಂಧಿಗಳು ಪರದಾಡಿದ್ದರು. ಹೀಗಾಗಿ ಜಿಲ್ಲಾಡಳಿತದಿಂದ ಅನುಮತಿ ಪಡೆದು ಪಾರ್ಸಲ್‌ ಸೌಲಭ್ಯವನ್ನು ಮುಂದುವರಿಸಿದ್ದೇವೆ’ ಎನ್ನುತ್ತಾರೆ ರಾಘವೇಂದ್ರ ಭವನದ ರುದ್ರಯ್ಯ.

ಬಿಸಿ ಬಿಸಿಯಾದ ಉಪ್ಪಿಟ್ಟು, ಕೇಸರಿಬಾತ್‌, ಇಡ್ಲಿ–ವಡಾ, ಪೂರಿ, ಪಲಾವ್‌, ಮಿರ್ಚಿ, ಮಂಡಕ್ಕಿ, ಟೀ, ಕಾಫಿ, ಹಾಲು ಸೇರಿದಂತೆ ಮುಂತಾದ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತದೆ. ಬೆಳಿಗ್ಗೆ 7ರಿಂದ ಮಧ್ಯಾಹ್ನ 2.30ರವರೆಗೆ ಮತ್ತು ಸಂಜೆ 4.30ರಿಂದ ರಾತ್ರಿ 8.30ರವರೆಗೆ ಕ್ಯಾಂಟೀನ್‌ ತೆರೆದಿರುತ್ತದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ‘ಸಾಮಾಜಿಕ ಅಂತರ’ ಕಾಯ್ದುಕೊಂಡು ಗ್ರಾಹಕರಿಗೆ ಪಾರ್ಸಲ್‌ ಕೊಡುತ್ತಿದ್ದಾರೆ. ಗ್ರಾಹಕರು ಕೈ ತೊಳೆಯಲು ಸಾಬೂನು ಇಡಲಾಗಿದೆ.ರೋಗಿಗಳು ಅಷ್ಟೇ ಅಲ್ಲದೆ, ಅವರ ಸಂಬಂಧಿಕರು, ಆಸ್ಪತ್ರೆ ಸಿಬ್ಬಂದಿ, ವಿವಿಧ ಸರ್ಕಾರಿ ಇಲಾಖೆಯ ನೌಕರರ ಹಸಿವನ್ನು ಕೂಡ ಈ ಕ್ಯಾಂಟೀನ್‌ ನೀಗಿಸುತ್ತಿದೆ.

ಶುಚಿ–ರುಚಿಗೆ ಆದ್ಯತೆ:‘ತರಕಾರಿ ಮತ್ತು ದಿನಸಿ ದರ ದುಬಾರಿಯಾಗಿದ್ದರೂ, ತಿಂಡಿ–ತಿನಿಸುಗಳ ಬೆಲೆಯನ್ನು ಏರಿಸದೆ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಎಂಬ ಮನೋಭಾವದಿಂದ ಕ್ಯಾಂಟೀನ್ ನಡೆಸುತ್ತಿದ್ದೇವೆ. ಲಾಕ್‌ಡೌನ್‌ಗೂ ಮುನ್ನ ದಿನಕ್ಕೆ ₹7 ಸಾವಿರ ವ್ಯಾಪಾರ ಆಗುತ್ತಿತ್ತು. ಈಗ ಕೇವಲ ಪಾರ್ಸಲ್‌ ಕೊಡುತ್ತಿರುವ ಕಾರಣ ₹4 ಸಾವಿರ ವ್ಯಾಪಾರವಾಗುತ್ತಿದೆ. ನಿತ್ಯ 400 ಪೊಟ್ಟಣ ಪಾರ್ಸಲ್‌ ಕೊಡುತ್ತಿದ್ದೆವು, ಈಗ ಅದು 250ಕ್ಕೆ ಇಳಿದಿದೆ. ಕಾರ್ಮಿಕರ ಸಮಸ್ಯೆಯ ನಡುವೆಯೂ ಗ್ರಾಹಕರಿಗೆ ರುಚಿ ಮತ್ತು ಶುಚಿಯಾದ ಆಹಾರ ನೀಡುತ್ತಿದ್ದೇವೆ’ ಎನ್ನುತ್ತಾರೆ ಕ್ಯಾಶಿಯರ್‌ ಬಸಯ್ಯ ಪ.ಪೂಜಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT