ಹಾವೇರಿ: ಹೊಸ ತಂತ್ರಜ್ಞಾನ ಹಾಗೂ ಆನ್ಲೈನ್ ಬ್ಯಾಂಕಿಂಗ್ನಿಂದಾಗಿ ಹಣದ ವ್ಯವಹಾರ ಸಲೀಸಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು ಅಮಾಯಕರ ಬ್ಯಾಂಕ್ ಖಾತೆಗಳಿಂದ ಹಣ ದೋಚುತ್ತಿದ್ದಾರೆ. ಇಂಥ ಸೈಬರ್ ಅಪರಾಧ ಪ್ರಕರಣಗಳ ಪತ್ತೆಯಲ್ಲಿ ಪೊಲೀಸರು ಹಿಂದುಳಿದಿದ್ದು, ಹಣ ಕಳೆದುಕೊಂಡಿರುವ ದೂರುದಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 2023ರಿಂದ 2025ರ ಜುಲೈವರೆಗೆ ಸೈಬರ್ ಅಪರಾಧಕ್ಕೆ ಸಂಬಂಧಪಟ್ಟಂತೆ 301 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೇವಲ 38 ಪ್ರಕರಣಗಳನ್ನು ಮಾತ್ರ ಪೊಲೀಸರು ಪತ್ತೆ ಮಾಡಿದ್ದಾರೆ. ಇನ್ನುಳಿದ 263 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.

ಇಂದಿನ ದಿನಮಾನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಇದಕ್ಕೆ ಸರ್ಕಾರ ಕೈಗೊಂಡ ಕ್ರಮಗಳೇನು? ಎಂಬ ಬಗ್ಗೆ ಇತ್ತೀಚೆಗೆ ನಡೆದ ಅಧಿವೇಶದಲ್ಲೂ ಚರ್ಚೆಯಾಗಿದೆ. ಸರ್ಕಾರ ನೀಡಿರುವ ಉತ್ತರ, ದೂರುದಾರರ ಆತಂಕಕ್ಕೂ ಕಾರಣವಾಗಿದೆ. ಸೈಬರ್ ಅಪರಾಧ ಕೃತ್ಯ ಎಸಗಿರುವವರು ಯಾರು? ಕೃತ್ಯ ಎಸಗಿದ್ದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ದೂರು ನೀಡಿದ ಬಹುಪಾಲು ಜನರಿಗೆ ಹಣವೂ ವಾಪಸು ಬಂದಿಲ್ಲ.

ಒಟಿಪಿ (ಒನ್ ಟೈಂ ಪಾಸ್ವರ್ಡ್) ವಿನಿಮಯ, ಜಾಲತಾಣಗಳ ಲಿಂಕ್ ಕ್ಲಿಕ್, ವೈವಾಹಿಕ ಜಾಲತಾಣದ ಸೋಗು, ಉಡುಗೊರೆ ಆಮಿಷ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಸೈಬರ್ ವಂಚಕರು ಅಪರಾಧ ಎಸಗುತ್ತಿದ್ದಾರೆ. ಇಂಥ ಅಪರಾಧಗಳ ಮಾಹಿತಿ ದಾಖಲಿಸಿಕೊಂಡು ತನಿಖೆ ಮಾಡಲೆಂದು ಜಿಲ್ಲೆಯಲ್ಲಿ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕದ್ರವ್ಯ ನಿಯಂತ್ರಣ) ಠಾಣೆ ಕಾರ್ಯನಿರ್ವಹಿಸುತ್ತಿದೆ.

ಸೆನ್ ಠಾಣೆ ಜೊತೆಯಲ್ಲಿಯೇ ಜಿಲ್ಲೆಯ ಎಲ್ಲ ಠಾಣೆಗಳಲ್ಲಿಯೂ ಸೈಬರ್ ಅಪರಾಧದ ದೂರುಗಳನ್ನು ಸ್ವೀಕರಿಸಲು ಅವಕಾಶವಿದೆ. ಹಣ ಕಳೆದುಕೊಂಡ ಕೂಡಲೇ ಜನರು, ಠಾಣೆಗಳನ್ನು ಸಂಪರ್ಕಿಸಿ ದೂರು ನೀಡುತ್ತಿದ್ದಾರೆ. ಈ ನೊಂದ ಜನರಿಗೆ ನ್ಯಾಯ ಸಿಗುತ್ತಿಲ್ಲವೆಂದು ಸಾರ್ವಜನಿಕರು ದೂರುತ್ತಿದ್ದಾರೆ.

‘ದೂರು ನೀಡಲು ಹೋಗುವ ಜನರನ್ನೇ ಪೊಲೀಸರು ಅನುಮಾನದಿಂದ ನೋಡುತ್ತಿದ್ದಾರೆ. ನೀನು ಏಕೆ ಒಟಿಪಿ ವಿನಿಮಯ ಮಾಡಿಕೊಂಡೆ? ಆಮಿಷಕ್ಕೆ ಏಕೆ ಒಳಗಾದೇ? ಹೇಗೆ ನಂಬಿದೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ದೂರುದಾರರನ್ನೇ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಅವರಿಂದ ದೂರು ಪಡೆದ ಬಳಿಕ ಆರೋಪಿ ಯಾರು ಎಂಬುದನ್ನು ಕಂಡುಹಿಡಿಯಲು ಪೊಲೀಸರಿಂದ ಸಾಧ್ಯವಾಗುತ್ತಿಲ್ಲ’ ಎಂದು ದೂರುದಾರರೊಬ್ಬರು ಅಳಲು ತೋಡಿಕೊಂಡರು.

‘ಯೋಜನೆಯೊಂದರ ಬಗ್ಗೆ ವಾಟ್ಸ್ಆ್ಯಪ್ಗೆ ಬಂದಿದ್ದ ಲಿಂಕ್ ಒತ್ತಿದ್ದರಿಂದ, ಖಾತೆಯಿಂದ ಹಣ ಕಡಿತವಾಗಿತ್ತು. ಈ ಬಗ್ಗೆ ಠಾಣೆಗೆ ದೂರು ನೀಡಲು ಹೋದಾಗ, ಪೊಲೀಸರು ನನ್ನನ್ನೇ ವಿಚಾರಣೆ ಮಾಡಿದರು. ದೂರು ನೀಡಿ ಮೂರು ತಿಂಗಳಾದರೂ ಆರೋಪಿ ಪತ್ತೆಯಾಗಿಲ್ಲ. ಹಣವೂ ಬಂದಿಲ್ಲ. ಆರೋಪಿ ಯಾರು? ನನ್ನ ಹಣ ಎಲ್ಲಿದೆ? ಎಂಬಿತ್ಯಾದಿ ಮಾಹಿತಿಯನ್ನು ಪೊಲೀಸರು ನೀಡುತ್ತಿಲ್ಲ. ಪೊಲೀಸರು ಈ ರೀತಿ ಮಾಡಿದರೆ, ನಾವು ಯಾರಿಗೆ ದೂರು ನೀಡಬೇಕು’ ಎಂದು ಅವರು ಪ್ರಶ್ನಿಸಿದರು.

ಇನ್ನೊಬ್ಬ ದೂರುದಾರ, ‘ಜಾಲತಾಣವೊಂದರ ಮೂಲಕ ದುಪ್ಪಟ್ಟು ಹಣದ ಆಮಿಷವೊಡ್ಡಿದ್ದ ಅಪರಿಚಿತರು, ಹಣ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಮೊಬೈಲ್ ನಂಬರ್ ಹಾಗೂ ಜಾಲತಾಣದ ಮಾಹಿತಿ ಸಮೇತ ಎರಡು ತಿಂಗಳ ಹಿಂದೆಯೇ ದೂರು ನೀಡಿದ್ದೇನೆ. ಆದರೆ, ಆರೋಪಿಗಳು ಯಾರು? ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ದೂರು ದಾಖಲು ಪ್ರಮಾಣ ಹೆಚ್ಚಾಗಿದ್ದು, ಪತ್ತೆ ಪ್ರಮಾಣ ಮಾತ್ರ ಕಡಿಮೆ ಇರುವುದು ಬೇಸರ ತಂದಿದೆ’ ಎಂದು ಹೇಳಿದರು.

ಸಿಬ್ಬಂದಿ, ತಂತ್ರಜ್ಞಾನ ಕೊರತೆ; ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಸೈಬರ್ ವಂಚನೆ ಪ್ರಕರಣಗಳ ಮಾದರಿಯೂ ಬದಲಾಗುತ್ತಿದೆ. ಇದಕ್ಕೆ ತಕ್ಕಂತೆ ಪೊಲೀಸ್ ತನಿಖಾ ವ್ಯವಸ್ಥೆಯೂ ಬದಲಾಗಬೇಕು. ಆದರೆ, ಸೆನ್ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಆಧುನಿಕ ತಂತ್ರಜ್ಞಾನದ ಲಭ್ಯತೆ ಇಲ್ಲ. ಇದರಿಂದ ಪ್ರಕರಣಗಳ ಪತ್ತೆ ವಿಳಂಬವಾಗುತ್ತಿದೆ.

‘ಒಟಿಪಿಯಿಂದ ಶುರುವಾಗಿದ್ದ ಸೈಬರ್ ಅಪರಾಧಗಳು, ಇಂದು ಡಿಜಿಟಲ್ ಅರೆಸ್ಟ್ಗೆ ಬಂದು ನಿಂತಿದೆ. ದಿನವೂ ಹೊಸ ಹೊಸ ಸೈಬರ್ ಅಪರಾಧಗಳು ನಡೆಯುತ್ತಿವೆ. ಅಪರಾಧಗಳಿಗೆ ತಕ್ಕಂತೆ ಸೌಲಭ್ಯ ಸಿಗಬೇಕು. ಆದರೆ, ಸಕಲ ಸೌಲಭ್ಯವಿಲ್ಲ. ಹೀಗಾಗಿ, ಆರೋಪಿಗಳ ಪತ್ತೆ ಮಾಡುವುದು ಸವಾಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಮೊಬೈಲ್ ಸಂಖ್ಯೆ ಹಾಗೂ ಇತರೆ ಪುರಾವೆ ಆಧರಿಸಿ ಕೆಲ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಹೊರ ರಾಜ್ಯ ಹಾಗೂ ಹೊರ ದೇಶದಲ್ಲಿರುವ ಆರೋಪಿಗಳನ್ನು ಬಂಧಿಸುವುದು ಕಷ್ಟ. ಒಬ್ಬ ಆರೋಪಿಯನ್ನು ಬಂಧಿಸಲು ಪೊಲೀಸ್ ತಂಡ ಕಳುಹಿಸಬೇಕು. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಸರ್ಕಾರದಿಂದ ಯಾವುದೇ ಅನುದಾನ ಬರುವುದಿಲ್ಲ. ಇಂಥ ಸಂದರ್ಭದಲ್ಲಿ ಹೊರ ರಾಜ್ಯ – ಹೊರ ದೇಶಕ್ಕೆ ಹೋಗಿ ಆರೋಪಿಗಳನ್ನು ಬಂಧಿಸಿ ತರುವುದು ಹೇಗೆ? ಖರ್ಚು ಮಾಡಿಕೊಂಡು ಹೋದರೂ ಪೊಲೀಸರ ಮೇಲೆ ಸ್ಥಳೀಯರು ಹಲ್ಲೆ ಮಾಡಿದ ಘಟನೆಗಳು ನಡೆದಿವೆ’ ಎಂದು ಅವರು ವಿವರಿಸಿದರು.

‘ದೂರು ದಾಖಲೆಗಷ್ಟೇ ಸೀಮಿತ’

ಜಿಲ್ಲೆಯ ಸೆನ್ ಹಾಗೂ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿರುವ ಕೆಲ ಪ್ರಕರಣಗಳನ್ನು ಮಾತ್ರ ಪೊಲೀಸರು ಪತ್ತೆ ಮಾಡುತ್ತಿದ್ದಾರೆ. ಆದರೆ ಬಹುತೇಕ ಪ್ರಕರಣಗಳು ದೂರು ದಾಖಲೆಗಷ್ಟೇ ಸೀಮಿತವಾಗುತ್ತಿರುವುದು ದೂರುದಾರರ ಅಸಮಾಧಾನಕ್ಕೆ ಕಾರಣವಾಗಿದೆ.

‘ಪ್ರಕರಣದಲ್ಲಿ ಆರೋಪಿಗಳು ನೇರವಾಗಿ ಸಂಪರ್ಕದಲ್ಲಿದ್ದರೆ ಅಥವಾ ಸ್ಥಳೀಯರಾಗಿದ್ದರೆ ಮಾತ್ರ ಪೊಲೀಸರು ಬಂಧಿಸಿ ಕರೆತರುತ್ತಾರೆ. ಅಪರಿಚಿತ ಆರೋಪಿಗಳ ಬಗ್ಗೆ ತನಿಖೆ ನಡೆಸಿದರೂ ಸುಳಿವು ಸಿಗದಿದ್ದಾಗ ಮೌನವಾಗುತ್ತಾರೆ. ಇದರಿಂದಾಗಿಯೇ ಪ್ರಕರಣಗಳ ಪತ್ತೆ ಆಗುತ್ತಿಲ್ಲ. ಕೆಲ ಪ್ರಕರಣಗಳಲ್ಲಿ ಪೊಲೀಸರೂ ನಿರಾಸಕ್ತಿ ತೋರುತ್ತಾರೆ’ ಎಂದು ದೂರುದಾರರೊಬ್ಬರು ಆರೋಪಿಸಿದರು.

‘1930; ಗೋಲ್ಡನ್ ಅವರ್’

‘ಜನರು ಯಾವುದಾದರೂ ಸೈಬರ್ ಅಪರಾಧಕ್ಕೆ ಒಳಗಾದರೆ ಹಣ ಕಳೆದುಕೊಂಡರೆ ಕೂಡಲೇ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬೇಕು. ಅಪರಾಧ ನಡೆದು ಒಂದು ಗಂಟೆಯೊಳಗೆ ದೂರು ನೀಡಿದರೆ ಗೋಲ್ಡನ್ ಅವರ್ ವ್ಯವಸ್ಥೆಯಡಿ ಹಣ ವಾಪಸು ಪಡೆಯಲು ಅವಕಾಶವಿರುತ್ತದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.