ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ₹250 ಕೋಟಿ ಬಾಕಿ ಬಿಡುಗಡೆಗೆ ಆಗ್ರಹ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹುತಾತ್ಮ ದಿನಾಚರಣೆ
Last Updated 10 ಜೂನ್ 2020, 13:06 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ತುಂಗಾ ಮೇಲ್ದಂಡೆ ಕಾಲುವೆಗೆ ರೈತರು ಜಮೀನು ಕಳೆದುಕೊಂಡು 18 ವರ್ಷ ಕಳೆದರೂ ಸಾವಿರಾರು ರೈತರಿಗೆ ಭೂ ಪರಿಹಾರ ಕೊಟ್ಟಿಲ್ಲ. ಕೃಷಿ ಸಚಿವರು ಕೊಟ್ಟ ಭರವಸೆಯೂ ಹುಸಿಯಾಗಿದೆ. ಹಾಗಾಗಿ ₹250 ಕೋಟಿ ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಿ ರೈತರನ್ನು ರಕ್ಷಿಸಬೇಕೆಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮಣ್ಣ ವಿ.ಕೆಂಚಳ್ಳೇರ ಆಗ್ರಹಿಸಿದರು.

2008ರಲ್ಲಿ ಗೋಲಿಬಾರ್‌ ಘಟನೆಯಲ್ಲಿ ಮೃತಪಟ್ಟ ರೈತರ ಸ್ಮರಣಾರ್ಥ ನಗರದ ಸಿದ್ದಪ್ಪ ವೃತ್ತದಲ್ಲಿ ಬುಧವಾರ ಏರ್ಪಡಿಸಿದ್ದ ಹುತಾತ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಹಣ ಸಮರ್ಪಕವಾಗಿ ವಿತರಣೆಯಾಗಿಲ್ಲ. ಶೇ 30ರಷ್ಟು ರೈತರು ಅವಕಾಶ ವಂಚಿತರಾಗಿದ್ದು, ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ ತಕ್ಷಣ ಎಲ್ಲ ರೈತರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ರೈತರಿಗೆ ಇ.ಸಿ. ಕೊಡಿ:

ಬೀಜ, ಗೊಬ್ಬರ ಖರೀದಿಗೆ ಬ್ಯಾಂಕಿನಲ್ಲಿ ಸಾಲ ಪಡೆಯಲು ತೊಂದರೆಯಾಗಿರುವುದರಿಂದ ತಕ್ಷಣ ರೈತರಿಗೆ ಇ.ಸಿ. ಕೊಡಬೇಕು. ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಾದ ಹತ್ತಿ, ಭತ್ತ, ಮೆಕ್ಕೆಜೋಳಕ್ಕೆ ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಿ ಸರ್ಕಾರವೇ ಖರೀದಿ ಕೇಂದ್ರ ತೆರೆಯಬೇಕು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಾವು ಅಧಿಕಾರಕ್ಕೆ ಬಂದರೆ ಎಲ್ಲ ರೈತರ ಕೃಷಿ ಸಾಲ ₹1 ಲಕ್ಷದವರೆಗೆ ಮನ್ನಾ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಅನುಷ್ಠಾನಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳೆ ವಿಮೆಯಲ್ಲಿ ತಾರತಮ್ಯ:

ಬೆಳೆ ವಿಮೆಯಲ್ಲಿ ಸಾಕಷ್ಟು ತಾರತಮ್ಯ ನಡೆದಿದೆ. ಸುಮಾರು 18 ಕೋಟಿ ರೈತರಿಗೆ ಕೊಡುವ ಹಣ ಬ್ಯಾಂಕಿನಲ್ಲಿ ಕೊಳೆಯುತ್ತಿದ್ದು, ರೈತರ ಖಾತೆಗೆ ಜಮಾ ಮಾಡಬೇಕು. 2019–20ರಲ್ಲಿ ಮಂಜೂರಾದ ₹49 ಕೋಟಿ ಬಿಡುಗಡೆಯಾಗಿದ್ದು, ತಕ್ಷಣ ರೈತರ ಖಾತೆಗೆ ಹಾಕಬೇಕು ಎಂದು ಆಗ್ರಹಿಸಿದರು.

ಕೃಷಿ ಇಲಾಖೆಯಲ್ಲಿ ಕೃಷಿ ಪರಿಕರಗಳಾದ ಕೂರಿಗೆ ನೇಗಿಲು, ಕಂಟಿಮೀಟರ್‌ಗಳಿಗೆ ಸಹಾಯಧನ ನಿಲ್ಲಿಸಿದ್ದು, ರೈತರಿಗೆ ಅನಾನುಕೂಲವಾಗಿದೆ. ಕ್ರಿಮಿನಾಶಕ, ಜಿಂಕ್‌, ಬೋರಾನ್‌ ಜಿಮ್ಸ್‌ ಸಿಗುತ್ತಿಲ್ಲ. ಎಲ್ಲ ಕೃಷಿ ಕೇಂದ್ರಗಳಿಗೆ ಕೃಷಿ ಪರಿಕರಗಳಿಗೆ ಸಹಾಯಧನ ಒದಗಿಸಬೇಕು ಎಂದು ಜಿಲ್ಲಾ ರೈತರ ಸಂಘದ ಸದಸ್ಯರು ಒತ್ತಾಯಿಸಿದರು.

ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಎಸ್‌.ಅಕ್ಕಿ, ಮುಖಂಡರಾದ ರುದ್ರಗೌಡ ಕಾಡನಗೌಡ್ರ, ಕರಬಸಪ್ಪ ಅಗಸಿಬಾಗಿಲು, ಮರಿಗೌಡ ಪಾಟೀಲ, ಶಂಕ್ರಪ್ಪ ಶಿರಗಂಬಿ, ದಿಳ್ಳೇಪ್ಪ ಮಣ್ಣೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT