ಸೋಮವಾರ, ಮಾರ್ಚ್ 20, 2023
30 °C

ವಸತಿ ಶಾಲೆಗೆ ತಮ್ಮ ಜಮೀನಲ್ಲಿ ಭೂಮಿ ಪೂಜೆ: ವಿಷ ಸೇವಿಸಿದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಗುತ್ತಲ (ಹಾವೇರಿ): ಇಲ್ಲಿಗೆ ಸಮಿಪದ ಅಕ್ಕೂರ ಗ್ರಾಮದಲ್ಲಿ ಬಗರ್‌ಹುಕುಂ ಜಮೀನು ಸಾಗುವಳಿ ವಿವಾದದ ಹಿನ್ನೆಲೆಯಲ್ಲಿ ಮುತ್ತಪ್ಪ ಹರಿಜನ ಎಂಬ ರೈತ ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮುತ್ತಪ್ಪ ಅವರನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

‘20 ವರ್ಷಗಳಿಂದ ಬಗರ್‌ಹುಕುಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದೇವೆ. ನಮ್ಮ ಜಮೀನಿನಲ್ಲಿ ಸೋಮವಾರ ವಸತಿಶಾಲೆಗೆ ಭೂಮಿಪೂಜೆ ನೆರವೇರಿಸಲಾಗಿದೆ. ಇದರಿಂದ ಮನನೊಂದು ನನ್ನ ಪತಿ ವಿಷ ಸೇವಿಸಿದ್ದಾರೆ. ಇದಕ್ಕೆ ಹಾವೇರಿ ಶಾಸಕ ನೆಹರು ಓಲೇಕಾರ ಕಾರಣ’ ಎಂದು ಮುತ್ತಪ್ಪ ಹರಿಜನ ಅವರ ಪತ್ನಿ ಕಸ್ತೂರವ್ವ ಆರೋಪ ಮಾಡಿದರು.

‘ಕಸ್ತೂರವ್ವ ಆರೋಪ ಸುಳ್ಳು. ಬಡಮಕ್ಕಳ ಭವಿಷ್ಯದ ದೃಷ್ಟಿಯಿಂದ ಗೋಮಾಳ ಜಾಗದಲ್ಲಿ ವಸತಿ ಶಾಲೆಗೆ ಭೂಮಿಪೂಜೆ ನೆರವೇರಿಸಲಾಗಿದೆ. ಗಂಡ–ಹೆಂಡಿರ ಜಗಳದಿಂದ ಮುತ್ತಪ್ಪ ವಿಷ ಸೇವಿಸಿರಬಹುದು. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ನೆಹರು ಓಲೇಕಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಅಕ್ಕೂರ ಗ್ರಾಮದ ಗೋಮಾಳದ ಸಾಗುವಳಿ ಜಮೀನಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ರೈತರು ಈಚೆಗೆ ಪ್ರತಿಭಟನೆ ನಡೆಸಿದ್ದರು. ಜಮೀನಿನ ಪಟ್ಟಾ ನೀಡದಿದ್ದರೆ ನಮಗೆ ರಾಷ್ಟ್ರಪತಿಗಳು ‘ಸಾಮೂಹಿಕ ದಯಾಮರಣ’ ನೀಡಬೇಕು ಎಂದು 20ಕ್ಕೂ ಹೆಚ್ಚು ರೈತರು ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದ್ದರು. ರೈತರ ವಿರೋಧದ ನಡುವೆಯೂ ಜುಲೈ 5ರಂದು ಅಲ್ಪಸಂಖ್ಯಾತರ ಮಾದರಿ ನವೋದಯ ವಸತಿ ಶಾಲೆಯ ಭೂಮಿಪೂಜೆ ನಡೆಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು