ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಮೇಳ: 383 ಅಭ್ಯರ್ಥಿಗಳು ಆಯ್ಕೆ

Last Updated 23 ಫೆಬ್ರುವರಿ 2020, 15:51 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಯೋಗದಲ್ಲಿ ನಗರದ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ 383 ಅಭ್ಯರ್ಥಿಗಳ ಕೈಗೆ ವಿವಿಧ ಕಂಪನಿಗಳು ಉದ್ಯೋಗದಆಹ್ವಾನ ನೀಡಿವೆ.

ಎಸ್ಸೆಸ್ಸೆಲ್ಸಿ, ಪಿಯುಸಿ, ಬಿಬಿಎ, ಬಿಬಿಎಂ, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್‌, ಬಿಎ, ಬಿಕಾಂ, ಬಿಟೆಕ್, ಬಿಸಿಎ, ಎಂಬಿಎ ಇತ್ಯಾದಿ ಶಿಕ್ಷಣ ಪಡೆದ 7,939 ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 3,048 ಅಭ್ಯರ್ಥಿಗಳು ಸಂದರ್ಶನ ನೀಡಿದ್ದಾರೆ. 1,486 ಅಭ್ಯರ್ಥಿಗಳಿಗೆ ಎರಡನೇ ಹಂತದ ಆಯ್ಕೆ ಮಾಡಿಕೊಂಡಿದ್ದಾರೆ.

ಉದ್ಯೋಗಮೇಳದಲ್ಲಿ ಹೊಸ ಭರವಸೆಯನ್ನು ಹುಡುಕಿಕೊಂಡು ಬಂದ ಅಭ್ಯರ್ಥಿಗಳಲ್ಲಿ ಮೊದಲ ದಿನ ಉತ್ಸಾಹ ಸಾಮಾನ್ಯವಾಗಿತ್ತು. ಎರಡನೇದಿನ ಮೇಳಕ್ಕೆ ಆಗಮಿಸುವವರ ಸಂಖ್ಯೆ ಕಡಿಮೆಯಾಗಿತ್ತು. ಪದವಿ ಓದುತ್ತಿರುವವರು ಹಾಗೂ ಪದವಿ ಶಿಕ್ಷಣ ಮುಗಿಸಿದವರೂ ಮೇಳದಲ್ಲಿ ಪಾಲ್ಗೊಂಡಿದ್ದರು. ಶನಿವಾರ ಮತ್ತು ಭಾನುವಾರದಂದು ಅಭ್ಯರ್ಥಿಗಳು ಸ್ವ ವಿವರದ ಮಾಹಿತಿಯನ್ನು ವಿವಿಧ ಕಂಪನಿಗಳಿಗೆ ನೀಡುತ್ತಿರುವುದು ಕಂಡು ಬಂದಿತು.

ವಿವಿಧ ಕಂಪನಿಗಳ ಭಾಗಿ:

ಉದ್ಯೋಗ ಮೇಳದಲ್ಲಿ ಬೆಂಗಳೂರು, ಹಾವೇರಿ, ಹುಬ್ಬಳ್ಳಿ, ಶಿವಮೊಗ್ಗ, ಧಾರವಾಡ ಜಿಲ್ಲೆಯ
ಆಶೀರ್ವಾದ ಮೈಕ್ರೋಪೈನಾನ್ಸ್, ಎಲ್‍ಐಸಿ ಕಂಪನಿ, ಕೋಟಕ್‌ಬ್ಯಾಂಕ್, ಮೂತ್ತೂಟ್‌ ಮೈಕ್ರೋಫೈನಾನ್ಸ್‌, ಶಿವಲೀಗೇಶ್ವರ ಕಂಪ್ಯೂಟರ ಸೆಂಟರ್, ಆಟೋ ಟ್ರೇಡಿಂಗ್‌ ಕಂಪನಿ, ಎಜೆಜೆಎಂ, ಅಪೋಲೊಹೋಮ್‌ ಹೆಲ್ತ್‌ಕೇರ್‌ ಸೇರಿದಂತೆ 56ಕ್ಕೂ ಹೆಚ್ಚು ಕಂಪನಿಗಳ ಭಾಗವಹಿಸಿದ್ದವು.

ಹಾವೇರಿ ಜಿಲ್ಲೆಯ ಅಭ್ಯರ್ಥಿಗಳು ಸೇರಿದಂತೆ ಉತ್ತರ ಕನ್ನಡ, ಗದಗ, ದಾವಣಗೆರೆ, ಬಾಗಲಕೋಟೆ, ಶಿವಮೊಗ್ಗ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು.

ನಾನೂ ಹಿಂದಿನ ವರ್ಷವೇ ವಾಣಿಜ್ಯಶಾಸ್ತ್ರ ಪದವಿಯನ್ನು ಪೂರೈಸಿದ್ದೆ,ಉದ್ಯೋಗ ಪಡೆಯುವುದಕ್ಕಾಗಿ ಮೇಳಕ್ಕೆಆಗಮಿಸಿದ್ದೆ.ಇದು ನನ್ನ ಮೊದಲ ಸಂದರ್ಶನವಾಗಿದೆ. ಕಂಪನಿಯವರು ಕರೆ ಮಾಡಿ ತಿಳಿಸುವುದಾಗಿ ಹಾವೇರಿಯ ಉದ್ಯೋಗ ಆಕಾಂಕ್ಷಿ ಜಿ.ಕೆ.ಪುನಿತ್‌ ಹೇಳಿದರು.

ಕಂಪನಿಗಳಿಗೆ ಜಿಲ್ಲಾಧಿಕಾರಿ ಸಲಹೆ:

ನೇಮಕಾತಿ ಮಾಡಿಕೊಂಡು ಉದ್ಯೋಗಿಗಳಿಗೆ ಗುಣ ಮಟ್ಟದ ಸೌಲಭ್ಯ ಹಾಗೂ ಉತ್ತಮ ವೇತನ ನೀಡುವಂತೆ ಕಂಪನಿಗಳ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸಲಹೆ ನೀಡಿದರು. ಅಲ್ಲದೆ, ಮುಂದಿನದಿನದಲ್ಲಿ ಹಮ್ಮಿಕೊಳ್ಳುವ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳನ್ನು ಆಹ್ವಾನಿಸಲಾಗುವುದು ಎಂದು ಅಭ್ಯರ್ಥಿಗಳಿಗೆ ಭರವಸೆ ನೀಡಿದರು.

ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಸುಭಾಷ್ ಗೌಡರ, ಕೈಗಾರಿಕಾ ತರಬೇತಿ ಸಹಾಯಕ ನಿರ್ದೇಶಕ ಈಶ್ವರಗೌಡರ ದ್ಯಾಮನಗೌಡರ, ಉದ್ಯೋಗ ವಿನಿಮಯ ಅಧಿಕಾರಿ ತನುಜಾ ರಾಮಪೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT