ಹಾವೇರಿ: ಗಣೇಶ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಶುಕ್ರವಾರ ಜನಜಂಗುಳಿ ಕಂಡುಬಂತು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯವಿರುವ ವಸ್ತುಗಳು ಹಾಗೂ ನೈವೇದ್ಯಕ್ಕೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದರು. ಮಾರುಕಟ್ಟೆಗಳಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸಿದ್ದರಿಂದ, ಸಂಚಾರ ದಟ್ಟಣೆ ಸಹ ಉಂಟಾಯಿತು.
ಗೌರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಶುಕ್ರವಾರ ಆಚರಿಸಿದ ಜನರು, ಗಣೇಶ ಹಬ್ಬಕ್ಕೆ ತಯಾರಿ ಶುರು ಮಾಡಿದರು. ಶನಿವಾರ ನಸುಕಿನಿಂದ ಮೂರ್ತಿ ಪ್ರತಿಷ್ಠಾಪನೆ ಆರಂಭವಾಗಲಿದೆ. ಜನರು ಈಗಾಗಲೇ ಮೂರ್ತಿಗಳನ್ನು ಕಾಯ್ದಿರಿಸಿದ್ದು, ಅವುಗಳನ್ನು ಶನಿವಾರ ತಮ್ಮ ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಿಗೆ ಕೊಂಡೊಯ್ದು ಪ್ರತಿಷ್ಠಾಪಿಸಲಿದ್ದಾರೆ.
ಶುಕ್ರವಾರ ಬೆಳಿಗ್ಗೆಯಿಂದ ಜನರು ಮಾರುಕಟ್ಟೆಯತ್ತ ಲಗ್ಗೆ ಹಾಕಿದರು. ಬಾಳೆ ದಿಂಡು, ಮಾವಿನ ತೋರಣ, ಕಬ್ಬು, ಹೂವು ಹಾಗೂ ಹಣ್ಣುಗಳನ್ನು ಖರೀದಿಸಿದರು.
ನಗರದ ಎಂ.ಜಿ. ರಸ್ತೆ, ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ವ್ಯಾಪಾರಿಗಳು, ರಸ್ತೆ ಬದಿಯಲ್ಲಿ ತಾತ್ಕಾಲಿಕ ಮಳಿಗೆಗಳನ್ನು ತೆರೆದು ವ್ಯಾಪಾರ ಮಾಡಿದರು. ಹಳ್ಳಿಗಳಿಂದ ಬಂದಿದ್ದ ಜನರು, ಬಾಳೆ ದಿಂಡು, ಮಾವಿನ ತೋರಣಗಳನ್ನು ಮಾರಾಟಕ್ಕೆ ಇರಿಸಿದ್ದರು.
ಹಬ್ಬದ ನಿಮಿತ್ತ ಪ್ರತಿಯೊಂದು ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಿದ್ಧರಾಗಿರುವ ಜನರು, ಅನಿವಾರ್ಯವಾಗಿ ವ್ಯಾಪಾರಿಗಳು ಕೇಳಿದಷ್ಟು ಹಣ ಕೊಟ್ಟು ವಸ್ತುಗಳನ್ನು ಖರೀದಿಸಿದರು.
ಬಾಳೆ ದಿಂಡು, ಕಬ್ಬು ಹಾಗೂ ಇತರೆ ವಸ್ತುಗಳನ್ನು ಕೆಲವರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಕೊಂಡೊಯ್ದರು. ಇನ್ನು ಹಲವರು, ಕಾರುಗಳಲ್ಲಿ ವಸ್ತುಗಳನ್ನು ಸಾಗಿಸಿದರು.
ನಗರ ಹಾಗೂ ಜಿಲ್ಲೆಯ ಹಲವೆಡೆ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲು ಸಿದ್ಧವಾಗಿರುವ ಆಯೋಜಕರು, ತರಹೇವಾರಿ ಮಂಟಪ ಹಾಗೂ ಪೆಂಡಾಲ್‌ಗಳನ್ನು ನಿರ್ಮಿಸಿದರು. ಹಲವು ವಿಷಯಗಳನ್ನು ಇಟ್ಟುಕೊಂಡು ಈ ಬಾರಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಶನಿವಾರದಿಂದ ಮೂರ್ತಿಗಳ ವೀಕ್ಷಣೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ, ಆಯೋಜಕರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.
ತಳ್ಳುಗಾಡಿಯಲ್ಲಿ ಪಟಾಕಿ ಮಾರಾಟ: ನಗರದ ಮುನ್ಸಿಪಲ್ ಮೈದಾನದಲ್ಲಿ ಮಾತ್ರ ಪಟಾಕಿಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರ ನಡುವೆಯೇ ಎಂ.ಜಿ. ರಸ್ತೆ ಹಾಗೂ ಸುತ್ತಮುತ್ತಲಿನ ಮಾರುಕಟ್ಟೆ ಸ್ಥಳಗಳಲ್ಲಿ ಕೆಲವರು ತಳ್ಳುಗಾಡಿಯಲ್ಲಿ ಪಟಾಕಿ ಮಾರಿದರು. ಅವರ ಬಳಿಯೇ ಗ್ರಾಹಕರು ಮುಗಿಬಿದ್ದು ಪಟಾಕಿ ಖರೀದಿಸಿದರು.
‘ತಳ್ಳುಗಾಡಿಯಲ್ಲಿ ಪಟಾಕಿ ಮಾರಾಟ ಅಪಾಯಕಾರಿ. ಏನಾದರೂ ಅನಾಹುತವಾದರೆ, ಯಾರು ಹೊಣೆ. ಮೈದಾನ ಬಿಟ್ಟು ಬೇರೆ ಕಡೆಗಳಲ್ಲಿ ಪಟಾಕಿ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜನರು ಆಗ್ರಹಿಸಿದರು.
2075 ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ
ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಪೊಲೀಸ್ ಇಲಾಖೆ ಅನುಮತಿ ಕಡ್ಡಾಯಗೊಳಿಸಲಾಗಿದೆ. ಜಿಲ್ಲೆಯ 2075 ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಪೊಲೀಸ್ ಇಲಾಖೆ ಈಗಾಗಲೇ ಅನುಮತಿ ನೀಡಿದೆ. ‘ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೋರಿ ಆಯೋಜಕರು ಮನವಿ ಸಲ್ಲಿಸುತ್ತಿದ್ದಾರೆ. ಶುಕ್ರವಾರ ರಾತ್ರಿಯವರೆಗೂ 2027 ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಚಾಲ್ತಿಯಲ್ಲಿರುವ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮೂರ್ತಿ ವಿಸರ್ಜನೆಗೆ ಸಂಚಾರಿ ವಾಹನ
ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿ ವಿಸರ್ಜನೆಗೆ ಅನುಕೂಲವಾಗಲೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ‘ಗಣೇಶ ಮೂರ್ತಿ ವಿಸರ್ಜನಾ ಸಂಚಾರಿ ವಾಹನ’ ವ್ಯವಸ್ಥೆ ಮಾಡಲಾಗಿದೆ. ‘ಸಾರ್ವಜನಿಕರ ಹಿತದೃಷ್ಟಿ ಹಾಗೂ ಪರಿಸರ ರಕ್ಷಣೆಗಾಗಿ ಸಂಚಾರಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಈ ವಾಹನ ನಗರದ ಆಯ್ದ ಪ್ರದೇಶಗಳಲ್ಲಿ ಇರಲಿದೆ’ ಎಂದು ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ ತಿಳಿಸಿದ್ದಾರೆ. ‘ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ಕೊಳ ಕೆರೆ ಬಾವಿ ಮತ್ತು ಜಲ ಮೂಲಗಳಲ್ಲಿ ವಿಸರ್ಜಿಸಿದರೆ ಪರಿಸರಕ್ಕೆ ಧಕ್ಕೆ ಆಗಲಿದೆ. ಇದೇ ಕಾರಣಕ್ಕಾಗಿ ಸಂಚಾರಿ ವಾಹನ ರೂಪಿಸಲಾಗಿದೆ. ಜನರು ಈ ಸಂಚಾರಿ ವಾಹನದ ಉಪಯೋಗ ಪಡೆದುಕೊಳ್ಳಬೇಕು’ ಎಂದು ಕೋರಿದ್ದಾರೆ. ಸಂಚಾರಿ ವಾಹನ ಮಾರ್ಗದ ವಿವರ: ಪಿ.ಡಬ್ಲ್ಯು.ಡಿ. ಕ್ವಾರ್ಟರ್ಸ್ (ಎಂ.ಜಿ. ಬ್ಯಾಂಕ್ ಹತ್ತಿರ) ಸೆಪ್ಟೆಂಬರ್ 11ರಂದು ಸಂಜೆ 6 ಗಂಟೆಯಿಂದ 8.30ರವರೆಗೆ. ಪುರದ ಓಣಿ ಮತ್ತು ಏಲಕ್ಕಿ ಓಣಿ (ಜೈನ ದೇವಸ್ಥಾನದ ಹತ್ತಿರ) ರಾತ್ರಿ 8.46 ಗಂಟೆಯಿಂದ 10 ಗಂಟೆಯವರೆಗೆ ವಾಹನ ನಿಲುಗಡೆ ಇರಲಿದೆ.
ಮೀನು –ಮಾಂಸ ಮಾರಾಟ ನಿಷೇಧ
‘ಗಣೇಶ ಹಬ್ಬದ ನಿಮಿತ್ತ ಸೆ. 7ರಂದು ಹಾವೇರಿ ನಗರಸಭೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮೀನು–ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ಹಾವೇರಿ ನಗರಸಭೆ ಪೌರಾಯುಕ್ತ ಅಶೋಕ ಚಲವಾದಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ‘ಮೀನು ಹಾಗೂ ಮಾಂಸ ಮಾರಾಟ ಅಂಗಡಿಗಳನ್ನು ಬಂದ್ ಮಾಡಬೇಕು. ಯಾರಾದರೂ ನಿಯಮ ಉಲ್ಲಂಘಿಸಿದರೆ ಅವರ ಮಳಿಗೆ ಪರವಾನಗಿ ರದ್ದುಪಡಿಸಲಾಗುವುದು. ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
ವಿವಿಧೆಡೆ ಮದ್ಯ ಮಾರಾಟ ನಿಷೇಧ
ಹಾವೇರಿ: ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಸೆಪ್ಟೆಂಬರ್ 9 ರಿಂದ ಅಕ್ಟೋಬರ್ 2ರವರೆಗೆ ವಿವಿಧೆಡೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಎಲ್ಲೆಲ್ಲಿ ಮದ್ಯ ಮಾರಾಟ ನಿಷೇಧ: ಸೆ. 9ರ ಬೆಳಿಗ್ಗೆ 6 ಗಂಟೆಯಿಂದ ಸೆ. 10 ಬೆಳಿಗ್ಗೆ 6ರವರೆಗೆ ಹಾವೇರಿ ರಾಣೆಬೆನ್ನೂರು ನಗರ ಗುತ್ತಲ ಹಾವನೂರ ನೆಗಳೂರು ಯಲಗಚ್ಚ ಹೊಸರಿತ್ತಿ ದೇವಿಹೊಸೂರು ಹಲಗೇರಿ ಕುಮಾರಪಟ್ಟಣ. ವಡೇರಾಯನಹಳ್ಳಿ (ಮಾಕನೂರ ಕ್ರಾಸ್) ಗ್ರಾಮ. ಸೆ. 11ರ ಬೆಳಿಗ್ಗೆ 6ರಿಂದ ಸೆ. 12ರ ಬೆಳಿಗ್ಗೆ 6ರವರೆಗೆ ಹಾವೇರಿ ರಾಣೆಬೆನ್ನೂರು ಗುತ್ತಲ ಹಾವನೂರ ನೆಗಳೂರು ಯಲಗಚ್ಚ ಹೊಸರಿತ್ತಿ ಬ್ಯಾಡಗಿ ಮೋಟೆಬೆನ್ನೂರು ಕಾಗಿನೆಲೆ ಹಿರೇಹಳ್ಳಿ ದೇವಿಹೊಸೂರು ಕರ್ಜಗಿ ನೆಲೋಗಲ್ ದೇವಗಿರಿ ಮೆಡ್ಲೇರಿ ಹಿರೇಬಿದರಿ ಗುಡಿಹೊನ್ನತ್ತಿ ಕಾಕೋಳ ಹಲಗೇರಿ ತುಮ್ಮಿನಕಟ್ಟಿ ಕುಪ್ಪೇಲೂರ ಕುಮಾರಪಟ್ಟಣ ವಡೇರಾಯನಹಳ್ಳಿ (ಮಾಕನೂರ ಕ್ರಾಸ್) ಹಂಸಭಾವಿ ಕೋಡ ಬಂಕಾಪುರ ಸವಣೂರ ಆಡೂರ ತಿಳವಳ್ಳಿ ಹೇರೂರ ಕಲಕೇರಿ ಕುಸನೂರ ತಿಳವಳ್ಳಿ ಶಿಗ್ಗಾವಿ ಹಾನಗಲ್ ಕಲ್ಲಾಪೂರ ಗ್ರಾಮ. ಸೆ. 12ರ ಬೆಳಿಗ್ಗೆ 6ರಿಂದ ಸೆ. 13ರ ಬೆಳಿಗ್ಗೆ 6ರವರೆಗೆ ಹಿರೇಕೆರೂರು ರಟ್ಟಿಹಳ್ಳಿ. ಸೆ. 13ರ ಬೆಳಿಗ್ಗೆ 6ರಿಂದ ಸೆ. 14ರ ಬೆಳಿಗ್ಗೆ 6ರವರೆಗೆ ಹಾವೇರಿ ಮೋಟೆಬೆನ್ನೂರ ರಾಣೆಬೆನ್ನೂರ ಹಾನಗಲ್ ಅಕ್ಕಿಆಲೂರ ಬೊಮ್ಮನಹಳ್ಳಿ ಚಿಕ್ಕಾಂಶಿ ಹೊಸೂರು ಕಲ್ಲಾಪೂರ ಸಮ್ಮಸಗಿ. ಸೆ. 15ರ ಬೆಳಿಗ್ಗೆ 6ರಿಂದ ಸೆ. 16ರ ಬೆಳಿಗ್ಗೆ 6ರವರೆಗೆ ಹಾವೇರಿ ದೇವಗಿರಿ ಮೆಡ್ಲೇರಿ ಹಿರೇಬಿದರಿ ಗುಡಿಹೊನ್ನತ್ತಿ ಕಾಕೋಳ ಹಲಗೇರಿ ತುಮ್ಮಿನಕಟ್ಟಿ ತಿಮ್ಮೇನಹಳ್ಳಿ ಕುಪ್ಪೇಲೂರ ಹಿರೇಕೆರೂರು ಮಾಸೂರ ಹಂಸಭಾವಿ ಚಿಕ್ಕೇರೂರು ಬಂಕಾಪುರ ಸವಣೂರ ಹೇರೂರ ಕಲಕೇರಿ ಕೂಸನೂರ ಹಾನಗಲ್ ಶಹರ ಅಕ್ಕಿಆಲೂರ ಬೆಳಗಾಲಪೇಟೆ. ಸೆ. 17ರ ಬೆಳಿಗ್ಗೆ 6 ಗಂಟೆಯಿಂದ ಸೆ. 14ರ ಬೆಳಿಗ್ಗೆ 6ರವರೆಗೆ ಹಾವೇರಿ ಹಲಗೇರಿ ಶಿಗ್ಗಾವಿ ಹುಲಗೂರು ಬಸವನಾಳ ಹಿರೇಬೆಂಡಿಗೇರಿ ಆಡೂರ ಹಾನಗಲ್ ಅಕ್ಕಿಆಲೂರ ಬೆಳಗಾಲಪೇಟೆ ಬೊಮ್ಮನಹಳ್ಳಿ ಚಿಕ್ಕಾಂಶಿ ಹೊಸೂರು ಸುಮ್ಮಸಗಿ ಕಲ್ಲಾಪೂರ. ಸೆ. 19ರ ಬೆಳಿಗ್ಗೆ 6 ಗಂಟೆಯಿಂದ ಸೆ. 20ರ ಬೆಳಿಗ್ಗೆ 6 ಗಂಟೆಯವರೆಗೆ ಹಾವೇರಿ ಹಲಗೇರಿ ತಿಮ್ಮೇನಹಳ್ಳಿ ತುಮ್ಮಿನಕಟ್ಟಿ ರಟ್ಟಿಹಳ್ಳಿ. ಸೆ. 21ರ ಬೆಳಿಗ್ಗೆ 6ರಿಂದ ಸೆ. 22ರ ಬೆಳಿಗ್ಗೆ 6ರವರೆಗೆ ಹಾವೇರಿ ತಿಳವಳ್ಳಿ ಹಾನಗಲ್ ಅಕ್ಕಿಆಲೂರ ಬೊಮ್ಮನಹಳ್ಳಿ ಚಿಕ್ಕಾಂಶಿ ಹೊಸೂರು ಕಲ್ಲಾಪೂರ. ಸೆ. 22ರ ಬೆಳಿಗ್ಗೆ 6ರಿಂದ ಸೆ. 23ರ ಬೆಳಿಗ್ಗೆ 6ರವರೆಗೆ ದೇವಿಹೊಸೂರು. ಸೆ. 23ರ ಬೆಳಿಗ್ಗೆ 6ರಿಂದ ಸೆ. 24ರ ಬೆಳಿಗ್ಗೆ 6ರವರೆಗೆ ಶಿಗ್ಗಾವಿ ತಾಲ್ಲೂಕಿನ ತಡಸ. ಸೆ. 25ರಿಂದ ಸೆ. 26ರವರೆಗೆ ರಾಣೆಬೆನ್ನೂರ ತಡಸ. ಸೆ. 27ರಿಂದ ಸೆ. 28ರವರೆಗೆ ಬ್ಯಾಡಗಿ ರಾಣೆಬೆನ್ನೂರ ಬಂಕಾಪುರ ಹಾನಗಲ್ ಅಕ್ಕಿಆಲೂರ ಬೆಳಗಾಲಪೇಟ ಚಿಕ್ಕಾಂಶಿ ಹೊಸೂರ. ಸೆ. 29ರಿಂದ ಸೆ. 30ರವರೆಗೆ ಹಾವೇರಿ ಬ್ಯಾಡಗಿ ತಿಳವಳ್ಳಿ. ಅಕ್ಟೋಬರ್ 1ರಿಂದ ಅ. 2ರವರೆಗೆ ಹಾನಗಲ್ ಅಕ್ಕಿಆಲೂರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.