ಹಾವೇರಿ: ಹಾವೇರಿಯ ಎಂ.ಜಿ. ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟರು. ಸಾವಿಗೆ ಕಾರಣವೇನು? ಎಂಬುದನ್ನು ತಿಳಿಯಲು ಕುಟುಂಬಸ್ಥರು ಠಾಣೆಗೆ ಹೋಗಿದ್ದರು. ಆದರೆ, ‘ಘಟನಾ ಸ್ಥಳದಲ್ಲಿ ಯಾವುದೇ ಕ್ಯಾಮೆರಾ ಇಲ್ಲ. ಕಾರಣ ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಪೊಲೀಸರಿಂದ ಉತ್ತರ ಬಂತು.

ಜಿಲ್ಲಾಸ್ಪತ್ರೆ ಎದುರು ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದ್ದ ಘಟನೆಗೆ ಸಂಬಂಧಪಟ್ಟಂತೆ ಮಾಲೀಕ ಠಾಣೆಗೆ ಹೋಗಿ ದೂರು ಕೊಟ್ಟಾಗಲೂ, ಪೊಲೀಸರಿಂದ ಕ್ಯಾಮೆರಾ ಇಲ್ಲವೆಂಬ ಉತ್ತರ ಸಿದ್ಧವಾಗಿತ್ತು.

ಹೀಗೆ... ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಮೇಲಿಂದ ಮೇಲೆ ಅಪರಾಧ ಪ್ರಕರಣಗಳು ಹಾಗೂ ಅಪಘಾತಗಳು ಸಂಭವಿಸುತ್ತಿವೆ. ಸುಸಜ್ಜಿತ ಸಿ.ಸಿ.ಟಿ.ವಿ ಕ್ಯಾಮೆರಾ ವ್ಯವಸ್ಥೆ ಇಲ್ಲದಿದ್ದರಿಂದ, ಪ್ರಕರಣಗಳ ಪತ್ತೆ ಪೊಲೀಸರಿಗೆ ಸವಾಲಾಗುತ್ತಿದೆ.

ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾಗೂ ಏಲಕ್ಕಿ ಕಂಪಿನ ನಗರವೆಂದು ಗುರುತಿಸಿಕೊಂಡಿರುವ ಹಾವೇರಿ, ಅಸುರಕ್ಷಿತ ನಗರವೆಂಬ ಅಪಖ್ಯಾತಿಗೆ ಗುರಿಯಾಗುತ್ತಿದೆ. ಜಿಲ್ಲಾ ಕೇಂದ್ರ ಹಾವೇರಿಯ ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮೆರಾ ವ್ಯವಸ್ಥೆ ಇಲ್ಲದಿರುವುದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹಾವೇರಿಯಲ್ಲಿ ಬೈಕ್ ಕಳ್ಳತನ, ಮನೆಗಳಲ್ಲಿ ಕಳ್ಳತನ, ಅನುಮಾನಾಸ್ಪದ ಸಾವು ಸೇರಿ ಇತರೆ ಹಲವು ಅಪರಾಧಗಳು ವರದಿಯಾಗುತ್ತಿವೆ. ಕ್ಯಾಮೆರಾ ಇಲ್ಲದಿದ್ದರಿಂದ, ಕೃತ್ಯದ ಸುಳಿವು ಪತ್ತೆಯಾಗುತ್ತಿಲ್ಲ.

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಹಾವೇರಿ ನಗರ ಅಸುರಕ್ಷಿತವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು, ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಹಾಗೂ ಪತ್ತೆ ಮಾಡಲು ಹಾವೇರಿ ಶಹರ ಠಾಣೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ಕೆಲಸಕ್ಕೆ ನಗರಸಭೆಯಿಂದ ಸಹಕಾರ ಸಿಗುತ್ತಿಲ್ಲವೆಂಬ ಆರೋಪವಿದೆ.

‘ನಗರದಲ್ಲಿ ಕ್ಯಾಮೆರಾ ಅಳವಡಿಸಿ’ ಎಂದು ಪೊಲೀಸರು, ನಗರಸಭೆಗೆ ಆಗಾಗ ಪತ್ರ ಬರೆಯುತ್ತಿದ್ದಾರೆ. ಆದರೆ, ನಗರಸಭೆ ಕಿಮ್ಮತ್ತು ನೀಡುತ್ತಿಲ್ಲ. ಕ್ಯಾಮೆರಾ ನಿರ್ವಹಣೆಗಾಗಿ ನಗರಸಭೆಗೆ ಸಲ್ಲಿಸಿದ್ದ ಪ್ರಸ್ತಾವದ ಕಡತವೂ ಕಣ್ಮರೆಯಾಗಿರುವುದು, ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ.

ನಗರದಲ್ಲಿ ಓಡಾಡುವ ಮಹಿಳೆಯರು, ಮಕ್ಕಳ ಸುರಕ್ಷತೆಗೂ ಧಕ್ಕೆ ಬಂದಿದೆ. ಅಪಹರಣ ಹಾಗೂ ಇತರೆ ಅಪರಾಧಗಳು ಘಟಿಸಿದಾಗ, ತ್ವರಿತವಾಗಿ ಆರೋಪಿಗಳನ್ನು ಪತ್ತೆ ಮಾಡಲು ತೊಂದರೆ ಉಂಟಾಗುತ್ತಿದೆ. ಕ್ಯಾಮೆರಾ ಇಲ್ಲದಿರುವುದರಿಂದ ಹಾವೇರಿಯಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ.

ಜಿಲ್ಲಾ ಕೇಂದ್ರದ ಶಾಲೆ– ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಿತ್ಯವೂ ನಡೆದುಕೊಂಡು ಹೋಗಿ ಪಾಠ ಕೇಳುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮೆರಾ ಇಲ್ಲದಿದ್ದರಿಂದ, ಅವರ ಓಡಾಟಕ್ಕೆ ಆಪತ್ತು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯದವರು ನಗರದಲ್ಲಿ ಓಡಾಡುತ್ತಿದ್ದು, ಅವರ ಮೇಲೆ ನಿಗಾ ಇರಿಸಲು ಸಹ ಕ್ಯಾಮೆರಾಗಳು ಇಲ್ಲದಂತಾಗಿದೆ.

‘ತಾಲ್ಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಸಿ.ಸಿ.ಟಿ.ವಿ ಕ್ಯಾಮೆರಾ ವ್ಯವಸ್ಥೆಯಿದೆ. ಸವಣೂರು ಪುರಸಭೆ ವತಿಯಿಂದ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಿಂದ ಇತ್ತೀಚೆಗೆ ಕೃಷಿ ಉತ್ಪನ್ನಗಳ ಕಳ್ಳರು ಸಿಕ್ಕಿಬಿದ್ದಿದ್ದರು. ಆದರೆ, ಹಾವೇರಿಯಲ್ಲಿ ಇಂಥ ಒಂದೂ ಕ್ಯಾಮೆರಾಗಳಿಲ್ಲ. ಇದ್ದರೂ ಸಕ್ರಿಯವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ವಿನಾಯಕ ದೂರಿದರು.

‘ಕ್ಯಾಮೆರಾ ಇಲ್ಲದಿದ್ದರಿಂದ, ಜನರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಭಯ ಪಡುತ್ತಿದ್ದಾರೆ. ಏನಾದರೂ ನಡೆದರೆ, ಕ್ಯಾಮೆರಾ ಪುರಾವೆಯೂ ಇಲ್ಲವೆಂದು ಹೆದರುತ್ತಿದ್ದಾರೆ. ಜನರ ಸುರಕ್ಷತೆಗೆ ಗಮನ ಹರಿಸದ ನಗರಸಭೆ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ’ ಎಂದು ಆಕ್ರೋಶ ಹೊರಹಾಕಿದರು.

ಕೆಟ್ಟು ಹೋದ 24 ಕ್ಯಾಮೆರಾ: ಜಿಲ್ಲಾ ಕೇಂದ್ರದಲ್ಲಿ ನಗರಸಭೆ ವತಿಯಿಂದ ಕೆಲ ವರ್ಷಗಳ ಹಿಂದೆ 24 ಸಿ.ಸಿ.ಟಿ.ವಿ ಕ್ಯಾಮೆರಾ ಹಾಕಲಾಗಿತ್ತು. ಆದರೆ, ಈ ಕ್ಯಾಮೆರಾಗಳು ಕೆಟ್ಟು ವರ್ಷವೇ ಕಳೆದಿದೆ. ಇದುವರೆಗೂ ದುರಸ್ತಿ ಮಾಡಿಲ್ಲವೆಂದು ಜನರು ದೂರುತ್ತಿದ್ದಾರೆ.

‘ಹೊಸಮನಿ ಸಿದ್ದಪ್ಪ ವೃತ್ತ, ಗಾಂಧಿ ವೃತ್ತ, ಸುಭಾಷ್ ವೃತ್ತ, ಅಂಬೇಡ್ಕರ್ ವೃತ್ತ, ಗುತ್ತಲ ರಸ್ತೆ, ಕಾಗಿನೆಲೆ ವೃತ್ತ, ಜೆ.ಪಿ.ವೃತ್ತ, ಜೆ.ಎಚ್.ಪಟೇಲ್ ವೃತ್ತ ಸೇರಿ 24 ಸ್ಥಳಗಳಲ್ಲಿ ಕ್ಯಾಮೆರಾ ಹಾಕಲಾಗಿತ್ತು. ಆರಂಭದಲ್ಲಿ ಕೆಲ ದಿನ ಮಾತ್ರ ಕ್ಯಾಮೆರಾ ಸಕ್ರಿಯವಾಗಿದ್ದವು. ಕಂಪನಿಯೊಂದಕ್ಕೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿತ್ತು. ಆ ಕಂಪನಿಗೆ ನಗರಸಭೆಯವರು ಹಣ ನೀಡಲಿಲ್ಲ. ಹೀಗಾಗಿ, ಕ್ಯಾಮೆರಾ ನಿರ್ವಹಣೆಯನ್ನು ಕೈಬಿಟ್ಟಿದ್ದಾರೆ’ ಎಂದು ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ಕ್ಯಾಮೆರಾ ನಿರ್ವಹಣೆಗಾಗಿ ಹಣ ಮಂಜೂರು ಮಾಡುವಂತೆ ನಗರಸಭೆಗೆ ಕಡತ ಸಲ್ಲಿಸಲಾಗಿತ್ತು. ಆದರೆ, ಕಡತವೇ ಕಳೆದಿರುವುದಾಗಿ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಇದುವರೆಗೂ ಕಡತಕ್ಕೆ ಅನುಮತಿ ಸಿಕ್ಕಿಲ್ಲ. 24 ಕ್ಯಾಮೆರಾಗಳು ಸಹ ಆನ್ ಆಗಿಲ್ಲ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯಾಗಿ 28 ವರ್ಷವಾದರೂ ಹಾವೇರಿಯಲ್ಲಿ ಕ್ಯಾಮೆರಾ ಇಲ್ಲವೆಂದರೆ, ಆಡಳಿತ ವ್ಯವಸ್ಥೆಯೇ ತಲೆತಗ್ಗಿಸುವ ವಿಷಯ. ಸರ್ಕಾರದ ಪ್ರತಿನಿಧಿಗಳು ಎಚ್ಚೆತ್ತುಕೊಂಡು, ಈಗಲಾದರೂ ಕ್ಯಾಮೆರಾ ಅಳವಡಿಸಬೇಕು
ರಾಜಣ್ಣ ಎಚ್., ಹಾವೇರಿ ನಿವಾಸಿ

ಖಾಸಗಿ ಕ್ಯಾಮೆರಾ ಮೇಲೆ ಅವಲಂಬನೆ

ಜಿಲ್ಲೆಯಾದ್ಯಂತ ಸಾರ್ವಜನಿಕರ ಸುರಕ್ಷತಾ ಕಾಯ್ದೆಯನ್ನು ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ. ಖಾಸಗಿ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು, ತಮ್ಮ ವ್ಯಾಪ್ತಿಯಲ್ಲಿ 8,000 ಸಾವಿರಕ್ಕೂ ಹೆಚ್ಚು ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ. ಅಪರಾಧ ಪತ್ತೆಗಾಗಿ ಪೊಲೀಸರು, ಖಾಸಗಿ ಕ್ಯಾಮೆರಾಗಳನ್ನೇ ಅವಲಂಬಿಸಿದ್ದಾರೆ.

‘ಹಾವೇರಿಯ ಅಂಗಡಿ, ಬಂಕ್, ಹೋಟೆಲ್, ಶಾಲೆ–ಕಾಲೇಜು... ಹೀಗೆ ಖಾಸಗಿ ಸ್ಥಳಗಳಲ್ಲಿ ಕ್ಯಾಮೆರಾಗಳು ಸುಸಜ್ಜಿತ ಸ್ಥಿತಿಯಲ್ಲಿವೆ. ಆದರೆ, ನಗರಸಭೆಯ ಜಾಗದಲ್ಲಿ ಮಾತ್ರ ಯಾವುದೇ ಕ್ಯಾಮೆರಾಗಳಿಲ್ಲ. ಏನಾದರೂ ಅಪರಾಧ ಸಂಭವಿಸಿದರೆ, ಖಾಸಗಿ ವ್ಯಕ್ತಿಗಳ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರೊಬ್ಬರು ಹೇಳಿದರು. ‘ನಗರಸಭೆಯಿಂದ ಕ್ಯಾಮೆರಾ ಇದ್ದರೆ, ನಮ್ಮದೇ ನಿಯಂತ್ರಣ ಕೊಠಡಿ ಇರುತ್ತದೆ. ತತ್ಕ್ಷಣದಲ್ಲಿ ಕ್ಯಾಮೆರಾ ಪರಿಶೀಲನೆ ನಡೆಸಬಹುದು. ಏನಾದರೂ ಅಪರಾಧ ನಡೆಯುತ್ತಿದ್ದರೆ, ತಕ್ಷಣ ಸ್ಥಳಕ್ಕೆ ಹೋಗಬಹುದು’ ಎಂದು ತಿಳಿಸಿದರು.

ಶಾಸಕರ ₹1 ಕೋಟಿ ಎಲ್ಲಿದೆ?

ಹಾವೇರಿ ಜಿಲ್ಲೆಯ ನೂತನ ಎಸ್.ಪಿ. ಆಗಿ ಅಧಿಕಾರ ವಹಿಸಿಕೊಂಡಿರುವ ಯಶೋಧಾ ವಂಟಗೋಡಿ, ‘ಜಿಲ್ಲೆಯ ಪ್ರತಿಯೊಬ್ಬ ಶಾಸಕರಿಗೂ ರಾಜ್ಯ ಸರ್ಕಾರ, ತಲಾ ₹ 50 ಕೋಟಿ ಅನುದಾನ ನೀಡುತ್ತಿದೆ. ಅದರಲ್ಲಿ ₹ 1 ಕೋಟಿ ಅನುದಾನವನ್ನು ಜಿಲ್ಲೆಯ ಜನರ ಸುರಕ್ಷತಾ ಕ್ರಮಗಳಿಗೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಶಾಸಕರಿಗೆ ಹೇಳಿದ್ದಾರೆ’ ಎಂದು ತಿಳಿಸಿದ್ದರು. ಆದರೆ, ಇದುವರೆಗೂ ₹ 1 ಕೋಟಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

‘ನೂತನ ಎಸ್.ಪಿ. ಅವರು ಹಾವೇರಿ ನಗರದ ಸುರಕ್ಷತೆ ಬಗ್ಗೆ ಆಸಕ್ತಿ ವಹಿಸಬೇಕು. ಆದಷ್ಟು ಬೇಗ ಎಲ್ಲ ಕಡೆಯೂ ಕ್ಯಾಮೆರಾ ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಒತ್ತಡ ಹಾಕಬೇಕು’ ಎಂದು ಜನರು ಆಗ್ರಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.