ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿನಿ ಆತ್ಮಹತ್ಯೆ: ಪ್ರಾಂಶುಪಾಲ, ವಾರ್ಡನ್‌, ಶುಶ್ರೂಷಕಿಗೆ ನೋಟಿಸ್

ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಭೇಟಿ
Published : 11 ಸೆಪ್ಟೆಂಬರ್ 2024, 15:31 IST
Last Updated : 11 ಸೆಪ್ಟೆಂಬರ್ 2024, 15:31 IST
ಫಾಲೋ ಮಾಡಿ
Comments

ಹಾವೇರಿ: ‘ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಸುರಕ್ಷತೆ ದೃಷ್ಟಿಯಿಂದ ರಾಜ್ಯದಲ್ಲಿ ಮಕ್ಕಳ ರಕ್ಷಣಾ ನೀತಿ–2016 ಜಾರಿಗೆ ತರಲಾಗಿದೆ. ಬ್ಯಾಡಗಿಯಲ್ಲಿರುವ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಈ ನೀತಿಯನ್ನು ಅಳವಡಿಸಿಕೊಂಡಿಲ್ಲ. ಹೀಗಾಗಿ, ಶಾಲೆಯ ಪ್ರಾಂಶುಪಾಲ, ವಾರ್ಡನ್ ಹಾಗೂ ಶುಶ್ರೂಷಕಿಗೆ ನೋಟಿಸ್ ನೀಡಲಾಗುವುದು’ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ರೇಖಾ ಗೌಡರ (15) ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ಶಾಲೆಗೆ ಭೇಟಿ ನೀಡಲಾಯಿತು’ ಎಂದರು.

‘ಮಕ್ಕಳ ಸಹಾಯಣಿ– 1098 ಬಗ್ಗೆ ಯಾವುದೇ ಫಲಕಗಳನ್ನು ಅಳವಡಿಸಿಲ್ಲ. ಮಕ್ಕಳ ಕ್ಲಬ್ ರಚನೆ ಮಾಡಿಲ್ಲ. ಅಗತ್ಯವಿರುವ ಕಡೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಮಕ್ಕಳ ಜೊತೆ ಸೌಜನ್ಯದಿಂದ ವರ್ತಿಸುವ ಮನೋಸ್ಥಿತಿಯೂ ಅಲ್ಲಿಯ ಪ್ರಾಂಶುಪಾಲ ಹಾಗೂ ಶಿಕ್ಷಕರಿಗೆ ಇರುವಂತೆ ಕಾಣಿಸಲಿಲ್ಲ. ನೀತಿಯನ್ನು ಕಡ್ಡಾಯವಾಗಿ ಜಾರಿ ಮಾಡಿ ವರದಿ ನೀಡುವಂತೆ ಪ್ರಾಂಶುಪಾಲ, ವಾರ್ಡನ್ ಹಾಗೂ ಶುಶ್ರೂಷಕಿಗೆ ನೋಟಿಸ್ ನೀಡಲಾಗುವುದು’ ಎಂದು ಹೇಳಿದರು.

‘ರೇಖಾ ಗೌಡರ ಅವರ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಹೆಚ್ಚು ಮಾಹಿತಿ ಹಂಚಿಕೊಳ್ಳಲಾಗದು’ ಎಂದರು.

‘ಹಿರೇಕೆರೂರು ತಾಲ್ಲೂಕಿನ ದೂದಿಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಗೌಡಪ್ಪನವರ ಆತ್ಮಹತ್ಯೆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆಯೂ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಾಗದು’ ಎಂದು ತಿಳಿಸಿದರು.

ಪಿಡಿಒಗೆ ನೋಟಿಸ್: ‘ಬ್ಯಾಡಗಿ ತಾಲ್ಲೂಕಿನ ಶಿಡೇನೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಲಾಗಿತ್ತು. ಗ್ರಾಮದಲ್ಲಿ ಮಕ್ಕಳ ಗ್ರಾಮ ಸಭೆ ಮಾಡಿಲ್ಲ. ಕಾವಲು ಸಮಿತಿ ರಚಿಸಿಲ್ಲ. ಗ್ರಾಮದಲ್ಲಿರುವ ಮಕ್ಕಳ ದಾಖಲಾತಿಗಳನ್ನು ನಿರ್ವಹಣೆ ಮಾಡದಿರುವುದು ಗಮನಕ್ಕೆ ಬಂತು. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶಾರದಾ ಕುದರಿ ಅವರಿಗೆ ಕಾರ್ಯನಿರ್ವಾಹಕ ಅಧಿಕಾರಿ ಅವರಿಂದ ನೋಟಿಸ್ ಕೊಡಿಸಲಾಗಿದೆ’ ಎಂದು ಹೇಳಿದರು.

ಅಧಿಕಾರಿಗಳಿಗೆ ಗಡುವು: ‘ಜಿಲ್ಲೆಯಲ್ಲಿ ಬಾಲ ಕಾರ್ಮಿಕರನ್ನು ಪತ್ತೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುವಂತೆ ನಿಯಮವಿದೆ. ಆದರೆ, ಅದು ಗೊತ್ತಿಲ್ಲವೆಂದು ತಹಶೀಲ್ದಾರ್ ಹೇಳುತ್ತಿದ್ದಾರೆ. ಎಲ್ಲ ಅಧಿಕಾರಿಗಳಿಗೂ ಕಾರ್ಯಾಚರಣೆ ನಡೆಸುವಂತೆ ಖಡಕ್ ಸೂಚನೆ ನೀಡಲಾಗಿದೆ. ಕಾರ್ಯಾಚರಣೆ ವರದಿ ನೀಡುವಂತೆ ಗಡುವು ನೀಡಲಾಗಿದೆ’ ಎಂದು ಶೇಖರಗೌಡ ತಿಳಿಸಿದರು.

ಜಿಲ್ಲೆಯ ಪ್ರತಿಯೊಂದು ವಸತಿ ಶಾಲೆಯಲ್ಲಿ ಮಕ್ಕಳ ರಕ್ಷಣಾ ನೀತಿ ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಶೇಖರಗೌಡ ಜಿ. ರಾಮತ್ನಾಳ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ

ಬಾಲ್ಯ ವಿವಾಹ ನಿಯಂತ್ರಣಕ್ಕೆ ಕ್ರಮ: ‘ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷ ಜನವರಿಯಿಂದ ಸೆಪ್ಟೆಂಬರ್ 11ರವರೆಗಡೆ 26 ಬಾಲ್ಯ ವಿವಾಹ ತಡೆಯಲಾಗಿದೆ. ಐದು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದರು.

‘ಬಾಲ್ಯ ವಿವಾಹ ನಿಯಂತ್ರಿಸಲು ಗ್ರಾಮ, ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಸಮಿತಿಗಳಿವೆ. ಆದರೆ, ಅಧಿಕಾರಿಗಳು ಸಮಪರ್ಕವಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಸೂಚನೆ ನೀಡಲಾಗಿದೆ. ಲೋಪವೆಸಗುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು’ ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಅನ್ನಪೂರ್ಣ ಸಂಗಳದ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

‘ಪೊಲೀಸ್ ಠಾಣೆಗಳಲ್ಲಿ ಮಕ್ಕಳ ಸ್ನೇಹಿ ಘಟಕ’

‘ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ‘ಮಕ್ಕಳ ಸ್ನೇಹಿ ಪೊಲೀಸ್ ಘಟಕ’ ತೆರೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಯಮವನ್ನು ಪೊಲೀಸರು ಪಾಲನೆ ಮಾಡಬೇಕು. ಇಲ್ಲದಿದ್ದರೆ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಶೇಖರಗೌಡ ಜಿ. ರಾಮತ್ನಾಳ ಹೇಳಿದರು.

‘ಮಕ್ಕಳಿಗೆ ಸಂಬಂಧಪಟ್ಟ ಪ್ರಕರಣಗಳನ್ನು ಸೂಕ್ಷ್ಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಮಕ್ಕಳ ಪ್ರಕರಣಗಳ ದಾಖಲೆಗಳನ್ನು ಪ್ರತ್ಯೇಕವಾಗಿ ಇರಿಸಬೇಕು. ಜೊತೆಗೆ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಬೇಕು. ಮಕ್ಕಳ ಪ್ರಕರಣಗಳ ಬಗ್ಗೆ ದೂರು ನೀಡಲು ಬರುವವರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಕೆಲ ಶಾಲೆಗಳಲ್ಲಿ ಶಾಲೆಯ ಅವಧಿ ಮುಗಿದ ನಂತರ ಕೆಲವರು ಜೂಜಾಟ ಆಡುತ್ತಿದ್ದಾರೆ. ಮದ್ಯದ ಪಾರ್ಟಿ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಬೀಟ್ ಪೊಲೀಸರು ಇಂಥ ಶಾಲೆಗಳಿಗೆ ಮೇಲಿಂದ ಮೇಲೆ ಭೇಟಿ ನೀಡಿ ಅನೈತಿಕ ಚಟುವಟಿಕೆಗಳನ್ನು ತಡೆಯುವಂತೆ ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT